ಕಕ್ಕಬೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ

| Published : Jan 07 2025, 12:33 AM IST

ಸಾರಾಂಶ

ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು. ಭಾಗಮಂಡಲ ವಲಯ ಅರಣ್ಯಾಧಿಕಾರಿ ಗ್ರಾಮಸ್ಥರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಲಡಿ ಗ್ರಾಮದ ಸರ್ವೆ ಸಂಖ್ಯೆ 2/1 ರಲ್ಲಿ 240 ಹೆಕ್ಟೇರ್, ಯವಕಪಾಡಿ ಗ್ರಾಮದ ಸರ್ವೆ ಸಂಖ್ಯೆ 250/9ರಲ್ಲಿ 296.08 ಹೆಕ್ಟೇರ್ ಮತ್ತು ಕುಂಜಿಲ ಗ್ರಾಮದ ಸರ್ವೆ ಸಂಖ್ಯೆ 1/5 ರಲ್ಲಿ 241 ಹೆಕ್ಟೇರ್ ಸಿ ಮತ್ತು ಡಿ ವರ್ಗದ ಜಮೀನನ್ನು ಕರ್ನಾಟಕ ಅರಣ್ಯ ಅಧಿನಿಯಮ 1963ರ ಕಲಂ-05 ರನ್ವಯ ಮೀಸಲು ಅರಣ್ಯವೆಂದು ಘೋಷಿಸಲು ಆದೇಶ ಬಂದಿರುವುದಾಗಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ ವೈ ಅಶೋಕ್ ಕುಮಾರ್ ಹೇಳಿದರು.

ಸಿ ಮತ್ತು ಡಿ ವರ್ಗದ ಜಮೀನನ್ನು ಕರ್ನಾಟಕ ಅರಣ್ಯ ಅಧಿನಿಯಮ 1963ರ ಕಲಂ-05 ರನ್ವಯ ಮೀಸಲು ಅರಣ್ಯವೆಂದು ಘೋಷಿಸುವ ವಿಷಯದ ಕುರಿತಾಗಿ ಚರ್ಚಿಸಲು ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.

ಕಂದಾಯ ಪರಿವೀಕ್ಷಕ ರವಿ ಕುಮಾರ್ ಮಾತನಾಡಿ, ಸದರಿ ಸರ್ವೆ ಸಂಖ್ಯೆಯ ಜಮೀನಿನಲ್ಲಿ ನಮೂನೆ 57 ಮತ್ತು ನಮೂನೆ 53ರಲ್ಲಿ ಮಂಜೂರಾತಿಗಾಗಿ ಬಂದಿರುವ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಮಾಹಿತಿ ನೀಡಿದರು.

ಭಾಗಮಂಡಲ ವಲಯ ಅರಣ್ಯಾಧಿಕಾರಿ ಗ್ರಾಮಸ್ಥರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದರು. ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲ, ಯವಕಪಾಡಿ, ನಾಲಡಿ ಮತ್ತು ಮರಂದೋಡ ಗ್ರಾಮಗಳಲ್ಲಿ ಈಗಾಗಲೇ ವಾಸದ ಮನೆಯನ್ನು ನಿರ್ಮಿಸಿರುವ, ಕೃಷಿ ಮಾಡಿಕೊಂಡು ಅನುಭವ ಸ್ವಾಧೀನದಲ್ಲಿರುವ ಜಾಗವನ್ನು ಹೊರತುಪಡಿಸಿ, ಜಮ್ಮಾ ಮಲೆಗೆ ಹೋಗುವ ಬಂಡಿ ದಾರಿ, ಕುಡಿಯುವ ನೀರಿನ ಮೂಲ, ದೇವರ ಸ್ಥಾನಗಳಿಗೆ ಹೋಗುವ ದಾರಿಗೆ ಅಡ್ಡಿ ಪಡಿಸದಂತೆ ನಿರ್ಣಯ ಕೈಗೊಂಡು ಸಂಬಂಧಿಸಿದ ಇಲಾಖೆಯ ಅಧಿಕಾರಿಯವರಿಗೆ ಕಳುಹಿಸಿಕೊಡುವಂತೆ ಒಕ್ಕೋರಲಿನಿಂದ ತೀರ್ಮಾನಿಸಿದರು.

ಪಂಚಾಯಿತಿ ಅಧ್ಯಕ್ಷೆ ಶಿಲ್ಪ ಪಿ ಎಲ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾದ ವಿಶೇಷ ಸಭೆಯಲ್ಲಿ ಅಧ್ಯಕ್ಷರು ಮಾತನಾಡಿ, ಗ್ರಾಮಸ್ಥರ ಮನವಿಯನ್ನು ಸಂಬಂಧಿಸಿದ ಅಧಿಕಾರಿಯವರಿಗೆ ಕಳುಹಿಸಲು ತುರ್ತಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಗ್ರಾಮ ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಬೀನಾ ಸುಚಿತ್ರ, ಸದಸ್ಯರಾದ ಚೋಯಮಾಡಂಡ ಹರಿ ಮೊಣ್ಣಪ್ಪ,

ಲೀಲಾವತಿ, ನಂಬುಡಮಂಡ ಶೈಲ, ಭರತ್ ಚಂದ್ರ ದೇವಯ್ಯ, ಕುಂಡಂಡ ರಜಾಕ್, ಕೋಡಿಮಣಿಯಂಡ ಬೋಪಣ್ಣ, ಸಂಪನ್ ಅಯ್ಯಪ್ಪ ಸೇರಿದಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಭೂ ಮಾಪನ ಇಲಾಖೆ, ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಪಾಲ್ಗೊಂಡಿದ್ದರು.