12 ರಂದು ಜಾತಿಗಣತಿ ವಿಶೇಷ ಸಂಪುಟ ಸಭೆ

| Published : Jun 07 2025, 12:45 AM IST

ಸಾರಾಂಶ

ಹಲವು ಬಾರಿ ಮುಂದೂಡಲ್ಪಟ್ಟಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಜಾರಿ ಕುರಿತು ಚರ್ಚಿಸಲು ಜೂ.12 ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಲವು ಬಾರಿ ಮುಂದೂಡಲ್ಪಟ್ಟಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಜಾರಿ ಕುರಿತು ಚರ್ಚಿಸಲು ಜೂ.12 ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ.

ಏ.17 ರಂದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿರುವ ಜಾತಿಗಣತಿ ವರದಿ ಕುರಿತು ಬಳಿಕ ನಡೆದ ಸಂಪುಟ ಸಭೆಗಳಲ್ಲಿ ಪ್ರಸ್ತಾಪ ಮಾಡಿದ್ದರೂ ಈವರೆಗೆ ಸೂಕ್ತ ತೀರ್ಮಾನ ತೆಗೆದುಕೊಂಡಿಲ್ಲ. ಮೇ 22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಚರ್ಚೆಗೆ ಬಂದಿತ್ತು. ಆದರೆ, ಈ ವೇಳೆ ಇನ್ನೂ ಕೆಲ ಸಚಿವರು ಲಿಖಿತ ಅಭಿಪ್ರಾಯ ಸಲ್ಲಿಕೆ ಮಾಡಿಲ್ಲ. ಕೆಲ ಸಚಿವರು ಒಂದೇ ಅಭಿಪ್ರಾಯ ಹೊಂದಿರುವ ಪತ್ರಕ್ಕೆ ಸಾಮೂಹಿಕವಾಗಿ ಸಹಿ ಹಾಕಿ ನೀಡಿದ್ದಾರೆ ಎಂಬ ಕಾರಣಕ್ಕಾಗಿ ವಿಷಯ ಮುಂದೂಡಲಾಗಿತ್ತು.

ಜೂ.5 ರಂದು ನಡೆದ ಸಚಿವ ಸಂಪುಟ ಸಭೆ ವಿಷಯ ಪಟ್ಟಿಯಲ್ಲಿ ಜಾತಿಗಣತಿ ವಿಚಾರ ಇದ್ದರೂ ಯಾವುದೇ ಚರ್ಚೆ ನಡೆಸದೆ ವಿಷಯ ಮುಂದೂಡಲಾಗಿತ್ತು. ಇದೀಗ ಜೂ.12 ರಂದು ಜಾತಿಗಣತಿ ವರದಿ ವಿಚಾರವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆಯು ತೀವ್ರ ಕುತೂಹಲ ಕೆರಳಿಸಿದೆ.

ನಂದಿ ಬೆಟ್ಟದಲ್ಲಿ ಜೂ.19ರಂದು ಸಚಿವ ಸಂಪುಟ ಸಭೆ

ಏ.24ರಂದು ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ನಡೆಸಿದ್ದ ಸರ್ಕಾರವು ಬೆಂಗಳೂರು ಕಂದಾಯ ವಿಭಾಗಕ್ಕೆ ಸಂಬಂಧಿಸಿ ಜೂ.19 ರಂದು ನಂದಿಬೆಟ್ಟದಲ್ಲಿ ಸಂಪುಟ ಸಭೆ ನಡೆಸಲು ತೀರ್ಮಾನಿಸಿದೆ. ನಂದಿ ಬೆಟ್ಟದ ಮಯೂರ ಸಭಾಂಗಣದಲ್ಲಿ ಮಧ್ಯಾಹ್ನ 12ಕ್ಕೆ ಸಂಪುಟ ಸಭೆ ಕರೆಯಲಾಗಿದೆ.

ನಾಲ್ಕು ಕಂದಾಯ ವಿಭಾಗಗಳಲ್ಲೂ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ನಿರ್ಧರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಿದ್ದರು. ಬಳಿಕ ಮೈಸೂರು ವಿಭಾಗಕ್ಕೆ ಸಂಬಂಧಿಸಿ ಏ.24 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಭೆ ನಡೆಸಿದ್ದರು. ಇದೀಗ ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿ ನಂದಿಬೆಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ. ಬೆಳಗಾವಿ ವಿಭಾಗಕ್ಕೆ ಸಂಬಂಧಿಸಿ ವಿಜಯಪುರದಲ್ಲಿ ಮುಂದಿನ ಸಭೆ ನಡೆಸಲಿದೆ.