ಕನ್ನಡಪ್ರಭ ವಾರ್ತೆ ಹೊಸದುರ್ಗ

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಹೇಳಿಕೆಗಳ ನೀಡುವಾಗ ವಾಸ್ತವಾಂಶ ಅರಿಯುವುದು ಉತ್ತಮ. ಅನಗತ್ಯವಾಗಿ ಗೊಂದಲ ಮೂಡಿಸುವ ಕೆಲಸಗಳ ಯಾರೂ ಮಾಡಬಾರದೆಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ವಿಪ ಸದಸ್ಯ ನವೀನ್ ವಿರುದ್ಧ ಹರಿಹಾಯ್ದರು. ಇತ್ತೀಚಿಗೆ ಮಾಧ್ಯಮಗಳ ಮೂಲಕ ಹೇಳಿಕೆ ನೀಡುವವರು ಹೆಚ್ಚಾಗಿದ್ದಾರೆ. ಅಂತವರ ಹೇಳಿಕೆಗಳಿಗೆಲ್ಲಾ ಉತ್ತರ ನೀಡುವ ಅಗತ್ಯವಿಲ್ಲ. ಆದರೂ ತಾಲೂಕಿನ ಜನತೆಗೆ ವಾಸ್ತವಾಂಶ ಮನವರಿಕೆ ಮಾಡಿಕೊಡುವುದು ನಮ್ಮ ಕರ್ತವ್ಯವೆಂದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗ ಶಾಖಾಕಾಲುವೆ ಮೂಲಕ ತಾಲೂಕಿನ ಕಸಬಾ ಹಾಗೂ ಮಾಡದಕೆರೆ ಹೋಬಳಿಯ ಒಟ್ಟು 75 ಕೆರೆಗಳು ಸೇರಿದಂತೆ 34,392 ಹೆಕ್ಟೇರ್ ಪ್ರದೇಶಕ್ಕೆ ₹1,568 ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಕಲ್ಪಿಸುವ ಯೋಜನೆ ಸಿದ್ಧಗೊಂಡಿದ್ದು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹಾಗೆಯೇ ತುಮಕೂರು ಶಾಖಾ ಕಾಲುವೆ ಮೂಲಕ ಶ್ರೀರಾಂಪುರ ಹಾಗೂ ಮತ್ತೋಡು ಹೋಬಳಿಯ 24 ಕೆರೆಗಳಿಗೆ ನೀರು ಒದಗಿಸುವ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ₹411 ಕೋಟಿ ವೆಚ್ಚದ ಯೋಜನೆ ಸಿದ್ದವಿದೆ. ತುಮಕೂರು ನಾಲೆ ಹಾದು ಹೋಗುವ ಪ್ರದೇಶದಲ್ಲಿ ಕಡೂರು ತಾಲೂಕಿನ ರೈತರು ಅಡ್ಡಿ ಪಡಿಸಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ಶ್ರೀರಾಂಪುರ ಹೋಬಳಿಯ 9, ಮತ್ತೋಡು ಹೋಬಳಿಯ 15 ಹಾಗೂ ಮಾಡದಕೆರೆ ಹೋಬಳಿಯ 4 ಸೇರಿದಂತೆ ಒಟ್ಟು ತಾಲೂಕಿನಲ್ಲಿ 28 ಕೆರೆಗಳು ವಂಚಿತವಾಗಿದ್ದು ಈ ಕೆರೆಗಳನ್ನು ತುಂಬಿಸಲು ವಿವಿಸಾಗರ ಜಲಾಶಯದ ಹಿನ್ನೀರಿನಿಂದ 0.25 ಟಿಎಂಸಿ ನೀರನ್ನು ಕಾರೇಹಳ್ಳಿ ಬಳಿ ಏತ ನೀರಾವರಿ ಮೂಲಕ ಹರಿಸಲು 220 ಕೋಟಿ ವೆಚ್ಚದ ಯೋಜನೆ ಸಿದ್ದವಾಗಿದೆ. ಈಗಾಗಲೇ ನೀರಾವರಿ ಕೆ ಹಾಗೂ ಹಣಕಾಸು ಇಲಾಖೆಯಿಂದ ಅನುಮೋದನೆ ಗೊಂಡಿದ್ದು ಕಡತ ಜಲನಿಗಮದ ಬೋರ್ಡ ಮುಂದೆ ಇದೆ. ಮುಖ್ಯ ಮಂತ್ರಿಗಳೇ ಬೋರ್ಡನ ಅಧ್ಯಕ್ಷರಾಗಿದ್ದು ಬೋರ್ಡ ಸಭೆಯಲ್ಲಿ ಶೀಘ್ರವೇ ಸಹಿ ಹಾಕಿಸಲಾಗುವುದು ಎಂದರು.


ವಿವಿ ಸಾಗರ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬರುವ 6 ಗ್ರಾಪಂ ವ್ಯಾಪ್ತಿಯಲ್ಲಿ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು 1 ಕೋಟಿ ಹಣ ಬಿಡುಗಡೆಯಾಗಿದೆ ಶೀಘ್ರದಲ್ಲಿಯೇ ರೈತರ ಖಾತೆಗಳಿಗೆ ಜಮೆಯಾಗಲಿದೆ. ಹಿನ್ನೀರಿನಿಂದ ಹಾನಿಗೊಳಗಾದ ಗ್ರಾಮಗಳ ಮೂಲಸೌಕರ್ಯಗಳಿಗೆ ಸುಮಾರು ₹125 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು ಜಲಸಂಪನ್ಮೂಲ ಇಲಾಖೆಯ ಅನುಮೋದನೆ ಪಡೆಯಬೇಕಿದೆ ಎಂದರು.

ಮುಖಂಡರಾದ ಆಗ್ರೋ ಶಿವಣ್ಣ, ಎಂ.ಪಿ ಶಂಕರ್, ರಾಜಣ್ಣ, ಮಹಮದ್ ಇಸ್ಮಾಯಿಲ್, ಕಾರೇಹಳ್ಳಿ ಬಸವರಾಜು, ಗೋ.ತಿಪ್ಪೇಶ್, ದೀಪಿಕಾ ಸತೀಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.