ಅನಕ್ಷರಸ್ಥರು ಉದ್ಯಮ ನಡೆಸಲು ಬಾಹ್ಯಾಕಾಶ ವಿಜ್ಞಾನ ನೆರವು

| Published : Aug 10 2024, 01:33 AM IST

ಅನಕ್ಷರಸ್ಥರು ಉದ್ಯಮ ನಡೆಸಲು ಬಾಹ್ಯಾಕಾಶ ವಿಜ್ಞಾನ ನೆರವು
Share this Article
  • FB
  • TW
  • Linkdin
  • Email

ಸಾರಾಂಶ

ಬಾಹ್ಯಾಕಾಶ ವಿಜ್ಞಾನದಿಂದ ಯಾವ ಜಾಗದಲ್ಲಿ ಸೈಕ್ಲೋನ್‌ ಬರುತ್ತದೆ, ಯಾವಾಗ ಬರುತ್ತದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಬಹುದಾಗಿದೆ

ಗದಗ: ಓದಲು ಬರೆಯಲು ಬಾರದ ಅನಕ್ಷರಸ್ಥ ವ್ಯಕ್ತಿ ಕೂಡ ತನ್ನ ದೈನಂದಿನ ಉದ್ಯಮವನ್ನು ಸುಸೂತ್ರವಾಗಿ ನಡೆಸಲು ಬಾಹ್ಯಾಕಾಶ ವಿಜ್ಞಾನ ನೆರವಾಗಿದೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌ ಹೇಳಿದರು.

ಅವರು ಶುಕ್ರವಾರ ಗದಗ ನಗರದ ಪಂಡಿತ್‌ ಭೀಮಸೇನ್‌ ಜೋಶಿ ರಂಗಮಂದಿರದಲ್ಲಿ ಇಸ್ರೊದ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರವು (ಎಚ್‌ಎಸ್‌ಎಫ್‌ಸಿ) ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಫುಲ ಅವಕಾಶ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಬಾಹ್ಯಾಕಾಶ ವಿಜ್ಞಾನದಿಂದ ಯಾವ ಜಾಗದಲ್ಲಿ ಸೈಕ್ಲೋನ್‌ ಬರುತ್ತದೆ,ಯಾವಾಗ ಬರುತ್ತದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಬಹುದಾಗಿದೆ. ಇದರಿಂದ ಸಾವಿರಾರು ಜನರ ಜೀವರಕ್ಷಣೆ ಆಗಿದೆ. ಉಪಗ್ರಹಗಳ ನೆರವಿನಿಂದ ಮೀನಿನ ಆಹಾರ ಸರಪಳಿ ಹುಡುಕಿ ಯಾವ ಜಾಗದಲ್ಲಿ ಮೀನು ಸಿಗುತ್ತದೆ ಎಂಬುದನ್ನು ನಿಖರವಾಗಿ ತಿಳಿಸಲು ಸಾಧ್ಯವಾಗಿದೆ. ನಮ್ಮ ದೇಶದಲ್ಲಿ 7500 ಕಿ.ಮೀ.ಕರಾವಳಿ ಪ್ರದೇಶ, ಲಕ್ಷಾಂತರ ಮೀನುಗಾರಿದ್ದು, ಬಾಹ್ಯಾಕಾಶ ವಿಜ್ಞಾನದಿಂದ ವರ್ಷಕ್ಕೆ 15 ಸಾವಿರ ಕೋಟಿ ಇಂಧನ ವೆಚ್ಚ ಕಡಿಮೆ ಆಗಿದೆ. ಅದೇರೀತಿ, ನಾವಿಕ್‌ ತಂತ್ರಜ್ಞಾನದಿಂದ ಅವರಿಗೆ ಸಾಕಷ್ಟು ಅನುಕೂಲ ಆಗಿದೆ ಎಂದರು.

ಪ್ರಪಂಚದಲ್ಲಿ ಭಾರತ ಮಾತ್ರ ಬಾಹ್ಯಾಕಾಶ ವಿಜ್ಞಾನವನ್ನು ಮಿಲಿಟರಿಯೇತರ ಉದ್ದೇಶಕ್ಕೆ ಪ್ರಾರಂಭಿಸಿತು. ಆದರೆ, ಉಳಿದೆಲ್ಲ ರಾಷ್ಟ್ರಗಳು ತಮ್ಮ ಮಿಲಿಟರಿ ಸಾಮರ್ಥ್ಯ ವೃದ್ಧಿಗಾಗಿ ಬಾಹ್ಯಾಕಾಶ ಕೆಲಸ ಶುರು ಮಾಡಿದ್ದವು, ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಕ್ಷೇತ್ರ ಬೆಳೆಯಬೇಕಾದರೆ ಸ್ಪೇಸ್‌ ಟೂರಿಸಂ, ಸ್ಪೇಸ್‌ ಅಡ್ವೆಂಚರ್‌ ಚಟುವಟಿಕೆಗಳು ಸೇರಿದಂತೆ ಹೊಸ ಆವಿಷ್ಕಾರಗಳು ಆಗಬೇಕಿದೆ. ಅದಕ್ಕಾಗಿ ಯುವಜನರು ಬಾಹ್ಯಾಕಾಶ ವಿಜ್ಞಾನದತ್ತ ಹೆಚ್ಚಿನ ಒಲವು ಬೆಳೆಸಿಕೊಂಡು ಇತರರು ಈವರೆಗೆ ಮಾಡದ ಆವಿಷ್ಕಾರ ಮಾಡಬೇಕಿದೆ ಎಂದರು.

ಇಸ್ರೊ ವಿಜ್ಞಾನಿ ಆರ್‌.ವಿ. ನಾಡಗೌಡ ಮಾತನಾಡಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೇರಳ ಅವಕಾಶಗಳಿವೆ. ಸದ್ಯ ಬಾಹ್ಯಾಕಾಶ ಉದ್ಯಮ ₹40 ಲಕ್ಷ ಕೋಟಿಗಳಷ್ಟಿದ್ದು, ಇದರಲ್ಲಿ ಭಾರತದ ಪಾಲು ಶೇ.2ರಷ್ಟು ಮಾತ್ರ. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 650 ಕೈಗಾರಿಕೆಗಳು ತೊಡಗಿಸಿಕೊಂಡಿವೆ. ಇವೆಲ್ಲವೂ ಇಸ್ರೊ ಸಂಸ್ಥೆ ಅವಲಂಬಿಸಿವೆ. ಆದರೆ, ಅವಕಾಶಗಳು ವಿಫುಲವಾಗಿರುವುದರಿಂದ ಯುವಜನರು ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ತಳೆದು ಇದರ ಸದುಯೋಗ ಪಡೆದರೆ ದೇಶ ಅಭಿವೃದ್ಧಿ ಸಾಧಿಸುತ್ತದೆ ಎಂದರು.

ಇಸ್ರೊದ ಯು.ಆರ್‌. ರಾವ್‌. ಸ್ಯಾಟಲೈಟ್‌ ಸೆಂಟರ್‌ನ ನಿರ್ದೇಶಕ ಎಂ. ಶಂಕರನ್‌ ಮಾತನಾಡಿ, ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ಮಾದರಿಯಲ್ಲಿ ಆಚರಿಸಬೇಕು ಎಂದು ತಿಳಿಸಿದರು.

ಚಂದ್ರಯಾನ–3 ಯಶಸ್ಸಿನ ನೆನಪಿನಲ್ಲಿ ಬಾಹ್ಯಾಕಾಶ ದಿನ ಆಚರಿಸಲಾಗುತ್ತಿದೆ. ಚಂದ್ರಯಾನ–3 ಮುಗಿದಿದೆ. ಮುಂದೇನು ಮಾಡಬೇಕು ? ಇಂತಹ ಇನ್ನೂ ನೂರಾರು ಹೊಸ ಹೊಸ ಯೋಜನೆಗಳಿಗೆ ಈ ಕಾರ್ಯಕ್ರಮ ಸ್ಫೂರ್ತಿ ಆಗಬೇಕು. ಅದಕ್ಕಾಗಿ ಯುಜನರು ಸಜ್ಜಾಗಬೇಕು ಎಂದು ತಿಳಿಸಿದರು.

ಎನ್.ಎಸ್. ಗೋವಿಂದರಾಜು ಎಚ್.ಎಸ್.ಎಫ್.ಸಿ.ಇಸ್ರೋ ಬೆಂಗಳೂರು, ಆರ್.ಅನಿತಾ ನಂದಿನಿ (ಭಾರತೀಯ ವಿದೇಶಾಂಗ ಸೇವೆ), ನಿರ್ದೇಶಕರು, ಅಂತಾರಾಷ್ಟ್ರೀಯ ಸಹಕಾರ ಮತ್ತು ನೀತಿ, ಬಾಹ್ಯಾಕಾಶ ಇಲಾಖೆ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಪ್ರೊ. ಡಾ. ಸುರೇಶ ವಿ. ನಾಡಗೌಡರ ಕುಲಪತಿ (ಪ್ರಭಾರ) ಮತ್ತು ಕುಲಸಚಿವ ಗ್ರಾಮೀಣಾಭಿವೃದ್ದಿ ವಿವಿ. ಜಿಪಂ ಸಿಇಓ ಭರತ್ ಎಸ್, ಎಸ್ಪಿ ಬಿ.ಎಸ್.ನೇಮಗೌಡ್ರ, ಕೆ.ಕುಮಾರ್, ಸಹನಿರ್ದೇಶಕರು ಎಚ್.ಎಸ್.ಎಫ್.ಸಿ. ಇಸ್ರೋ, ಕೆ. ಜಿ. ವಿನೋದ್ ಅಧ್ಯಕ್ಷರು, ಉಪಸಮಿತಿ, ರಾಷ್ಟ್ರೀಯ ಬಾಹ್ಯಾಕಾಶ ದಿನ, ಇಸ್ರೋ, ಬೆಂಗಳೂರು, ರಾಜೇಂದ್ರ ಸಿಂಗ್ ಬ್ಯಾಳಿ, ಗ್ರೂಪ್ ನಿರ್ದೇಶಕರು ಇಸ್ರೋ, ಡಿಸಿಎಫ್ ಲೇಖರಾಜ್ ಮೀನಾ, ಗ್ರಾಮೀಣಾಭಿವೃದ್ದಿ ಹಣಕಾಸು ಅಧಿಕಾರಿ ಪ್ರಶಾಂತ ಜೆ.ಸಿ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.