ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಗ್ರಾಮೀಣ ಪ್ರಗತಿ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಯೋಜನೆ ಅಡಿ, ತಾಲೂಕಿನ ಗಡಿ ಗ್ರಾಮಗಳ ಪ್ರಗತಿಗೆ ವಿಶೇಷ ಒತ್ತು ನೀಡಿರುವುದಾಗಿ ಶಾಸಕ ಎಚ್.ವಿ. ವೆಂಕಟೇಶ್ ಹೇಳಿದರು.ತಾಲೂಕು ಆಡಳಿತ ವತಿಯಿಂದ ಬುಧವಾರ ತಾಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ವ್ಯಾಪ್ತಿಯ ಪೋತಗಾನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ಮಟ್ಟದ ಜನಸಂಪರ್ಕ ಸಭೆ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿ, ತಂದೆ ವೆಂಕಟರಮಣಪ್ಪ ಶಾಸಕ ಹಾಗೂ ಸಚಿವರಾಗಿದ್ದ ಕಾಲದಲ್ಲಿ ತಾಲೂಕಿನ ಪ್ರಗತಿಗೆ ವಿಶೇಷ ಒತ್ತು ನೀಡಿ ಕೆಲಸ ಮಾಡಿದ್ದಾರೆ. ಅವರ ಸಲಹೆ ಮೇರೆಗೆ ಮುಂದುವರಿಯುತ್ತಿದ್ದು ಗಡಿ ಗ್ರಾಮ ಪ್ರಗತಿ ಕಾಣಬೇಕು. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ. ಈ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳ ಪ್ರಗತಿ ಸೇರಿದಂತೆ, ಪ್ರಯಾಣಿಕರಿಗೆ ಉತ್ತಮ ಸೇವೆ ಹಿನ್ನೆಲೆ ವಾಹನಗಳ ಸುಗಮ ಒಡಾಟಕ್ಕೆ ರಸ್ತೆ ಅಭಿವೃದ್ಧಿ ಹಾಗೂ ಕುಡಿವ ಸಮಗ್ರ ಕುಡಿವ ನೀರು ಕಡುಬಡವ ಹೀನರಿಗೆ ವಸತಿ ಸೌಲಭ್ಯ ಸೇರಿದಂತೆ ರೈತರ ನೀರಾವರಿ ಜಮೀನುಗಳ ಪ್ರಗತಿ ಕಾಣಬೇಕು ಈ ಹಿನ್ನೆಲೆಯಲ್ಲಿ ಕಾರ್ಯನ್ಮುಖರಾಗಿದ್ದು ವಿವಿಧ ಯೋಜನೆ ಅಡಿ ಹೆಚ್ಚು ಅನುದಾನ ಬಿಡುಗಡೆಗೊಳಿಸುವುದಾಗಿ ಹೇಳಿದರು.
ಗ್ರಾಮೀಣ ಜನತೆಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ಅಧಿಕಾರಿಗಳ ಜತೆ ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಸಭೆ ಆಯೋಜಿಸಲಾಗಿದೆ. ಸಮಸ್ಯೆ ಹಿನ್ನೆಲೆಯಲ್ಲಿ ನೂರಾರು ಅರ್ಜಿ ಸಲ್ಲಿಕೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಯಿಂದ ವಿವರ ಪಡೆಯುವ ಮೂಲಕ ಹಲವು ಸಮಸ್ಯೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಗಿದೆ. ಉಳಿಕೆ ಅರ್ಜಿಗಳನ್ನು ಪರಿಶೀಲಿಸಿ ನಿವಾರಿಸುವುದಾಗಿ ಹೇಳಿ, ಮಾಸಾಶನ ಮಂಜುರಾತಿಯ ಆದೇಶ ಪತ್ರ ಹಾಗೂ ಸಿಡಿಪಿಒ ಇಲಾಖೆಯ ಭಾಗ್ಯಲಕ್ಷ್ಮೀ ಬಾಂಡ್ , ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕೃಷಿ, ತೋಟಗಾರಿಕೆ ಇತರೆ ಇಲಾಖೆಯ ಸೌಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿ ಸದುಪಯೋಗಕ್ಕೆ ಕರೆ ನೀಡಿದರು.ಇದೇ ವೇಳೆ ಪೋತಗಾನಹಳ್ಳಿ ಹೊಸದುರ್ಗ ಹಾಗೂ ಆರ್.ಡಿ. ರೊಪ್ಪದ ಆನೇಕ ಮಂದಿ ಕಾಂಗ್ರೆಸ್ ಮುಖಂಡರು ಶಾಸಕ ಎಚ್.ವಿ. ವೆಂಕಟೇಶ್ ಅವರನ್ನು ಸನ್ಮಾನಿಸಿ, ಗ್ರಾಮಗಳ ಪ್ರಗತಿಯ ಬೇಡಿಕೆ ಮನವಿ ಪತ್ರ ಸಲ್ಲಿಸಿದರು. ತಹಸೀಲ್ದಾರ್ ಡಿ.ಎನ್. ವರದರಾಜು ಮಾತನಾಡಿದರು, ತಾಪಂ ಇಒ ಜಾನಕಿರಾಮ್ ,ಮಾಜಿ ಅಧ್ಯಕ್ಷ ಎನ್.ಆರ್. ಅಶ್ವತ್ ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ, ಮಾಜಿ ತಾಪಂ ಸದಸ್ಯ, ದಿವಾಕರ್, ಸ್ಥಳೀಯ ಮುಖಂಡರು ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿ ವರ್ಗದವರು ಸಭೆಯಲ್ಲಿ ಉಪಸ್ಥಿತರಿದ್ದರು.