ಮಾಗಡಿ: ಏಪ್ರಿಲ್‌ 25ರಂದು ಶನಿವಾರ ತಾಲೂಕಿನ ಚಕ್ರಬಾವಿ ವಿಎಸ್ಎಸ್‌ಎನ್ ಕಚೇರಿಯಲ್ಲಿ ನಡೆಯುವ ಬಹಿರಂಗ ಚರ್ಚೆಗೆ ನಾನು ಬರಲು ಸಿದ್ದ ಎಂದು ಶಾಸಕ ಬಾಲಕೃಷ್ಣರ ಆಹ್ವಾನಕ್ಕೆ ಮಾಜಿ ಶಾಸಕ ಎ.ಮಂಜುನಾಥ್ ಸ್ಪಷ್ಟನೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಾಲಕೃಷ್ಣ ಕುದೂರು ಬಿಡಿಸಿಸಿ ಬ್ಯಾಂಕ್ ನಕಲಿ ಚಿನ್ನದ ಹಗರಣ ಹಾಗೂ ಚಕ್ರಬಾವಿ ವಿಎಸ್ಎಸ್ಎನ್ ಹಗರಣದ ಬಗ್ಗೆ ಶನಿವಾರ ಬೆಳಗ್ಗೆ 11 ಗಂಟೆಗೆ ಚರ್ಚೆಗೆ ಬರುವಂತೆ ಶಾಸಕರ ಆಹ್ವಾನಕ್ಕೆ ನಾನು ಏಕಾಂಗಿಯಾಗಿ ಬಹಿರಂಗ ಸಭೆಗೆ ಬಂದು, ಕುದೂರು ನಕಲಿ ಚಿನ್ನದ ಹಗರಣ ಸೇರಿ ನಾನು ಮಾಡಿರುವ ಎಲ್ಲಾ ಆರೋಪಗಳಿಗೂ ಎಲ್ಲಾ ದಾಖಲೆಗಳನ್ನು ನೀಡಲು ಸಿದ್ಧನಿದ್ದೇನೆ. ಮೂರು ದಿನ ಚಕ್ರಬಾವಿಯಲ್ಲಿ ಬಹಿರಂಗ ಸಭೆ ನಡೆಯಲಿ. ಎಲ್ಲಾ ಆರೋಪಗಳಿಗೂ ಸಾಕ್ಷಿ ಸಮೇತ ಉತ್ತರ ಕೊಡಲು ಸಿದ್ಧನಿದ್ದೇನೆ. ಚರ್ಚೆಯಲ್ಲಿ ನಾನು ದಾಖಲೆ ಬಿಡುಗಡೆ ಮಾಡಿಯೇ ಮಾತನಾಡುತ್ತೇನೆ, ಬಾಲಕೃಷ್ಣ 5 ಬಾರಿ ಶಾಸಕರಾಗಿದ್ದು ನಾನು ಗೌರವಯುಕ್ತವಾಗಿಯೇ ಸರ್ ಅಥವಾ ಬಾಲಣ್ಣ ಎಂದೇ ಹೇಳುತ್ತೇನೆ. ನಾನು ಯಾವುದೇ ವೈಯಕ್ತಿಕ ವಿಚಾರ ಮಾತನಾಡುವುದಿಲ್ಲ. ಅವರೇನಾದರೂ ನನ್ನ ವೈಯಕ್ತಿಕ ವಿಚಾರ ಮಾತನಾಡಿದರೆ ನಾನು ಕೂಡ ಎಲ್ಲಾ ರೀತಿ ಅವರ ವಿಚಾರವನ್ನು ಮಾತನಾಡುತ್ತೇನೆ. ಆರೋಗ್ಯಕರ ಚರ್ಚೆ ಆಗಲಿ ಜನಗಳೇ ಉತ್ತರ ಕೊಡುತ್ತಾರೆ. ನನ್ನ ಕಾರ್ಯಕರ್ತರು ನನಗೆ ಶಕ್ತಿ ಕೊಟ್ಟಿದ್ದು, ಶನಿವಾರ ನಡೆಯುವ ಚರ್ಚೆಗೆ ಯಾವ ಕಾರ್ಯಕರ್ತರು ಅಲ್ಲಿಗೆ ಬರುವುದು ಬೇಡ, ನನ್ನ ಸಹಾಯಕರು ಒಬ್ಬರನ್ನು ಮಾತ್ರ ಕರೆದುಕೊಂಡು ಹೋಗುತ್ತಿದ್ದೇನೆ ಬಹಿರಂಗ ಚರ್ಚೆಯಲ್ಲಿ ಎಲ್ಲಾ ತೀರ್ಮಾನವಾಗಲಿ ಎಂದು ಎ.ಮಂಜುನಾಥ್ ಹೇಳಿದರು.

ಬಹಿರಂಗ ಚರ್ಚೆಗೆ ಸ್ಥಳ ನಿಗದಿ:

ಹಾಲಿ-ಮಾಜಿ ಶಾಸಕರ ಆರೋಪಗಳಿಗೆ ಶನಿವಾರ ಬೆಳಗ್ಗೆ 11 ಗಂಟೆಗೆ ತಾಲೂಕಿನ ಚಕ್ರಬಾವಿ ವಿಎಸ್ಎಸ್ ಎನ್ ಕಚೇರಿಯಲ್ಲಿ ಬಹಿರಂಗ ಚರ್ಚೆಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಗೊಂದಲ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಮಾಜಿ ಶಾಸಕ ಎ.ಮಂಜುನಾಥ್ ಅವರ ಜೆಡಿಎಸ್ ಕಚೇರಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಬಂದು ಮಾಹಿತಿ ಪಡೆದುಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ತಾಲೂಕಿನಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಕುತೂಹಲ ಮೂಡಿಸಿದ್ದು ಮಾಜಿ ಶಾಸಕರು ಮಾಡಿರುವ ಆರೋಪಗಳಿಗೆ ಯಾವಯಾವ ದಾಖಲಾತಿಗಳನ್ನು ಬಿಡುಗಡೆ ಮಾಡುತ್ತಾರೆ ಇದಕ್ಕೆ ಶಾಸಕರು ಹಾಗೂ ಅವರ ಸಹೋದರರು ಯಾವ ಉತ್ತರ ಕೊಡುತ್ತಾರೆ ಎಂಬ ಕುತೂಹಲ ಮೂಡಿಸಿದೆ.