ಸಾರಾಂಶ
ಬ್ಯಾರಿ ಭಾಷೆಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮವಿದು
ಕನ್ನಡಪ್ರಭ ವಾರ್ತೆ ಮೈಸೂರು‘ಭವಿಷ್ಯದ ಪೀಳಿಗೆಗೆ ಬ್ಯಾರಿ ಭಾಷೆ, ಸಂಸ್ಕೃತಿಯನ್ನು ತಲುಪಿಸುವುದು ಅಗತ್ಯ. ಭಾಷೆ ಕೇವಲ ಸಂವಹನ ಮಾಧ್ಯಮ ಅಲ್ಲ. ಇದರಲ್ಲಿ ಆಚಾರ, ವಿಚಾರ, ಸಮುದಾಯ ಗೌರವ ಅಡಗಿದೆ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಮೈಸೂರಿನ ಬ್ಯಾರಿ ವೆಲ್‌ಫೇರ್ ಅಸೋಸಿಯೇಷನ್‌ನಿಂದ ಇಲ್ಲಿನ ಎ.ಆರ್.ಕನ್ವೆನ್ಷನ್ ಸೆಂಟರ್‌ನಲ್ಲಿ ಭಾನುವಾರ ನಡೆದ ಬ್ಯಾರಿ ಕುಟುಂಬ ಸಮ್ಮಿಲನ(ಪಿರ್ಸಪಾಡ್) ಕಾರ್ಯಕ್ರಮದಲ್ಲಿ ಮೂವರು ಸಾಧಕರಿಗೆ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.‘ಬ್ಯಾರಿ ಭಾಷೆಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮವಿದು. ಮೈಸೂರಿನಲ್ಲಿ ಪ್ರತಿವರ್ಷ ಇಂಥ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಭಾಷೆಯ ಬೆಳವಣಿಗೆ, ಸಮುದಾಯದ ನಡುವಿನ ಬಾಂಧವ್ಯ ಹೆಚ್ಚಳಕ್ಕೆ ಮುಂದಾಗಬೇಕು. ನಮ್ಮ ಹಿರಿಯರಿಗೆ ಆರ್ಥಿಕ ಸಂಕಷ್ಟವಿದ್ದರೂ ಸಮುದಾಯಕ್ಕೆ ಕಪ್ಪು ಚುಕ್ಕೆ ಬರದಂತೆ ಬದುಕಿದ್ದಾರೆ. ಅದನ್ನು ನಾವು ಸ್ಮರಿಸಬೇಕು. ಉಳಿಸಬೇಕು’ ಎಂದು ಕಿವಿಮಾತು ಹೇಳಿದರು.ಸಮುದಾಯದ ಸಾಧಕರಾದ ಮಕ್ಸೂದ್ ಅಹ್ಮದ್ ಮುಲ್ಕಿ(ಬ್ಯಾರಿ ಭಾಷೆ– ಸಂಘಟನೆ), ಪಿ.ಎಂ.ಹಸನಬ್ಬ ಮೂಡುಬಿದಿರೆ(ಬ್ಯಾರಿ ಕಲೆ– ಸಂಸ್ಕೃತಿ), ಹೈದರಾಲಿ ಕಾಟಿಪಳ್ಳ(ಬ್ಯಾರಿ ಸಾಹಿತ್ಯ) ಅವರಿಗೆ 2024ನೇ ಗೌರವ ಪ್ರಶಸ್ತಿ ನೀಡಲಾಯಿತು. ‘ಬೆಲ್ಕಿರಿ’ ದ್ವೈಮಾಸಿಕ ಸಂಚಿಕೆ ಬಿಡುಗಡೆ ನಡೆಯಿತು.ಸಭಾ ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರಿಗೆ ಬ್ಯಾರಿ ಸಂಪ್ರದಾಯದ ಆಹಾರ ತಯಾರಿ ಮತ್ತು ಮೆಹಂದಿ ವಿನ್ಯಾಸ ಸ್ಪರ್ಧೆಗಳು, ಮಕ್ಕಳಿಗೆ ಬ್ಯಾರಿ ಹಾಡು, ಪುರುಷ, ಮಹಿಳೆಯರಿಗೆ ಬ್ಯಾರಿ ಕ್ವಿಜ್ ನಡೆದವು. ದಫ್ ಕುಣಿತ, ಒಪ್ಪನೆ ಹಾಡು, ಕೋಲಾಟ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕರ್ಜುನ ಸ್ವಾಮಿ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯಸ್ ರೋಡ್ರಿಗಸ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಝೀಝ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು.ಎಚ್.ಉಮರ್, ರಿಜಿಸ್ಟ್ರಾರ್ ಜಿ.ರಾಜೇಶ್, ಬ್ಯಾರಿ ವೆಲ್‌ಫೇರ್ ಅಸೊಸಿಯೇಷನ್ ಮೈಸೂರು ಘಟಕದ ಅಧ್ಯಕ್ಷ ಯು.ಕೆ.ಹಮೀದ್, ಪ್ರಧಾನ ಕಾರ್ಯದರ್ಶಿ ಎಂ.ಐ.ಅಹ್ಮದ್ ಬಾವ, ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಹಾಜರಿದ್ದರು.----ಮಂಗಳೂರು ಬ್ಯಾರಿ ಭವನ ಕಾಮಗಾರಿ ಶೀಘ್ರ’‘ಮಂಗಳೂರಿನ ಬ್ಯಾರಿ ಭವನ ಕಾಮಗಾರಿ ಆರಂಭಿಸಲು ಈ ಬಾರಿಯ ವಿಧಾನ ಸಭೆ ಅಧಿವೇಶನ ಮುಗಿಯುವುದರೊಳಗೆ ಬೆಂಗಳೂರಿನಲ್ಲಿ ಸಭೆಯನ್ನು ಆಯೋಜಿಸಿ ತೀರ್ಮಾನ ಮಾಡಲಾಗುವುದು’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಭರವಸೆ ನೀಡಿದರು.‘ಬ್ಯಾರಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಮಡಿಕೇರಿ, ಮೈಸೂರಿನಲ್ಲಿಯೂ ಮುಖಂಡರು ಸ್ಥಳವನ್ನು ಸೂಚಿಸಿದರೆ ಮಂಜೂರು ಮಾಡಲು ಪ್ರಯತ್ನಿಸುತ್ತೇನೆ. ಮುಂದೆ ಅನುಕೂಲವಾದಾಗ ಉಪಯುಕ್ತ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬಹುದು. ಎನ್‌ಜಿಒ ಸ್ಥಾಪಿಸಿ ಅಕಾಡೆಮಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದು’ ಎಂದು ಸಲಹೆ ನೀಡಿದರು.---ಅಭಿವೃದ್ಧಿ ಮಂಡಳಿ ಸ್ಥಾಪಿಸಿ’‘ರಾಜ್ಯದಲ್ಲಿ 15 ಲಕ್ಷ ಬ್ಯಾರಿ ಸಮುದಾಯದವರಿದ್ದು, ಅವರ ಅಭಿವೃದ್ಧಿಗೆ ಬ್ಯಾರಿ ಅಭಿವೃದ್ಧಿ ಮಂಡಳಿ ಅಗತ್ಯ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮುಖ್ಯಮಂತ್ರಿ ಜತೆ ಚರ್ಚಿಸಿ ಮಂಡಳಿ ಸ್ಥಾಪಿಸಬೇಕು’ ಎಂದು ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಮನವಿ ಮಾಡಿದರು.‘ಕೇಂದ್ರ ಮತ್ತು ರಾಜ್ಯದಲ್ಲಿ ಜಾತಿಗಣತಿ ಬರುತ್ತಿದ್ದು, ಮುಸ್ಲಿಮ್ ಸಮುದಾಯವು ಈ ವಿಚಾರದಲ್ಲಿ ಸ್ವಲ್ಪ ಗೊಂದಲದಲ್ಲಿದೆ. ಹಾಗಾಗಿ ಸಂಘ ಸಂಸ್ಥೆಗಳೊಟ್ಟಿಗೆ ಸಭೆ ನಡೆಸಿ ಗೊಂದಲ ನಿವಾರಣೆ ಮಾಡಬೇಕು’ ಎಂದು ಹೇಳಿದರು.