ಸಾರಾಂಶ
ಬೆಂಗಳೂರು : ಮುಂದಿನ 5 ವರ್ಷಗಳಲ್ಲಿ ರಾಜ್ಯದ ಬಾಹ್ಯಾಕಾಶ ವಲಯಕ್ಕೆ 3 ಶತಕೋಟಿ ಡಾಲರ್ ಹೂಡಿಕೆಯನ್ನು (ಅಂದಾಜು 25000 ಕೋಟಿ ರು.) ಆಕರ್ಷಿಸುವ ಗುರಿಯನ್ನು ಹೊಂದಿದ ನೂತನ ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2024-29’ರ ಕರಡು ವರದಿಯನ್ನು ಐಟಿ-ಬಿಟಿ ಇಲಾಖೆ ಬಿಡುಗಡೆ ಮಾಡಿದೆ.
ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ 27ನೇ ಬೆಂಗಳೂರು ಟೆಕ್ ಸಮ್ಮಿಟ್‌ನ 2ನೇ ದಿನದಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಇಸ್ರೋ ಅಧ್ಯಕ್ಷ ಡಾ. ಎಸ್.ಸೋಮನಾಥ್, ಡಿಆರ್‌ಡಿಒ ನಿರ್ದೇಶಕ ಡಾ. ಬಿ.ಕೆ.ದಾಸ್ ಕರಡು ನೀತಿಯನ್ನು ಬಿಡುಗಡೆ ಮಾಡಿದರು.
ಬಾಹ್ಯಾಕಾಶ ವಲಯದಲ್ಲಿ ಉದ್ಯೋಗ ಸೃಷ್ಟಿಯ ಜತೆಗೆ ಉದ್ಯೋಗಾವಶವನ್ನು ಸದುಪಯೋಗಪಡಿಸಿಕೊಳ್ಳುವುದು ಸೇರಿ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಅಂಶಗಳು ಬಾಹ್ಯಾಕಾಶ ತಂತ್ರಜ್ಞಾನ ನೀತಿ 2024-29ರ ಕರಡಿನಲ್ಲಿದೆ. ಅಲ್ಲದೆ, ರಾಷ್ಟ್ರೀಯ ಮಾರುಕಟ್ಟೆಯ ಶೇ. 50ರಷ್ಟು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಶೇ.5ರಷ್ಟು ಪಾಲನ್ನು ರಾಜ್ಯ ಹಿಡಿದಿಟ್ಟುಕೊಳ್ಳುವ ಉದ್ದೇಶದೊಂದಿಗೆ ನೂತನ ನೀತಿ ಸಿದ್ಧಪಡಿಸಲಾಗಿದೆ.
ಪ್ರಮುಖವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ನಿಪುಣರನ್ನು ಸಿದ್ಧಪಡಿಸಲು 1,500 ವಿದ್ಯಾರ್ಥಿನಿಯರು ಸೇರಿ ಒಟ್ಟು 5000 ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ನೀಡುವುದಾಗಿ ಕರಡು ನೀತಿಯಲ್ಲಿ ತಿಳಿಸಲಾಗಿದೆ. ಅದರ ಜತೆಗೆ ರಾಜ್ಯದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 3 ಶತಕೋಟಿ ಡಾಲರ್ ಬಂಡವಾಳ ಆಕರ್ಷಿಸುವುದು ಸೇರಿದಂತೆ ಹಲವು ಅಂಶವನ್ನು ಹೇಳಲಾಗಿದೆ.
ಮಾನವ ಸಹಿತ ಗಗನಯಾನ ಕೆಲಸ ಶೀಘ್ರ ಆರಂಭ: ಡಾ.ಎಸ್.ಸೋಮನಾಥ್
ಚಂದ್ರಯಾನ 3, ಆದಿತ್ಯ ಎಲ್1 ನಂತರ ಮಾನವ ಸಹಿತ ಗಗನಯಾನ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಂಡಿದ್ದು, 2025ರ ಜನವರಿಯಿಂದ ಲಾಂಚ್ ವೆಹಿಕಲ್ ಮಾರ್ಕ್ 3 ರಾಕೆಟ್ ಜೋಡಣೆ ಕಾರ್ಯ ಆರಂಭವಾಗಲಿದೆ. 2028ಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡಲಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಡಾ. ಎಸ್.ಸೋಮನಾಥ್ ತಿಳಿಸಿದರು.
ಬೆಂಗಳೂರು ಅರಮನೆಯಲ್ಲಿ ಆಯೋಜಿಸಲಾಗಿರುವ 27ನೇ ಬೆಂಗಳೂರು ತಂತ್ರಜ್ಞಾನ ಶೃಂಗದ ಎರಡನೇ ದಿನದಂದು ‘ಬಾಹ್ಯಾಕಾಶ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರ’ ವಿಷಯಕ್ಕೆ ಸಂಬಂಧಿಸಿದ ಸಂವಾದದಲ್ಲಿ ಮಾತನಾಡಿದ ಡಾ. ಸೋಮನಾಥ್, ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಪೂರ್ವ ತಯಾರಿ ಆರಂಭಿಸಿದೆ. ಅದಕ್ಕಾಗಿ ಜನವರಿಯಿಂದ ರಾಕೆಟ್ ಜೋಡಣೆ ಕಾರ್ಯ ಆರಂಭಿಸಲಾಗುತ್ತಿದ್ದು, ಒಂದು ವರ್ಷದಲ್ಲಿ ಆ ಕಾರ್ಯ ಪೂರ್ಣಗೊಳಿಸಲಾಗುವುದು. ಅದಾದ ನಂತರ ಮಾನವ ಸಹಿತ ಗಗನಯಾನ ಯೋಜನೆಗೆ ಸಂಬಂಧಿಸಿದ ಉಳಿದ ಕೆಲಸಗಳನ್ನು ಆರಂಭಿಸಲಾಗುವುದು ಎಂದರು.2040ಕ್ಕೆ ಚಂದ್ರನ ಮೇಲೆ ಮಾನವ:ಮಾನವ ಸಹಿತ ಗಗನಯಾನಕ್ಕೆ ಸಂಬಂಧಿಸಿದಂತೆ 2028ಕ್ಕೆ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಪೂರ್ಣಗೊಳಿಸಲಾಗುವುದು.
ಗರಿಷ್ಠ 6 ಮಂದಿ ಕೆಲಸ ಮಾಡುವ ಸಾಮರ್ಥ್ಯದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಾಗುವುದು. ಆ ಬಾಹ್ಯಾಕಾಶ ನಿಲ್ದಾಣದಿಂದ ಮಾನವ ಸಹಿತ ಗಗನಯಾನವನ್ನು ಸಫಲಗೊಳಿಸಲಾಗುವುದು. 2040ರ ವೇಳೆಗೆ ಚಂದ್ರನ ಮೇಲೆ ಮಾನವನನ್ನು ಇಳಿಸುವ ಗುರಿ ಹೊಂದಲಾಗಿದೆ. ಈ ಯೋಜನೆಗೆ ರಷ್ಯಾ, ಯೂರೋಪ್ ದೇಶಗಳು ನೆರವು ನೀಡುತ್ತಿದ್ದು, ಇದೀಗ ಅಮೆರಿಕಾ ಕೂಡ ಸಹಭಾಗಿತ್ವ ವಹಿಸುತ್ತಿದೆ ಎಂದು ಡಾ. ಸೋಮನಾಥ್ ಮಾಹಿತಿ ನೀಡಿದರು.
2047ರ ವೇಳೆ ಶೇ.15 ಆರ್ಥಿಕತೆ ಪಾಲು:ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಅದ್ವಿತೀಯ ಸಾಧನೆ ಮಾಡುತ್ತಿದೆ. ಆದರೂ, ಸದ್ಯ ವಿಶ್ವದ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಶೇ.2ರಷ್ಟು ಪಾಲನ್ನು ಮಾತ್ರ ಹೊಂದಿದೆ. 2047ರೊಳಗೆ ಅದನ್ನು ಶೇ.15ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಅದಕ್ಕೆ ಸ್ಟಾರ್ಟಪ್‌ಗಳ ಪಾತ್ರ ಬಹು ಮುಖ್ಯವಾಗಿದೆ. 2014ರಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಕೇವಲ 1 ಸ್ಟಾರ್ಟಪ್ ಮಾತ್ರ ಇತ್ತು. ಅದೇ ಈಗ 250ಕ್ಕೂ ಹೆಚ್ಚಿನ ಸ್ಟಾರ್ಟಪ್, 450ಕ್ಕೂ ಹೆಚ್ಚಿನ ಕೈಗಾರಿಕೆಗಳಿವೆ. ಅಲ್ಲದೆ, 2023ರಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 1 ಸಾವಿರ ಕೋಟಿ ರು. ಬಂಡವಾಳ ಹೂಡಿಕೆಯಾಗಿದೆ ಎಂದು ಡಾ. ಸೋಮನಾಥ್ ತಿಳಿಸಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ದೇಶಕ ಡಾ. ಬಿ.ಕೆ.ದಾಸ್ ಮಾತನಾಡಿ, ರಕ್ಷಣಾ ತಂತ್ರಜ್ಞಾನದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಸೂಪರ್ ಪವರ್ ಆಗಿ ರೂಪಾಂತರಗೊಳ್ಳುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಮುಂದಿನ 10 ವರ್ಷಗಳಲ್ಲಿ 138 ಬಿಲಿಯನ್ ಡಾಲರ್ ಹೂಡಿಕೆ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದರು.
ರಾಕೆಟ್ ಸಿದ್ಧಪಡಿಸುವವರಿಗೆ ಕಾರಿನ ಸೆನ್ಸರ್ ಉತ್ಪಾದಿಸಲಾಗದೇ?ನಮ್ಮಲ್ಲಿ ರಾಕೆಟ್‌ಗಳಿಗೆ ಸೆನ್ಸರ್ ಉತ್ಪಾದಿಸಲಾಗುತ್ತದೆ. ಆದರೆ, ಕಾರುಗಳ ಸೆನ್ಸರ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದು ನಿಲ್ಲಬೇಕು. ಕಾರು ಸೆನ್ಸರ್ ಆಮದು ನಿಲ್ಲಿಸಬೇಕು. ಇದೇ ರೀತಿ ಹಲವು ತಂತ್ರಜ್ಞಾನ ಮತ್ತು ಉತ್ಪಾದನೆಗಳನ್ನು ಬೇರೆ ದೇಶಗಳಿಂದ ತರಿಸಲಾಗುತ್ತಿದೆ. ನಮ್ಮ ಸಾಮರ್ಥ್ಯವನ್ನರಿತು ಇಲ್ಲಿಯೇ ಉತ್ಪಾದಿಸುವತ್ತ ಚಿತ್ತಹರಿಸಬೇಕು ಎಂದು ಡಾ. ಸೋಮನಾಥ್ ಹೇಳಿದರು.