ಗ್ರಾಮೀಣ ಶಾಲಾಭಿವೃದ್ಧಿಗೆ ವಿಶೇಷ ಒತ್ತು: ಶಾಸಕ ಗೋಪಾಲಕೃಷ್ಣ ಬೇಳೂರು

| Published : Aug 17 2024, 12:49 AM IST

ಗ್ರಾಮೀಣ ಶಾಲಾಭಿವೃದ್ಧಿಗೆ ವಿಶೇಷ ಒತ್ತು: ಶಾಸಕ ಗೋಪಾಲಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರ ತಾಲ್ಲೂಕಿನ ಆವಿನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಿವೇಕ ಯೋಜನೆಯಡಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸಾಗರ

ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಮಕ್ಕಳು ಗಮನ ಹರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲ್ಲೂಕಿನ ಆವಿನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಿವೇಕ ಯೋಜನೆಯಡಿ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳು ಪ್ರತಿಭಾವಂತರಿರುತ್ತಾರೆ. ಅವರಿಗೆ ಶೈಕ್ಷಣಿಕವಾಗಿ ಸ್ವಲ್ಪ ಉತ್ತೇಜನ ಸಿಕ್ಕರೆ ಉತ್ತಮ ಫಲಿತಾಂಶ ತರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಎಲ್ಲಾ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಉತ್ತಮ ಅಂಕದ ಜೊತೆಗೆ ಸಮರ್ಥ ವ್ಯಕ್ತಿತ್ವವನ್ನೂ ಮಕ್ಕಳು ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಪೋಷಕರು, ಶಿಕ್ಷಕರು, ಶಾಲಾಭಿವೃದ್ಧಿ ಸಹಕಾರ ನೀಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಸವರಾಜ್, ಆವಿನಹಳ್ಳಿ ಶಾಲೆ ಅತ್ಯಂತ ಮಾದರಿಯಾಗಿ ರೂಪುಗೊಳಿಸುವ ಪ್ರಯತ್ನ ನಡೆಸಲಾಗುತ್ತಿದ್ದು, ಶಾಸಕರು ಪೂರ್ಣ ಸಹಕಾರ ನೀಡುತ್ತಿದ್ದಾರೆ. ಕಳೆದ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.೧೦೦ ಫಲಿತಾಂಶ ತರುವ ಮೂಲಕ ತಾಲ್ಲೂಕಿಗೆ ಮಾದರಿಯಾದ ಶಾಲೆ ನಮ್ಮದಾಗಿದೆ. ಈ ಶೈಕ್ಷಣಿಕ ಸಾಲಿನಲ್ಲಿ ಸಹ ಗುಣಮಟ್ಟದ ಫಲಿತಾಂಶ ತರಲು ಈಗಿನಿಂದಲೇ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಆವಿನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ರಾಜು ಪಟೇಲ್, ಸಫಿಯಾ, ಕುಮಾರ್, ಸತೀಶ್, ಕೋಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ನವೀನ್ ಗೌಡ, ಆಪ್ಸ್ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ಪರಶುರಾಮಪ್ಪ ಇ., ಸಿದ್ದವೀರಪ್ಪ ಗೌಡ, ನಂಜುಂಡಪ್ಪ ಇನ್ನಿತರರು ಉಪಸ್ಥಿತರಿದ್ದರು. ನಾಗೇಶ್ ಸ್ವಾಗತಿಸಿದರು. ಸುಬ್ರಹ್ಮಣ್ಯ ನಿರೂಪಿಸಿದರು.