ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಹಳ್ಳಿಹಳ್ಳಿಗಳಲ್ಲೂ ವಿಶೇಷ ಗೋಪೂಜೆ ಆಚರಣೆ ಮಾಡಲಾಯಿತು.ಶಿವಮೊಗ್ಗ ತಾಲೂಕು ಕಾಚಿನಕಟ್ಟೆಯಲ್ಲಿ ಬೋರೇಗೌಡರು ಮತ್ತು ನಂಜುಂಡಪ್ಪನವರ ಮನೆಯಲ್ಲಿ ಗೋಪೂಜೆ ನೆರವೇರಿಸಿದರು. ರೈತರು ಜಾನುವಾರುಗಳ ಮೈ ತೊಳೆದು ಅರಿಶಿಣ, ಕುಂಕುಮವಿಟ್ಟು ಹೂವು, ತುಳಸಿ ಪತ್ರೆ, ಬಲೂನ್, ಟೇಪ್‌ಗಳನ್ನು ಕಟ್ಟಿ ಅಲಂಕರಿಸಿದ್ದರು. ಮನೆ ಮನೆಗಳಲ್ಲಿ ಗೋಪೂಜೆ ಮಾಡಲಾಯಿತು. ಪೂಜೆ ಬಳಿಕ ಗೋವುಗಳಿಗೆ ಎಡೆಯನ್ನು ಅರ್ಪಿಸಿದರು. ಬಳಿಕ ಮನೆ ಮುಂಭಾಗದಲ್ಲಿ ದೇವಿರಮ್ಮನ ಪೂಜೆ ಮಾಡಲಾಯಿತು. ಬಳಿಕ ಅಲ್ಲಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ನಡೆದವು.
*ಗೌತಮಪುರದಲ್ಲಿ ಸಂಭ್ರಮದ ದೀಪಾವಳಿ:ಆನಂದಪುರ: ದೀಪಾವಳಿ ಹಬ್ಬವನ್ನು ಅನೇಕ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಹಬ್ಬಗಳನ್ನು ಆಚರಿಸುತ್ತಾರೆ.
ಆದರೆ ಗೌತಮಪುರ ಗ್ರಾಮದಲ್ಲಿ ದೀಪಾವಳಿ ಬಲಿಪಾಡ್ಯ ದಿನದಂದು ವಿಶೇಷವಾಗಿ ಹಬ್ಬವನ್ನು ಆಚರಿಸಲಾಯಿತು. ಬಲಿಪಾಡ್ಯಮಿ ದಿನ ಬೆಳಗ್ಗೆ ಗೋವುಗಳಿಗೆ ಪೂಜೆ ಮಾಡಿ ಮೇವಿಗಾಗಿ ಹೊರಗಡೆ ಬಿಡುತ್ತಾರೆ. ಸಂಜೆ ಮನೆಗೆ ಬರುವಂತಹ ವೇಳೆಯಲ್ಲಿ ಹುರುಕಲು ಸಂಪ್ರೋಕ್ಷಣೆ ನಂತರ ಹಸುಗಳು ಮನೆಗೆ ತೆರಳುತ್ತವೆ.ಗ್ರಾಮದ ಎಲ್ಲಾ ದನಕರು, ಎತ್ತುಗಳನ್ನು ದನಗಾಯಿಗಳು ಮೇಬನ್ನುಣಿಸಲು ಸಂಜೆ ಮನೆಗೆ ಬರುವ ವೇಳೆಯಲ್ಲಿ ಗೌತಮಪುರ ತ್ಯಾಗರ್ತಿ ರಸ್ತೆಯ ಸಮೀಪದಲ್ಲಿರುವ ಹಗಲುದುರ್ಗಿ ಎಂಬ ಬನದ ಬಳಿ ಗ್ರಾಮಸ್ಥರು ಗ್ರಾಮದೇವರಾದ ಮಾರಿಕಲ್ಲು ಹಾಗೂ ಭೂತರಾಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದು. ದೇವರ ಕಟ್ಟೆಯ ಮೇಲಿದ್ದ ತ್ರಿಶೂಲದಿಂದ ಚುಚ್ಚಿ ಕೋಳಿಯನ್ನು ಬಲಿ ಕೊಡುತ್ತಾರೆ. ನಂತರ ಹಂದಿಯ ರಕ್ತ ತೆಗೆದು ಅನ್ನಕ್ಕೆ ಬೆರೆಸಿ ಹಗಲುದುರ್ಗಿ ದೇವಾಲಯದ ಬಳಿ ಗೋವುಗಳು ಮನೆಗೆ ತೆರಳುವಂತಹ ಸಮಯದಲ್ಲಿ ಗೋವುಗಳ ಮೈಮೇಲೆ ಬೀರುತ್ತಾರೆ. ಇದರಿಂದ ಜಾನುವಾರುಗಳಿಗೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಈ ಒಂದು ಸಂದರ್ಭದಲ್ಲಿ ಗ್ರಾಮದ ಸಾವಿರಾರು ದನಕರು ಹಸುಗಳು ಸಾಲಾಗಿ ಮನೆಗೆ ತಿರುಳುವಂತಹ ದೃಶ್ಯ ನೋಡಲು ಗ್ರಾಮಸ್ಥರು ರಸ್ತೆಯ ಬದಿಯಲ್ಲಿ ಕಾಯುತ್ತ ಕುಳಿತಿರುತ್ತಾರೆ. ಕೆಲ ಯುವಕರು ಕೇಕೆ ಹೊಡೆಯುತ್ತಾ ಪಟಾಕಿ ಸಿಡಿಸಿ ದನಕರು ಹಸು, ಎತ್ತುಗಳನ್ನು ಬೆದರಿಸುವುದರ ಮೂಲಕ ಅವುಗಳು ಓಡುವಂತೆ ಮಾಡುತ್ತಾರೆ. ಈ ಒಂದು ಪದ್ಧತಿ ಗ್ರಾಮದಲ್ಲಿ ಪುರಾತನದಿಂದ ನಡೆದುಕೊಂಡು ಬಂದಿದೆ ಒಟ್ಟಾರೆಯಾಗಿ ದೀಪಾವಳಿಯ ಬಲಿಪಾಡ್ಯಮಿ ದಿನದಂದು ಗ್ರಾಮದ ಎಲ್ಲರೂ ಒಂದಾಗಿ ಶ್ರದ್ಧಾ ಶಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸುವಂತಹ ಹಬ್ಬವಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))