ಸಾರಾಂಶ
ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸಿ.ಎನ್.ಹೊಸೂರು, ಪಿ.ರಂಗನಾಥಪುರ, ಕೊಮ್ಮಸಂದ್ರ ಗ್ರಾಮಗಳ ನಿವೇಶನ ರಹಿತರಿಗೆ ನಿವೇಶನ ಹಂಚುವ ಸಲುವಾಗಿ, ಗುರುವಾರ ಗ್ರಾಪಂ ಅಧ್ಯಕ್ಷ ಎಂ.ಮುರಳೀಧರ್ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮಸಭೆ ನಡೆಯಿತು.
ವಿಜಯಪುರ: ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸಿ.ಎನ್.ಹೊಸೂರು, ಪಿ.ರಂಗನಾಥಪುರ, ಕೊಮ್ಮಸಂದ್ರ ಗ್ರಾಮಗಳ ನಿವೇಶನ ರಹಿತರಿಗೆ ನಿವೇಶನ ಹಂಚುವ ಸಲುವಾಗಿ, ಗುರುವಾರ ಗ್ರಾಪಂ ಅಧ್ಯಕ್ಷ ಎಂ.ಮುರಳೀಧರ್ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮಸಭೆ ನಡೆಯಿತು.
ಗ್ರಾಪಂ ಪಿಡಿಒ ಆರ್.ಜಿ.ಸೌಮ್ಯ, ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಲು, ಸರ್ಕಾರದಿಂದ ನಿಗದಿಗೊಳಿಸಿರುವ ನಿಬಂಧನೆಗಳನ್ನು ಓದಿ ಹೇಳಿದರು. ನಿವೇಶನಗಳಿಗಾಗಿ ಮೂರು ಗ್ರಾಮಗಳಿಂದ ಸಲ್ಲಿಸಿರುವ ಅರ್ಜಿಗಳ ವಿವರ ಹಾಗೂ ಫಲಾನುಭವಿಗಳ ಪಟ್ಟಿ ಪ್ರಕಟಿಸಿದರು.ಸಿ.ಎನ್.ಹೊಸೂರು ಗ್ರಾಮಸ್ಥರು, ನಮ್ಮ ಗ್ರಾಮದಲ್ಲಿ ನಿವೇಶನಗಳಿಗಾಗಿ ೪ ಎಕರೆ ೧೩ ಗುಂಟೆ ಜಮೀನಿನನ್ನು ಮಂಜೂರು ಮಾಡಿಸಿಕೊಳ್ಳಲು ಹಲವು ವರ್ಷಗಳಿಂದ ನಿರಂತರ ಹೋರಾಟ ಮಾಡಿದ್ದೇವೆ. ನಿವೇಶನಗಳ ಜೊತೆಗೆ, ಸಮುದಾಯ ಭವನ, ಗ್ರಂಥಾಲಯ, ಆರೋಗ್ಯ ಕೇಂದ್ರಕ್ಕೂ ಜಾಗ ಬೇಕಿದೆ. ಆದ್ದರಿಂದ ಬೇರೆ ಗ್ರಾಮಗಳಿಗೆ ನಿವೇಶನ ಹಂಚಬಾರದು. ಒಂದು ವೇಳೆ ಗ್ರಾಮಗಳ ಫಲಾನುಭವಿಗಳಿಗೆ ವಿತರಿಸಬೇಕೆಂದರೆ, ಯಾವ ಗ್ರಾಮದಲ್ಲಿ ಹೆಚ್ಚು ಜಮೀನು ಲಭ್ಯವಿದೆಯೋ ಆ ಗ್ರಾಮದಲ್ಲಿ ಕೊಡಿ ಎಂದು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಗ್ರಾಮಸ್ಥರನ್ನು ಸಮಾಧಾನಪಡಿಸಿದ ಅಧ್ಯಕ್ಷ ಎಂ.ಮುರಳಿಧರ್, ಮಂಜೂರಾಗಿರುವ ಭೂಮಿಯಲ್ಲಿ ಸರ್ಕಾರಿ ಮಾನದಂಡದ ಪ್ರಕಾರ, ಸಮುದಾಯವಾರು ನಿವೇಶನಗಳನ್ನು ಮೀಸಲಿಡಬೇಕಾಗುತ್ತದೆ. ಎಲ್ಲರಿಗೂ ನಿವೇಶನಗಳು ಹಂಚಿಕೆಯಾದ ನಂತರ ಉಳಿದ ಜಮೀನಿನಲ್ಲಿ ಪಂಚಾಯಿತಿ ವ್ಯಾಪ್ತಿಯ ಇತರೆ ಹಳ್ಳಿಗಳಲ್ಲಿನ ನಿವೇಶನ ರಹಿತರಿಗೆ ಹಂಚಬಹುದು. ಆದರೆ, ನೀವು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ತಾಪಂ ಇಒ ಬಳಿ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ, ನೋಡಲ್ ಅಧಿಕಾರಿ ಡಾ.ಅನಿಲ್ ಕುಮಾರ್, ಸದಸ್ಯ ಎಂ.ಜಗದೀಶ್, ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಪುರ ಕೃಷ್ಣಪ್ಪ, ಕರ್ನಾಟಕ ದಲಿತ ಜನಸೇನೆ ರಾಜ್ಯಾಧ್ಯಕ್ಚ ಟಿ.ಭರತ್, ಮುಖಂಡರಾದ ಗೋವಿಂದಪ್ಪ, ಸದಸ್ಯರಾದ ಭಾಗ್ಯಲಕ್ಷ್ಮೀ, ಆನಂದಮ್ಮ, ಮುರಳಿಮೋಹನ್, ಹರೀಶ್, ಪದ್ಮಮ್ಮ, ಕೋಮಲಮ್ಮ, ಮುನಿಆಂಜಿನಪ್ಪ, ಜಯಮ್ಮ, ಲಾವಣ್ಯ, ಸುರೇಶ್, ಮುನಿಯಪ್ಪ, ಕೃಷ್ಣಮೂರ್ತಿ, ಮುನಿಲಕ್ಷ್ಮಮ್ಮ, ರಾಜಣ್ಣ ಹಾಜರಿದ್ದರು.