ಮೋಕಾ ಭಾಗದ ರೈತರ ಕಷ್ಟ ನೋಡಲಾಗುತ್ತಿಲ್ಲ. ಮಳೆ-ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ.

ಬಳ್ಳಾರಿ: ಜನಾರ್ದನ ರೆಡ್ಡಿಯ ಉಪ್ಪು ತಿಂದು ಬೆಳೆದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಇದೀಗ ರೆಡ್ಡಿ ವಿರುದ್ಧವೇ ಮಾತನಾಡಲು ಶುರು ಮಾಡಿದ್ದಾನೆ. ದೊಡ್ಡವರ ಬಗ್ಗೆ ಮಾತನಾಡಿದರೆ ಹೀರೋ ಆಗುತ್ತೇನೆ ಎಂದುಕೊಂಡರೆ ಅದು ಸಾಧ್ಯವಿಲ್ಲ. ಹೀರೋ ಅಲ್ಲ; ಜೀರೋ ಆಗುತ್ತೀಯಾ ಹುಷಾರು ಎಂದು ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಎಚ್ಚರಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ಷೇತ್ರ ಪ್ರತಿನಿಧಿಸಿ ಎರಡು ಬಾರಿ ಶಾಸಕರಾಗಿರುವ ಬಿ. ನಾಗೇಂದ್ರ ಎಷ್ಟು ಬಾರಿ ಕ್ಷೇತ್ರದಲ್ಲಿ ಓಡಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ? ಸಚಿವನಾದರೆ ಮಾತ್ರ ಬಳ್ಳಾರಿಗೆ ಬರುತ್ತೇನೆ ಎಂದು ಹೇಳಿ ಜನರಿಂದ ದೂರ ಉಳಿದಿದ್ದ ನಾಗೇಂದ್ರ ಅವರಿಂದ ಕ್ಷೇತ್ರದ ಮತದಾರರ ಬಗ್ಗೆ ಕಾಳಜಿ ಇದೆಯಾ? ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನ ಹರಿಸದ ಶಾಸಕ ನಾಗೇಂದ್ರ, ಮಳೆ-ಬೆಳೆಯಿಲ್ಲದೆ ಒದ್ದಾಡುತ್ತಿರುವ ರೈತರ ಬಗ್ಗೆ ಒಂದಷ್ಟಿದಾರೂ ಕಾಳಜಿ ವಹಿಸಿದ್ದಾರಾ? ಸಚಿವ ಸ್ಥಾನ ನೀಡಿದರೆ ಮಾತ್ರ ಡ್ಯಾನ್ಸ್ ಮಾಡಿಕೊಂಡು ಬಳ್ಳಾರಿಗೆ ಬರುತ್ತಾರಾ? ಎಂದು ಪ್ರಶ್ನಿಸಿದರು.

ಮೋಕಾ ಭಾಗದ ರೈತರ ಕಷ್ಟ ನೋಡಲಾಗುತ್ತಿಲ್ಲ. ಮಳೆ-ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ನಾಗೇಂದ್ರ ಕಡೆಗಣಿಸಿದ್ದಾರೆ. ಅವರು ಶಾಸಕರಾದ ಬಳಿಕ ಎಷ್ಟು ಬಾರಿ ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆ ಆಲಿಸಿದ್ದಾರೆ? ಎಂಬುದನ್ನು ಬಹಿರಂಗ ಪಡಿಸಲಿ. ವಾಲ್ಮೀಕಿ ಸಮಾಜದ ಅಭಿವೃದ್ಧಿಗಾಗಿ ಇರಿಸಿದ್ದ ₹187 ಹಣ ನುಂಗಿ, ವಾಲ್ಮೀಕಿ ಸಮಾಜ ಎಂಬ ಜೇನುಗೂಡಿಗೆ ಕಲ್ಲು ಎಸೆದಿರುವೆ. ಚುನಾವಣೆಯಲ್ಲಿ ಗೆದ್ದರೆ ಹರಗಿನಡೋಣಿ ಜನರ ಕುಡಿವನೀರಿನ ಸಮಸ್ಯೆ ನೀಗಿಸುವೆ ಎಂದು ಭರವಸೆ ನೀಡಿದ್ದಿ. ಇಂದಿಗೂ ನೀರಿನ ಬವಣೆ ಪರಿಹಾರವಾಗಿಲ್ಲ. ಇದೇನಾ ಜನಪರ ಕಾಳಜಿ ? ಎಂದು ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಪ್ರಶ್ನಿಸಿದರು.

ಮಾಜಿ ಶಾಸಕ ಸುರೇಶ್ ಬಾಬು ಮಾತನಾಡಿ, ಜನಾರ್ದನ ರೆಡ್ಡಿ ರಾಜಿನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಲು ರೆಡಿ ಇದ್ದಾರೆ. ನಾವೇ ರಾಜಿನಾಮೆ ಕೊಡಿಸುತ್ತೇವೆ. ವಾಲ್ಮೀಕಿ ನಿಗಮದ ಹಣದಲ್ಲಿ ಗೆದ್ದಿರುವ ಲೋಕಸಭಾ ಸದಸ್ಯ ಈ. ತುಕಾರಾಂ ಮೊದಲು ರಾಜಿನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಸವಾಲೆಸೆದರು.

ಅವರೇನು ಸ್ವಾತಂತ್ರ್ಯ ಹೋರಾಟಗಾರರಾ?: ನನ್ನ ಸಹೋದರ ಜನಾರ್ದನ ರೆಡ್ಡಿ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ರಾ ? ಎಂದು ಶಾಸಕ ನಾರಾ ಭರತ್ ರೆಡ್ಡಿ ಪ್ರಶ್ನಿಸಿದ್ದಾರೆ. ಆದರೆ ಭರತ್ ರೆಡ್ಡಿ ಅತ್ತೆ ರಾಣಿ ಸಂಯುಕ್ತ ಅವರು ಸಹ ಗಣಿ ಅಕ್ರಮ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು. ಹಾಗಾದರೆ ಅವರೇನು ಸ್ವಾತಂತ್ರ್ಯ ಹೋರಾಟಗಾರರಾ ? ಎಂದು ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಭರತ್‌ರೆಡ್ಡಿ ಅತ್ತೆ ರಾಣಿ ಸಂಯುಕ್ತ ಮೇಲೆ 4 ಎಸ್‌ಐಟಿ, 1 ಸಿಬಿಐ ತನಿಖೆಯಾಗುತ್ತಿದೆ. ಕೆಲವು ಪ್ರಕರಣದಲ್ಲಿ ಎ-1 ಆರೋಪಿಯಾಗಿದ್ದಾರೆ. ಭರತ್ ರೆಡ್ಡಿ ತಂದೆ ಸೂರ್ಯನಾರಾಯಣ ರೆಡ್ಡಿಯವರ ಮೇಲೂ ಅಕ್ರಮ ಗಣಿಗಾರಿಕೆ ಪ್ರಕರಣವೊಂದರಲ್ಲಿ ಪ್ರಕರಣ ದಾಖಲಾಗಿದೆ. ಇದು ಶಾಸಕ ಭರತ್ ರೆಡ್ಡಿಗೆ ಗೊತ್ತಿಲ್ಲವೇ ? ಎಂದು ಕೇಳಿದರು.

ನಾರಾ ಸೂರ್ಯನಾರಾಯಣ ರೆಡ್ಡಿ ಒನ್‌ಟೈಂ ಎಂಎಲ್‌ಎ (ಒಟಿಎಂ). ಮಗ ಭರತ್ ರೆಡ್ಡಿ ಸಹ ಒಟಿಎಂ ಆಗಲಿದ್ದಾರೆ ಎಂದು ಜನರೇ ಹೇಳುತ್ತಿದ್ದಾರೆ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.