ತಾಲೂಕು ಆಡಳಿತದಿಂದ ನಡೆದ ಭಗೀರಥ ಮಹರ್ಷಿ ಜಯಂತಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಕ್ಷೇತ್ರದಲ್ಲಿ ವಾಸಿಸುತ್ತಿರುವ ಉಪ್ಪಾರ ಸಮಾಜದ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಸುಮಾರು ₹15 ಕೋಟಿ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ ಭಗೀರಥ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತನಾಡಿ, ಉಪ್ಪಾರ ಸಮಾಜದ ಪ್ರಗತಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಈಗಾಗಲೇ ಪಟ್ಟಣದ ಹೊರವಲಯದಲ್ಲಿ ನಿರ್ಮಾಣದ ಹಂತದಲ್ಲಿರುವ ಭಗೀರಥ ಸಮುದಾಯ ಭವನಕ್ಕೆ ಈ ವರ್ಷಾಂತ್ಯದಲ್ಲಿ ₹3 ಕೋಟಿ ಅನುದಾನ ನೀಡಲಾಗುವುದು. ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಮುಂಬರುವ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕಲ್ಪಿಸಿ ಕೊಡುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ ಎಂದರು.

ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಮಲ್ನಾಡ್ ನಾಗರಾಜ್ ಮಾತನಾಡಿ, ಉಪ್ಪಾರ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿಕೊಡಬೇಕಿದೆ. ಅಪಾರ ದೈವ ಭಕ್ತಿ ಹೊಂದಿದ ಉಪ್ಪಾರ ಸಮಾಜ ಅಂದಿನ ಉಪ್ಪಿನ ವ್ಯಾಪಾರದೊಂದಿಗೆ ತಮ್ಮ ವೃತ್ತಿ ಮುಂದುವರಿಸಿ ಮಹಾತ್ಮ ಗಾಂಧೀಜಿಯವರೊಂದಿಗೆ ಉಪ್ಪಿನ ಸತ್ಯಾಗ್ರಹದಲ್ಲಿ ಇಡೀ ಸಮಾಜ ಅವರೊಂದಿಗೆ ಕೈ ಜೋಡಿಸುವ ಮೂಲಕ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಅತ್ಯಂತ ಹಿಂದುಳಿದ ವರ್ಗದ ಉಪ್ಪಾರ ಸಮಾಜದ ಬೆಳವಣಿಗೆಯಲ್ಲಿ ಸಮಾಜ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.


ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಯುವ ಪೀಳಿಗೆ ಜಯಂತಿ ಆಚರಣೆಗಳಲ್ಲಿ ಭಾಗವಹಿಸಿ ಸಮಾಜದ ಇತಿಹಾಸ ಅಭ್ಯಸಿಸಿದರೆ ಮಹಾನ್ ಪುರುಷರ ಆದರ್ಶ ತತ್ವಗಳು ತಿಳಿಯುತ್ತದೆ. ಭೂಮಿಗೆ ಗಂಗೆಯನ್ನು ತರಲು ಭಗೀರಥ ಮಹರ್ಷಿ ಪ್ರಯತ್ನ ನಡೆಸಿದ್ದು ಇತಿಹಾಸ. ಈಗ ಗಂಗೆಯನ್ನು ಉಳಿಸುವ ಪ್ರಯತ್ನ ನಡೆಸಬೇಕಿದೆ. ಸಮುದಾಯದವರು ಬೇಧಭಾವವಿಲ್ಲದೆ ಗಂಗೆಯನ್ನು ಪೂಜಿಸುತ್ತಾರೆ. ಯಾವುದೇ ಸಾಧನೆಗೆ ಭಗೀರಥ ಪ್ರಯತ್ನ ಇರಬೇಕು. ನೇಪಾಳದಲ್ಲಿ ಭಗೀರಥರ ದೇವಾಲಯವಿದ್ದು, ಸಮುದಾಯ ಸಂಘಟನೆಯಲ್ಲಿ ತೊಡಗಿಸಿಕೊಂಡು ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದ್ದು, ಪ್ರತಿಯೊಬ್ಬರೂ ಅವರ ಆದರ್ಶ ಮತ್ತು ತತ್ವ ಅಳವಡಿಸಿಕೊಂಡಾಗ ಜಯಂತಿ ಆಚರಣೆ ಅರ್ಥ ಪೂರ್ಣವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಟಿ.ಆರ್. ಲಕ್ಕಪ್ಪ ಉಪನ್ಯಾಸ ನೀಡಿದರು. ಉಪನ್ಯಾಸಕ ಸೋಮ ಶೇಖರ್, ಜಿಲ್ಲಾ ಕಾರ್ಯದರ್ಶಿ ಆನಂದಪ್ಪ. ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಬಾಬು, ಕಾರ್ಯದರ್ಶಿ ಸಪ್ತ ಕೋಟಿ ಧನಂಜಯ, ಉಪ್ಪಾರ ನೌಕರರ ಸಂಘದ ಜಿಲ್ಲಾಧ್ಯಕ್ಷ ವೈ.ಎಂ. ತಿಪ್ಪೇಶ್. ಸತೀಶ್, ಮಹೇಶ್, ಗುಜ್ಜೇನಹಳ್ಳಿ ತಿಪ್ಪೇಶಪ್ಪ, ಪಾತೇನಹಳ್ಳಿ ಚೌಡಪ್ಪ, ಸಾಣೇಹಳ್ಳಿ ವಿರೂಪಾಕ್ಷಪ್ಪ. ನಾಗರಾಜ್, ನಿಂಗಪ್ಪ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ದೇವರಾಜ್, ವಿಜೆಎನ್‌ಎಲ್ ಎಇಇ ತ್ಯಾಗರಾಜ್, ಬಿಸಿಎಂ ದೇವರಾಜ್, ಸಮಾಜ ಕಲ್ಯಾಣಾಧಿಕಾರಿ ನಟರಾಜ್ ಮತ್ತಿತರರಿದ್ದರು.

24ಕೆಕೆಡಿಯು1. ಕಡೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿಯಲ್ಲಿ. ಶಾಸಕ ಕೆ.ಎಸ್.ಆನಂದ್, ಸಿ.ಎಸ್.ಪೂರ್ಣಿಮಾ, ಮಲ್ನಾಡ್ ನಾಗರಾಜ್, ದೇವರಾಜ್ ಮತ್ತಿತರಿದ್ದರು.