ಸಂವಿಧಾನದ ವಿರುದ್ಧ ಮಾತನಾಡುವುದು ದೇಶದ್ರೋಹ

| Published : Jan 27 2025, 12:45 AM IST

ಸಾರಾಂಶ

ದೇಶದಲ್ಲಿ ನಾವು ಇನ್ನೂ ಸಾಧಿಸಬೇಕಾಗಿರುವುದು ಬೇಕಾದಷ್ಟಿದೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಂವಿಧಾನವೇ ಕಾರಣವಾಗಿದೆ. ಯಾರಾದರೂ ಸಂವಿಧಾನದ ವಿರುದ್ಧ ಮಾತನಾಡಿದರೆ ನಾವು ತಿರುಗಿ ಬೀಳಬೇಕು. ಅವರಿಗೆ ಬುದ್ಧಿ ಕಲಿಸುವ ಕೆಲಸ ಮಾಡಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿ ಕೊಟ್ಟಿರುವ ಸಂವಿಧಾನದ ವಿರುದ್ಧ ಯಾರಾದರೂ ಮಾತನಾಡಿದರೆ ಅವರು ದೇಶ ದ್ರೋಹಿಗಳಾಗಿದ್ದು, ಅವರಿಗೆ ಸಂವಿಧಾನವನ್ನು ಅರ್ಥೈಸುವ ಕೆಲಸ ಮಾಡಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಪಟ್ಟಣದ ಹೊಂಡಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ೭೬ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ನಂತರ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜ್ಯಾತ್ಯತೀತ ದೇಶ

ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ರಚಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುವ ಮೂಲಕ ಸ್ವಾತಂತ್ರ ಹಾಗೂ ಸಮಾನತೆಯಿಂದ ಜೀವಿಸುತ್ತಿದ್ದೇವೆ. ಜಾತ್ಯತೀತವಾಗಿ ಎಲ್ಲ ಜಾತಿ ಧರ್ಮಗಳು ನಮ್ಮ ದೇಶದಲ್ಲಿದ್ದು, ಸಂವಿಧಾನದಡಿ ಅವಕಾಶಗಳನ್ನು ಪಡೆದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ ಎಂದರು.

ದೇಶದಲ್ಲಿ ನಾವು ಇನ್ನೂ ಸಾಧಿಸಬೇಕಾಗಿರುವುದು ಬೇಕಾದಷ್ಟಿದೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಂವಿಧಾನವೇ ಕಾರಣವಾಗಿದೆ. ಯಾರಾದರೂ ಸಂವಿಧಾನದ ವಿರುದ್ಧ ಮಾತನಾಡಿದರೆ ನಾವು ತಿರುಗಿ ಬೀಳಬೇಕು. ಅವರಿಗೆ ಬುದ್ಧಿ ಕಲಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಹೈಟೆಕ್‌ ಆಸ್ಪತ್ರೆ ನಿರ್ಮಾಣಪಟ್ಟಣದಲ್ಲಿ ಬಸ್ ನಿಲ್ದಾಣ, ಕೆರೆ ಅಭಿವೃದ್ಧಿ, ಇಂಡಸ್ಟ್ರಿಯಲ್ ಕಾರಿಡಾರ್ ರಸ್ತೆ, ಪಟ್ಟಣದಲ್ಲಿ ೩೩ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ೬೦ ಕೋಟಿ ರು.ಗಳ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇಲ್ಲಿನ ಆಸ್ಪತ್ರೆಯು ಶಿಥಿಲ ಹಾಗೂ ಕಿರಿದಾಗಿರುವುದರಿಂದ ಆರೋಗ್ಯ ಸಚಿವರು ಬಜೆಟ್‌ನಲ್ಲಿ ನೂತನ ಸುಸಜ್ಜಿತ ಹೈಟೆಕ್ ಆಸ್ಪತ್ರೆಗೆ ಅನುದಾನವನ್ನು ನಿಗದಿಪಡಿಸಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಿಸಿಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಯೊಂದು ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಪೈಪ್‌ಲೈನ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದ ಮಾರುತಿ ಬಡಾವಣೆಯಲ್ಲಿ ಸ್ಥಗಿತಗೊಂಡಿದ್ದ ಗುರುಭವನ ಕಾಮಗಾರಿಯನ್ನು ಚಾಲನೆ ನೀಡಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ. ವಿರೋಧ ಪಕ್ಷದವರು ಮಾಡುವ ಟೀಕೆಗಳಿಗೆ ಉತ್ತರ ನೀಡದೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಮೂಲಕ ಅಭಿವೃದ್ಧಿಯಲ್ಲಿಯೇ ಅವರಿಗೆ ಉತ್ತರ ನೀಡಲಾಗುವುದು ಎಂದರು. ಮಕ್ಕಳಿಗೆ ಬಹುಮಾನ

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ವಿ.ರೂಪ ಅವರು ಧ್ವಜಾರೋಹಣ ನೆರವೇರಿಸಿ ಪಥಸಂಚಲನ ತಂಡಗಳಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು. ಶಾಲಾ ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ನಡೆಸಿಕೊಟ್ಟರು. ವಿಜೇತರಾದ ತಂಡಗಳು ಹಾಗೂ ಉತ್ತಮ ಪಥ ಸಂಚಲನ ತಂಡಗಳಿಗೆ ಶಾಸಕ ಕೆ.ವೈ.ನಂಜೇಗೌಡ ಬಹುಮಾನಗಳನ್ನು ವಿತರಿಸಿದರು.

ಕಾರ‍್ಯಕ್ರಮಕ್ಕೆ ಆಗಮಿಸಿದ ಶಾಲಾ ಮಕ್ಕಳಿಗೆ ಶಾಸಕ ಕೆ.ವೈ.ನಂಜೇಗೌಡರಿಂದ ಸಿಹಿ ಹಂಚಿಕೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತುಈ ಸಂದರ್ಭದಲ್ಲಿ ಬಿಇಒ ಎಚ್.ಎಸ್.ಚಂದ್ರಕಲಾ, ಪುರಸಭೆ ಅಧ್ಯಕ್ಷೆ ಕೋಮಲ ಕೋಳಿನಾರಾಯಣ್, ಯೋಜನಾ ಪ್ರಾಕಾರ ಅಧ್ಯಕ್ಷ ಮಹಮದ್ ನಹೀಮ್ ಉಲ್ಲಾ, ಪುರಸಭಾ ಸದಸ್ಯರಾದ ಜಾಕಿರ್ ಖಾನ್, ಇಮ್ತಿಯಾಜ್ ಖಾನ್, ಆರ್.ವೆಂಕಟೇಶ್, ಮುರುಳಿಧರ್, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ವಿಜಯ ನರಸಿಂಹ, ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನೇಗೌಡ, ಸಮಾಜ ಕಲ್ಯಾಣ ಇಲಾಖೆಯ ಶಿವಕುಮಾರ್, ಪುರಸಭೆ ಮುಖ್ಯಕಾರಿ ಪ್ರದೀಪ್, ಪುರಸಭೆ ಸದಸ್ಯರು, ವಿವಿಧ ಇಲಾಖೆ ಅಕಾರಿಗಳು ಇನ್ನಿತರರು ಹಾಜರಿದ್ದರು.