ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ತಂಪಾಗಿ ಬೀಸುವ ಗಾಳಿಯಲ್ಲಿ ಸುತ್ತಲೂ ನೀರಿನ ಮಧ್ಯ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ದೋಣಿ (ಬೋಟ್)ನಲ್ಲಿ ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರೆ ಹೇಗಿರುತ್ತೆ?
ಇದು ಹುಬ್ಬಳ್ಳಿ- ಧಾರವಾಡದ ಜನತೆಗೆ ಇಲ್ಲಿನ ತೋಳನಕೆರೆಯಲ್ಲಿ ಕಲ್ಪಿಸಿರುವ ಸೌಲಭ್ಯದ ಒಂದು ಝಲಕ್. ಇನ್ನು 2-3 ದಿನಗಳಲ್ಲಿ ಈ ವಿಶೇಷ ಬೋಟ್ ಆಗಮಿಸುತ್ತಿದೆ. ಬರ್ತಡೇ ಪಾರ್ಟಿ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಚಿಕ್ಕಪುಟ್ಟ ಕಾರ್ಯಕ್ರಮಗಳನ್ನು ಈ ವಿಶೇಷ ಬೋಟ್‌ನಲ್ಲಿ ಆಚರಿಸಿಕೊಳ್ಳಬಹುದಾಗಿದೆ.ಸುಮಾರು 32.64 ಎಕರೆ ವಿಸ್ತೀರ್ಣ ಹೊಂದಿರುವ ತೋಳನಕೆರೆಯನ್ನು ಸ್ಮಾರ್ಟ್ ಸಿಟಿ ಯೋಜನೆಯ ಅಡಿ ಸುಮಾರು ₹29.29 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದರೊಂದಿಗೆ ಜನರ ಮನರಂಜನೆಗಾಗಿ ಹಲವು ಸೌಲಭ್ಯ ಕಲ್ಪಿಸಲಾಗಿದೆ.
ಏನೆಲ್ಲ ಇವೆ?ಕೆರೆಯ ಸುತ್ತಲೂ 1.5 ಕಿಮೀ ವಾಕಿಂಗ್ ಪಾತ್ ನಿರ್ಮಿಸಲಾಗಿದೆ. ಎರಡು ಕಡೆ ಜಿಮ್ ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಸಣ್ಣ ಈಜುಗೊಳ, ಮಿನಿ ಹೆಲಿಕ್ಯಾಪ್ಟರ್, ಕಾರ್ ವ್ಹೀಲಿಂಗ್, ಜೋಕಾಲಿ, ಜಾರುಬಂಡಿ, ಹಾರ್ಸ್ ರೈಡ್, ಜಂಪಿಂಗ್ ನೆಟ್, ಡಾಗ್ ರೈಡ್, ಯುವಜನರಿಗಾಗಿ ಫುಟ್‌ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್ ಮೈದಾನ. ಹಿರಿಯರಿಗಾಗಿ ಆಮ್ ಆ್ಯಡ್ ಪೆಡಲ್ ಬೈಕ್, ಬಿಗ್ ಶೋಲ್ಡರ್ ವಿಲ್, ಡಬಲ್ ಸ್ಕಿ ವಾಕರ್, ಡಬಲ್ ಸಿಟ್ ಅಪ್ ಬೋರ್ಡ್ಸ್, ನೆಲ್ಸ್ ವೇಟೆಟ್ ರೋವರ್, ಸಿಟಡ್ ಚೆಸ್ ಪ್ರೆಸ್, ಸ್ಟೆಂಥ್ ಟ್ರೇನರ್, ಟೈ, ಸ್ಟ್ರೀ ಸ್ಪಿನ್ನರ್, ಟ್ವಿಸ್ಟ್ ಸ್ಟೆಪ್ಪರ್ ಸೇರಿದಂತೆ ಹಲವು ಉಪಕರಣದಿಂದ ಕೂಡಿರುವ ಮಿನಿ ಜಿಮ್ ವ್ಯವಸ್ಥೆ ಮಾಡಿದೆ. ಮತ್ತೊಂದು ಮಕ್ಕಳ ಆಕರ್ಷಣೆಗೆ ಕಾರಣವಾಗಿರುವುದು ಇಲ್ಲಿನ ಮಿನಿ ಪಾಂಡಾ ಟ್ರೈನ್.
ದರ ನಿಗದಿಈ ಕೆರೆಗೆ ಬೆಳಗ್ಗೆ 6ರಿಂದ 8.30ರ ವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬಳಿಕ ರಾತ್ರಿ 9 ಗಂಟೆಯ ವರೆಗೂ ವಯಸ್ಕರಿಗೆ ₹20 ಹಾಗೂ ಮಕ್ಕಳಿಗೆ ₹15 ದರ ನಿಗದಿಪಡಿಸಲಾಗಿದೆ. ಇನ್ನು ಕೆರೆಯ ಆವರಣದಲ್ಲಿರುವ ಬಗೆಬಗೆಯ ಆಟಿಕೆಗಳಿಗೆ ಪ್ರತ್ಯೇಕ ದರ ನಿಗದಿಗೊಳಿಸಲಾಗಿದೆ.
ಬೋಟಿಂಗ್ ಆಕರ್ಷಣೆತೋಳನಕೆರೆಯಲ್ಲಿ ಬೋಟಿಂಗ್‌ಗೆ ಕಳೆದ 2024ರ ಜನವರಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಚಾಲನೆ ನೀಡಿದ್ದರು. ಆಗ ಮೊದಲು 5 ಬೋಟ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆರಂಭದಲ್ಲಿ ಚೆನ್ನಾಗಿಯೇ ನಡೆದಿದ್ದ ಬೋಟಿಂಗ್ ಕೆಲ ತಿಂಗಳ ಬಳಿಕ ಇದಕ್ಕೆ ಗ್ರಹಣ ಹಿಡಿದಿತ್ತು. ಈಗ ಮತ್ತೆ ಆರಂಭವಾಗುವುದರೊಂದಿಗೆ ಬೋಟಿಂಗ್‌ಗೆ ಜೀವಕಳೆ ಬಂದಿದೆ.
ಸೋಲಾರ್ ಚಾಲಿತ ಬೋಟ್ಕಳೆದ ಒಂದು ವರ್ಷದಿಂದ ಎರಡು ಪೆಟ್ರೋಲ್ ಚಾಲಿತ ಹಾಗೂ 3 ಪೆಡಲ್ ಬೋಟ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಪೆಟ್ರೋಲ್ ಚಾಲಿತ ಬೋಟ್ ಕೈಬಿಟ್ಟು ಸಂಪೂರ್ಣವಾಗಿ ಸೋಲಾರ್ ಚಾಲಿತ ಬೋಟ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಭಾನುವಾರದಿಂದ ಈ ಬೋಟ್‌ಗಳು ಕೆರೆಗಿಳಿದಿವೆ. ಸೋಲಾರ್ ಚಾಲಿತ ಬೋಟ್‌ಗೆ 15 ನಿಮಿಷಕ್ಕೆ ₹100, ಪೆಡಲ್ ಬೋಟ್‌ಗಳಿಗೆ 20 ನಿಮಿಷಕ್ಕೆ ₹100 ಬೆಲೆ ನಿಗದಿಗೊಳಿಸಲಾಗಿದೆ.
ವಿಶೇಷ ಬೋಟ್‌ನಲ್ಲೇನಿದೆ?:ತೋಳನಕೆರೆಗೆ ಆಗಮಿಸುತ್ತಿರುವ ವಿಶೇಷ ಬೋಟ್ ಹಲವು ಆಕರ್ಷಣೆ ಹೊಂದಿದೆ. ಇದರಲ್ಲಿ 12 ಆಸನಗಳ ವ್ಯವಸ್ಥೆ, ಬರ್ತಡೆ, ವೆಡ್ಡಿಂಗ್ ಆ್ಯನಿವರ್ಸರಿಗೆ ಕೇಕ್ ಕಟ್ ಮಾಡಲು ಬೇಕಾದ ವ್ಯವಸ್ಥೆಯಿದೆ. ಬೋಟ್ ಸಂಪೂರ್ಣವಾಗಿ ಲೈಟಿಂಗ್, ಬಲೂನ್‌ಗಳಿಂದ ಅಲಂಕರಿಸಲಾಗಿರುತ್ತದೆ. ಜತೆಗೆ ಮ್ಯೂಜಿಕ್ ಸೌಲಭ್ಯ ಕಲ್ಪಿಸಲಾಗಿದೆ. ಕೇಕ್ ಕಟ್ ಮಾಡುವುದರೊಂದಿಗೆ ಕುಣಿದು ಕುಪ್ಪಳಿಸಲು ಬೇಕಾಗುವಷ್ಟು ಜಾಗದ ವ್ಯವಸ್ಥೆಯಿದೆ. ಕೇವಲ ಕೇಕ್ ಮತ್ತು ಸ್ನ್ಯಾಕ್ ತೆಗೆದುಕೊಂಡು ಹೋದರೆ ಸಾಕು ಸಂಭ್ರಮಾಚರಣೆಗೆ ಬೇಕಾದ ಉಳಿದೆಲ್ಲ ಸೌಲಭ್ಯವೂ ಈ ವಿಶೇಷ ಬೋಟ್‌ನಲ್ಲಿದೆ. ರಾತ್ರಿ 9 ಗಂಟೆಯ ವರೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈಗಾಗಲೇ ಗದಗನ ಭೀಷ್ಮಕೆರೆಯಲ್ಲಿ ಈ ವಿಶೇಷ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಈಗ ಹುಬ್ಬಳ್ಳಿಯ ತೋಳನಕೆರೆಯಲ್ಲೂ 2-3 ದಿನಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಬೋಟ್‌ಗೆ ಅರ್ಧಗಂಟೆಗೆ ₹1200 ದರ ನಿಗದಿಗೊಳಿಸಲಾಗಿದೆ. ಇದಕ್ಕೆ ಉತ್ತಮ ಸ್ಪಂಧನೆ ದೊರೆತಲ್ಲಿ ಬೋಟ್‌ಗಳ ಸಂಖ್ಯೆ ಹೆಚ್ಚಿಸುವ ಚಿಂತನೆ ಮಾಡಲಾಗಿದೆ.ಬಾಹುಬಲಿ ಧರೆಪ್ಪನವರ, ಬೋಟ್‌ನ ನಿರ್ವಹಣಾ ವ್ಯವಸ್ಥಾಪಕ
;Resize=(128,128))
;Resize=(128,128))
;Resize=(128,128))
;Resize=(128,128))