ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸುಪ್ರಿಂ ಕೋರ್ಟ್ ವಕೀಲ ಮತ್ತು ರಾಜ್ಯ ಸರ್ಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೇವದತ್ತ ಕಾಮತ್ ಶನಿವಾರ ಲ್ಯಾನ್ಸ್ಡೌನ್ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕಟ್ಟಡ ನೆಲಸಮಕ್ಕೆ ಸಂಬಂಧಿಸಿದಂತೆ ವಿಶೇಷ ಮೇಲ್ಮನವಿ ಸಲ್ಲಿಸುವ ಉದ್ದೇಶದಿಂದ ಕಟ್ಟಡದ ವಾಸ್ತವ ಸ್ಥಿತಿಯನ್ನು ನೋಡಿ ಮಾಹಿತಿ ಪಡೆದರು. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ನೀಡಿದ ಸೂಚನೆಯಂತೆ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಕಟ್ಟಡದ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕಾಮತ್ ಅವರು ಮೈಸೂರಿಗೆ ಭೇಟಿ ನೀಡಿ ನಗರ ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದರು.ಈ ತಿಂಗಳಲ್ಲಿ ಸುಪ್ರಿಂ ಕೋರ್ಟ್ ನಲ್ಲಿ ಈ ಸಂಬಂಧ ವಿಶೇಷ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಟ್ಟಡ ತೆರವುಗೊಳಿಸದಂತೆ ಕೆಲವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರಿಂದ ಸರ್ಕಾರ ಕಟ್ಟಡ ತೆರವು ಕಾರ್ಯ ಸ್ಥಗಿತಗೊಳಿಸಿತ್ತು.19ನೇ ಶತಮಾನದಲ್ಲಿ ನಿರ್ಮಾಣವಾದ ಪಾರಂಪರಿಕ ವ್ಯಾಪ್ತಿಗೆ ಸೇರಿದ ಈ ಎರಡೂ ಕಟ್ಟಡಗಳನ್ನು ಉಳಿಸಿಕೊಳ್ಳಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು. ಕಳೆದ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್ಲ್ಯಾನ್ಸ್ ಡೌನ್ ಕಟ್ಟಡದ ಪರಿಸ್ಥಿತಿಯ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.ಈ ವೇಳೆ ನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್, ಅಧೀಕ್ಷಕ ಎಂಜಿನಿಯರ್ ಕೆ.ಜೆ. ಸಿಂಧು, ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ್, ಹಿರಿಯ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮತ್ತು ಕಂದಾಯ ವಿಭಾಗದ ಉಪ ಆಯುಕ್ತ ಸೋಮಶೇಖರ್ ಇದ್ದರು.