ಎಸ್ಪಿ ನಾರಾಯಣ ಎಂ. ವರ್ಗ, ದೀಪನ್ ಎಂ.ಎನ್. ನೂತನ ಎಸ್ಪಿ

| Published : Jul 15 2025, 11:45 PM IST

ಎಸ್ಪಿ ನಾರಾಯಣ ಎಂ. ವರ್ಗ, ದೀಪನ್ ಎಂ.ಎನ್. ನೂತನ ಎಸ್ಪಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎಂ. ವರ್ಗಾವಣೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ದೀಪನ್ ಎಂ.ಎನ್. (ಐಎಎಸ್) ನೇಮಕಗೊಂಡಿದ್ದಾರೆ. ನಾರಾಯಣ ಎಂ. ಅವರನ್ನು ಬೆಂಗಳೂರು ಇಲೆಕ್ಟ್ರಾನಿಕ್ಸ್ ಸಿಟಿಯ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಕಾರವಾರ: ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎಂ. ವರ್ಗಾವಣೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ದೀಪನ್ ಎಂ.ಎನ್. (ಐಎಎಸ್) ನೇಮಕಗೊಂಡಿದ್ದಾರೆ. ನಾರಾಯಣ ಎಂ. ಅವರನ್ನು ಬೆಂಗಳೂರು ಇಲೆಕ್ಟ್ರಾನಿಕ್ಸ್ ಸಿಟಿಯ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ದೀಪನ್ ಎಂ.ಎನ್. ರಾಜ್ಯ ಮೀಸಲು ಪೊಲೀಸ್ ಪಡೆಯ ಕಮಾಂಡೆಟ್ ಆಗಿ ಕರ್ತವ್ಯದಲ್ಲಿದ್ದರು. ಪೊಲೀಸ್ ಇಲಾಖೆಗೆ ಹೊಸತನದ ಟಚ್ ನೀಡಿದ ಎಂ. ನಾರಾಯಣ ಶಿರಸಿಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗೋಕಳ್ಳರು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಿದ್ದರು.

ಪೊಲೀಸ್ ಇಲಾಖೆಯಲ್ಲಿ ಚುರುಕು ಮೂಡಿಸಿದ ನಾರಾಯಣ ಎಂ.: ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎಂ. ಜಿಲ್ಲೆಗೆ ಆಗಮಿಸಿದ ಸುಮಾರು ಒಂದು ವರ್ಷದಲ್ಲೇ ವರ್ಗಾವಣೆಗೊಂಡಿದ್ದಾರೆ. ಈ ಸೀಮಿತ ಅವಧಿಯಲ್ಲೇ ಪೊಲೀಸ್ ಇಲಾಖೆಯಲ್ಲಿ ಚುರುಕುತನ ಮೂಡಿಸಿ, ಸಮಾಜಘಾತುಕ ಪ್ರವೃತ್ತಿಗೆ ಕಡಿವಾಣ ಹಾಕಿ, ಅಕ್ರಮ, ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.

ಸಮಾಜಘಾತುಕರು, ದೇಶದ್ರೋಹಿಗಳು, ಗೋಕಳ್ಳರು, ಕೋಮು ಗಲಭೆ ಹುಟ್ಟುಹಾಕಲು ಯತ್ನಿಸುವವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಂಡರು. ಜೂಜು ಅಡ್ಡೆಗಳನ್ನು ಮುಚ್ಚಿದರು. 2-3 ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದಾಗ ಎಸ್‌ಪಿ ಆ ಅಧಿಕಾರಿಗಳ ಬೆಂಬಲಕ್ಕೆ ನಿಂತರು. ಇದರಿಂದ ರೌಡಿಗಳು, ಸಮಾಜಘಾತುಕರು ಪೊಲೀಸ್ ವ್ಯವಸ್ಥೆ ಬಗ್ಗೆ ಭಯಗೊಳ್ಳುವಂತೆ ಮಾಡಿದರು. ಅದರ ಬೆನ್ನಲ್ಲೆ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಅನಾಥವಾದ ನಾಯಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಮಾನವೀಯತೆಯ ಮುಖವನ್ನೂ ಪ್ರದರ್ಶಿಸಿದರು.ಎಸ್ಪಿ ಕಚೇರಿಗೆ ಕಾರ್ಪೊರೇಟ್‌ ಕಚೇರಿಯ ಲುಕ್ ನೀಡಿದರು. ಸರ್ಕಾರಿಂದ ಹಣ ಬಾರದಿದ್ದರೂ ಖಾಸಗಿ ಕಂಪನಿಗಳ ಸಿಎಸ್‌ಆರ್‌ ಅನುದಾನ ಬಳಸಿದರು. ಶಾಸಕರ ನಿಧಿಯಿಂದ ಪೊಲೀಸ್ ಇಲಾಖೆಗೆ ಹೊಸ ವಾಹನಗಳು ಬರುವಂತೆ ಮಾಡಿದರು. ಒಟ್ಟಿನಲ್ಲಿ ಜನರು ಇನ್ನಷ್ಟು ದಿನ ಎಸ್ಪಿ ಇರಬೇಕು ಅಂದುಕೊಳ್ಳುವಾಗಲೆ ಜಿಲ್ಲೆಯಿಂದ ನಿರ್ಗಮಿಸಿದ್ದಾರೆ.