ಕಿಡ್ನಾಪ್ ಕೇಸು ಬೇಧಿಸಿದ ಎಸ್ಪಿಗೆ ಪ್ರಶಂಸೆಯ ಸುರಿಮಳೆ

| Published : Feb 01 2025, 12:01 AM IST

ಕಿಡ್ನಾಪ್ ಕೇಸು ಬೇಧಿಸಿದ ಎಸ್ಪಿಗೆ ಪ್ರಶಂಸೆಯ ಸುರಿಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಪಿ ಬಳ್ಳಾರಿಗೆ ಬಂದು ಅಧಿಕಾರ ವಹಿಸಿಕೊಂಡ ಬಳಿಕ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚಿಸಿದ್ದಾರೆ.

ಬಳ್ಳಾರಿ: ನಗರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಸ್ಪತ್ರೆಯ ವೈದ್ಯ ಡಾ.ಸುನೀಲಕುಮಾರ್ ಕಿಡ್ನಾಪ್ ಪ್ರಕರಣವನ್ನು ಸಮರ್ಥವಾಗಿ ಭೇದಿಸಿ, ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಎಸ್ಪಿ ಡಾ.ಶೋಭಾರಾಣಿ ಅವರನ್ನು ನಗರದ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.ಇದೇ ವೇಳೆ ಮಾತನಾಡಿದ ವಿವಿಧ ಸಮುದಾಯದ ಮುಖಂಡರು, ಜಿಲ್ಲಾಸ್ಪತ್ರೆಯ ವೈದ್ಯ ಡಾ.ಸುನೀಲಕುಮಾರ್ ಕಿಡ್ನಾಪ್ ಪ್ರಕರಣದಿಂದ ಇಡೀ ಬಳ್ಳಾರಿ ನಗರ ಬೆಚ್ಚಿಬಿದ್ದಿತ್ತು. ನಗರದಲ್ಲಿ ಕಾನೂನು ಸುವ್ಯವಸ್ಥೆಯ ಹದಗೆಡುತ್ತಿದೆ ಎಂಬ ಗುಮಾನಿ ಮೂಡಿತ್ತು. ಆದರೆ, ಎಸ್ಪಿ ಡಾ.ಶೋಭಾರಾಣಿ ಕಿಡ್ನಾಪ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದರು. ಅಲ್ಲದೆ, ಎಲ್ಲ ಆರೋಪಿಗಳನ್ನು ಬಂಧಿಸುವ ಮೂಲಕ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದ್ದಾರೆ.

ಎಸ್ಪಿ ಬಳ್ಳಾರಿಗೆ ಬಂದು ಅಧಿಕಾರ ವಹಿಸಿಕೊಂಡ ಬಳಿಕ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚಿಸಿದ್ದಾರೆ. ಕೆಲವು ಕ್ಲಿಷ್ಟ ಪ್ರಕರಣಗಳನ್ನು ಭೇದಿಸುವ ಮೂಲಕ ಬಳ್ಳಾರಿ ಜನತೆಯಲ್ಲಿ ವಿಶ್ವಾಸ ಮೂಡಿಸಿದ್ದಾರೆ ಎಂದು ಶ್ಲಾಘಿಸಿದರು.

ರೆಡ್ಡಿ ಜನಸಂಘದ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಮಾತನಾಡಿ, ವೈದ್ಯ ಸುನೀಲಕುಮಾರ್ ಕಿಡ್ನಾಪ್ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಇಡೀ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ 11 ತಾಸಿನೊಳಗೆ ವೈದ್ಯರನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ. ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾವುದೇ ಜಾತಿ, ಧರ್ಮ ಎನ್ನದೇ ಎಲ್ಲರೂ ಆಗಮಿಸಿ, ಪೊಲೀಸರ ಕಾರ್ಯವನ್ನು ಶ್ಲಾಘಿಸಿರುವುದು ನಿಜಕ್ಕೂ ಸಂತಸ ತಂದಿದೆ. ಯಾರಿಗೆ ಏನಾದರೂ ಪಕ್ಷ, ಜಾತಿ, ಧರ್ಮಭೇದ ಮರೆತು ಒಗ್ಗಟ್ಟಾಗಬೇಕು. ಬಳ್ಳಾರಿ ಸುವ್ಯವಸ್ಥೆಯಲ್ಲಿರಲು ಒಂದಾಗಬೇಕು ಎಂದು ಮನವಿ ಮಾಡಿದರು.

ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್ಪಿ ಶೋಭಾರಾಣಿ, ಕಿಡ್ನಾಪ್ ಪ್ರಕರಣ ಭೇದಿಸಿದ ಬಳಿಕ ತುಂಬ ಜನರು ಬಂದು ಪೊಲೀಸ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಪೊಲೀಸರು ಸಾರ್ವಜನಿಕರ ಜೀವ ಹಾಗೂ ಆಸ್ತಿ-ಪಾಸ್ತಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಕೆಲಸವನ್ನು ಶ್ಲಾಘಿಸಿ ಸಾರ್ವಜನಿಕರಿಂದ ಪ್ರತಿಕ್ರಿಯೆ ಬಂದಾಗ ಪೊಲೀಸರಿಗೆ ಮತ್ತಷ್ಟ ಹುಮ್ಮಸ್ಸು ಬರುತ್ತದೆ. ಕರ್ತವ್ಯ ಪ್ರಜ್ಞೆಯೂ ಹೆಚ್ಚುತ್ತದೆ. ಪಕ್ಷ ಹಾಗೂ ಜಾತಿಭೇದ ಮರೆತು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕೃತಜ್ಞತೆ ಸಲ್ಲಿಸಿರುವುದು ಸಂತಸ ತಂದಿದೆ. ನನ್ನ ಕಣ್ಣಾಲಿಗಳು ತುಂಬಿ ಬಂದಿವೆ. ನಿಮ್ಮ ಪ್ರೀತಿ-ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ಜನರ ವಿಶ್ವಾಸವನ್ನು ಪೊಲೀಸರು ಖಂಡಿತ ಉಳಿಸಿಕೊಳ್ಳುವರು ಎಂದರು.

ಬಳ್ಳಾರಿ ಜಿಲ್ಲೆಯ ಜನರ ನಿರೀಕ್ಷೆಯಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮ ವಹಿಸಲಾಗುವುದು ಎಂದು ಎಸ್ಪಿ ಡಾ.ಶೋಭಾರಾಣಿ ಭರವಸೆ ನೀಡಿದರು.

ಆರ್ಯವೈಶ್ಯ ಸಂಘದ ಅಧ್ಯಕ್ಷ ನಾಮಾ ನಾಗರಾಜ್, ಕಮ್ಮಾಜನ ಸಂಘದ ಅಧ್ಯಕ್ಷ ಮುಂಡ್ಲೂರು ಅನೂಪಕುಮಾರ್, ಕುರುಬರ ಸಂಘದ ಅಧ್ಯಕ್ಷ ಗಾದಿಲಿಂಗನಗೌಡ, ಕಲ್ಲುಕಂಬ ಪಂಪಾಪತಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಕಾಶರಾವ್, ನರಸಿಂಹಮೂರ್ತಿ, ವಿನಯ ಕುಲಕರ್ಣಿ, ವಾಲ್ಮೀಕಿ ಸಂಘದ ಅಧ್ಯಕ್ಷ ರಾಮಪ್ರಸಾದ್, ಮುಸ್ಲಿಂ ಸಮುದಾಯದ ಮುಖಂಡರಾದ ಹುಮಾಯೂನ್ ಖಾನ್, ರಜಾಕಸಾಬ್, ಅಬ್ದುಲಸಾಬ್, ಮಹ್ಮದ್ ರಫೀಕ್, ಕಾಸೀಂಸಾಬ್, ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಧನುಂಜಯಕುಮಾರ್, ಪಾಲಿಕೆ ಸದಸ್ಯರಾದ ಪೇರಲ ವಿಕ್ಕಿ, ಗುಡಿಗಂಟಿ ಹನುಮಂತಪ್ಪ, ಗೋವಿಂದರಾಜು, ಬಿಜೆಪಿ ಮುಖಂಡ ಕೆ.ಎಸ್. ದಿವಾಕರ, ಕಮ್ಯುನಿಷ್ಟ್ ಪಕ್ಷದ ಮುಖಂಡರಾದ ಸತ್ಯಬಾಬು, ಚಂದ್ರಕುಮಾರಿ, ಹೋಟೆಲ್ ಮಾಲೀಕರ ಸಂಘದ ಪೋಲಾ ರಾಧಾಕೃಷ್ಣ, ಆರ್ಯವೈಶ್ಯ ಸಂಘದ ಮಾರುತಿ ಪ್ರಸಾದ್, ವೀರೇಂದ್ರ ರಾವಿಹಾಳ್, ಚಂದ್ರಶೇಖರ್ ಆಚಾರ್ ಕಪ್ಪಗಲ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಜಿಲ್ಲಾ ಪೊಲೀಸ್ ವೆಲ್‌ಫೇರ್ ಅಸೋಸಿಯೇಶನ್‌ಗೆ ಕಮ್ಮ ಸಂಘ, ರೆಡ್ಡಿಜನ ಸಂಘ, ಆರ್ಯವೈಶ್ಯ ಸಂಘದಿಂದ ತಲಾ ಒಂದೊಂದು ಲಕ್ಷ ರು. ಚೆಕ್ ನೀಡಲಾಯಿತು.