ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಮಕ್ಕಳ ಮೇಲೆ ಯಾವುದೇ ದೌರ್ಜನ್ಯವಾದರೂ ಅದು ಸಾಂವಿಧಾನಿಕವಾದಂತಹ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಎಲ್ಲಾ ಇಲಾಖೆಗಳ ನಡುವೆ ಸಮನ್ವಯ ಇದರಲ್ಲಿ ಪ್ರಾಮುಖ್ಯ ವಹಿಸುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ತಿಳಿಸಿದರು.ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಬಾಲನ್ಯಾಯ ಕಾಯ್ದೆ, ಮಿಷನ್ ವಾತ್ಸಲ್ಯ, ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯುವಿಕೆ ಮುಖ್ಯವಾಗುತ್ತದೆ. ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ವಿರುದ್ಧ ಕ್ರಮಗಳನ್ನು ಯಾವ ಯಾವ ಇಲಾಖೆಗಳು ತೆಗೆದುಕೊಳ್ಳಬೇಕು ಅಂತಾ ಕಾನೂನಿನಲ್ಲಿ ಸೂಚಿಸಲಾಗಿದೆ. ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವಿಕೆಯ ಬಗ್ಗೆ ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಮುಂದೆ ಕಾನೂನನ್ನು ಬಳಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಸಮನ್ವಯತೆ ಮುಖ್ಯ ಎಂದು ಅವರು ಹೇಳಿದರು.ಮಕ್ಕಳೊಂದಿಗೆ ಸಂವೇದನೆ ಶೀಲತೆಯಿಂದ ವರ್ತಿಸಬೇಕು. ಒಂದು ಆ ಸೂಕ್ಷ್ಮತೆಯನ್ನು ನಾವು ಅಳವಡಿಸಕೊಳ್ಳದಿದ್ದರೆ ಮಕ್ಕಳ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತೇವೆ. ನಮಗೆ ಪ್ರತಿನಿತ್ಯ ಕೆಲಸ ಇರುತ್ತದೆ. ಆ ಕೆಲಸದ ಒತ್ತಡದ ನಡುವೆಯೂ ಮಕ್ಕಳ ಮೇಲಿನ ಯಾವುದೇ ಪ್ರಕರಣ ಬಂದರೂ ನಾವು ಅತ್ಯಂತ ಸಂವೇದನಶೀಲತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಸೂಕ್ಷ್ಮ ರೀತಿಯಲ್ಲಿ ತ್ವರಿತವಾಗಿ ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮಕ್ಕಳು ಮತ್ತೊಂದು ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.
ಮಕ್ಕಳ ದೌರ್ಜನ್ಯ ತಡೆಯಲು ಹಲವಾರು ಕಾನೂನುಗಳಿದ್ದರೂ ಎಲ್ಲೋ ಒಂದು ಕಡೆ ನಾವೆಲ್ಲ ಎಡವುತ್ತಿದ್ದೇವೆ. ಒಂದು ತಿಂಗಳ ಹಿಂದೆ ಪಿರಿಯಾಪಟ್ಟಣದಲ್ಲಿ ನಡೆದ ಬಾಲ್ಯ ವಿವಾಹ ಆದಂತಹ ಪ್ರಕರಣದಲ್ಲಿ ಮಕ್ಕಳ ರಕ್ಷಣಾ ಸಮಿತಿ ಆ ಬಾಲ್ಯ ವಿವಾಹ ತಡೆಯಲು ಎಫ್ಐಆರ್ ಹಾಕಲು ಕ್ರಮ ಕೈಗೊಳ್ಳಿ ಎಂದು ತಿಳಿಸಿದರೂ ದೇವಸ್ಥಾನ ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಹೇಳಿದ ಪಿರಿಯಾಪಟ್ಟಣ ಪೋಲಿಸ್ ಅವರು ಹುಣಸೂರು ಪೋಲಿಸ್ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂದು ಮಾಹಿತಿ ನೀಡಿದ್ದರು. ಆದರೆ ಎಫ್ಐಆರ್ ಮಾತ್ರ ಆಗುವುದಿಲ್ಲ. ಮೈಸೂರಿನಂತಹ ಪ್ರದೇಶಗಳಲ್ಲಿ ಹೀಗೆ ಆಗುತ್ತಿರುವುದು ಆಘಾತಕಾರಿ ಎಂದು ಅವರು ಹೇಳಿದರು.ಕಾನೂನು ಸಿ.ಆರ್.ಪಿ.ಸಿ, ಜೆಜೆ ಆ್ಯಕ್ಟ್, ಪೊಕ್ಸೊ ಕಾಯ್ದೆ ಇರಬಹುದು, ಸುಪ್ರೀಂಕೋರ್ಟ್ ತೀರ್ಪುಗಳು ಯಾವುದೇ ಮಾಹಿತಿ ಬಂದರೆ ಪ್ರಕರಣ ತ್ವರಿತವಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಬೇಕೆಂದು ಹೇಳಿದೆ ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್. ಮಂಜು, ಡಿಸಿಪಿ ಎಸ್. ಜಾಹ್ನವಿ, ಹೆಚ್ಚುವರಿ ಎಸ್ಪಿ ಡಾ.ಬಿ.ಎನ್. ನಂದಿನಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಈ. ಧನಂಜಯ ಎಲಿಯೂರು, ಮಕ್ಕಳ ವಿಶೇಷ ಪೊಲೀಸ್ ಘಟಕದ ಜಿ.ಎಸ್. ಪ್ರಸನ್ನಕುಮಾರ್ ಮೊದಲಾದವರು ಇದ್ದರು.----
ಕೋಟ್...ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಚಿಕ್ಕಮಕ್ಕಳು ಸಸಿಗಳಿದ್ದಹಾಗೆ. ಗಿಡಗಳಿಗೆ ಯಾವ ರೀತಿ ಪೋಷಣೆ ಮಾಡಿ ಬೆಳೆಸುತ್ತೇವೆಯೋ ಹಾಗೆಯೇ ಮಕ್ಕಳನ್ನು ಬೆಳೆಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಅಧಿಕಾರಿಗಳು ಕ್ರಿಯಾಶೀರಾಗಿ ಕಾರ್ಯನಿರ್ವಹಿಸಬೇಕು.
- ಎಸ್. ಮಂಜು, ಸದಸ್ಯೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ