ಸಾರಾಂಶ
ಶಿವಾನಂದ ಗೊಂಬಿ ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಸಿಗಲಿ, ಹೊಸ ತಾಲೂಕುಗಳಲ್ಲಿ ಸರ್ಕಾರಿ ಕಚೇರಿ, ಮೂಲಸೌಲಭ್ಯ, ರೈಲ್ವೆ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಗೆ ಆದ್ಯತೆ, ಸರ್ಕಾರಕ್ಕೆ ಶಕ್ತಿ ನೀಡಿದ ಸಾರಿಗೆ ಸಂಸ್ಥೆಗಳಿಗೂ ಸರ್ಕಾರ ಶಕ್ತಿ ನೀಡಲಿ...!ಇವು ಸಿದ್ದರಾಮಯ್ಯ ಸರ್ಕಾರದ ಮೇಲೆ ಈ ಭಾಗದ ಜನತೆ ಇಟ್ಟಿರುವ ನಿರೀಕ್ಷೆಗಳು. ಹುಬ್ಬಳ್ಳಿ-ಧಾರವಾಡ ಎಂದರೆ ರಾಜ್ಯದ ಎರಡನೆಯ ದೊಡ್ಡ ನಗರ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಸೌಲಭ್ಯಗಳನ್ನು ನೋಡಿದರೆ ಯಾವುದೇ ದೊಡ್ಡ ಹಳ್ಳಿಗಿಂತ ಕಡಿಮೆಯೇನಿಲ್ಲ ಎಂಬುದು ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತದೆ.
ಯಾವುದೇ ರಸ್ತೆಗೆ ಕಾಲಿಟ್ಟರೂ ಬರೀ ಧೂಳು. ತೆಗ್ಗು ಗುಂಡಿಗಳಿಂದ ಕೂಡಿದ ರಸ್ತೆಗಳು, ಎಂಟ್ಹತ್ತು ದಿನಗಳಿಗೊಮ್ಮೆ ಕುಡಿವ ನೀರು, ಅವ್ಯವಸ್ಥಿತ ಚರಂಡಿ, ರಸ್ತೆಗಳಲ್ಲೇ ಅಡ್ಡಾದಿಡ್ಡಿಯಾಗಿ ನಿಂತಿರುವ ವಾಹನಗಳೇ ಗೋಚರಿಸುತ್ತವೆ. ಈ ನಗರಗಳನ್ನು ಸುವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಬೇಕು. ಅದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಮೂಲಸೌಲಭ್ಯ ಕಲ್ಪಿಸಲೆಂದೇ ಹುಬ್ಬಳ್ಳಿ-ಧಾರವಾಡಕ್ಕೆ ಕನಿಷ್ಠವೆಂದರೂ ₹1000 ಕೋಟಿ ವಿಶೇಷ ಅನುದಾನ ಘೋಷಿಸಬೇಕು ಎಂಬ ಬೇಡಿಕೆ ಇಲ್ಲಿನ ನಾಗರಿಕರದ್ದು.ಹೊಸ ತಾಲೂಕು: ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಂದಾಯ ಸಚಿವರಾಗಿದ್ದ ವೇಳೆ 43 ಹೊಸ ತಾಲೂಕುಗಳನ್ನು ಘೋಷಿಸಿದ್ದುಂಟು. ಹೊಸ ತಾಲೂಕುಗಳಾಗಿ ಏಳೆಂಟು ವರ್ಷವಾದರೂ ಸರಿಯಾಗಿ ಸರ್ಕಾರಿ ಕಚೇರಿಗಳು ಬಂದಿಲ್ಲ. ಕಚೇರಿಗಳಿದ್ದರೂ ಅಧಿಕಾರಿ ವರ್ಗ ಇಲ್ಲ. ಹೊಸ ತಾಲೂಕು ಎನ್ನುವುದು ಬರೀ ಹೆಸರಿಗಷ್ಟೇ ಸೀಮಿತವಾದಂತಾಗಿವೆ. ಆದಕಾರಣ ಹೊಸ ತಾಲೂಕು ಕೇಂದ್ರಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಕೆಲವೊಂದಿಷ್ಟು ಯೋಜನೆಗಳನ್ನು ಘೋಷಿಸಬೇಕು.
ರೈಲ್ವೆ ಯೋಜನೆ: ಸಾಮೂಹಿಕ ಸಾರಿಗೆ ವ್ಯವಸ್ಥೆಯಲ್ಲಿ ರೈಲ್ವೆಯದ್ದು ಬಹುದೊಡ್ಡ ಪಾತ್ರ. ರೈಲ್ವೆಯ ಯಾವುದೇ ಯೋಜನೆ ಪೂರ್ಣಗೊಳ್ಳಬೇಕೆಂದರೂ ರಾಜ್ಯ ಸರ್ಕಾರದ ಪಾತ್ರ ಬಹುದೊಡ್ಡದು. ಆದರೆ ಕರ್ನಾಟಕದ ಮಟ್ಟಿಗೆ ಭೂಸ್ವಾಧೀನ ಪ್ರಕ್ರಿಯೆಯದ್ದೇ ದೊಡ್ಡ ಸಮಸ್ಯೆಯೆನಿಸಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವುದು ರಾಜ್ಯ ಸರ್ಕಾರದ ಕೆಲಸ. ಆದರೆ ಈ ಕೆಲಸ ಸರಿಯಾಗುತ್ತಿಲ್ಲ. ಹೀಗಾಗಿ ಹೊಸ ರೈಲು ಮಾರ್ಗ ಪೂರ್ಣ ಮುಗಿಸುವುದು ಒತ್ತಟ್ಟಿಗಿರಲಿ, ಕೆಲಸ ಪ್ರಾರಂಭಕ್ಕೂ ವಿಳಂಬವಾಗುತ್ತಿದೆ. ಆದ ಕಾರಣ ಕರ್ನಾಟಕದಲ್ಲಿನ ರೈಲ್ವೆ ಯೋಜನೆಗಳ ಭೂಸ್ವಾಧೀನಕ್ಕಾಗಿಯೇ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಲಿ. ಬೆಳಗಾವಿ-ಧಾರವಾಡ, ತಾಳಗುಪ್ಪ-ಶಿರಸಿ- ಹುಬ್ಬಳ್ಳಿ, ಸೇರಿದಂತೆ ಯೋಜನೆಗಳ ಭೂಸ್ವಾಧೀನ ಶೀಘ್ರವಾಗುವಂತೆ ನೋಡಿಕೊಳ್ಳಬೇಕು ಎಂಬ ಒತ್ತಾಯ ರೈಲ್ವೆ ಬಳಕೆದಾರರದ್ದು.ವಾಯವ್ಯ ಸಾರಿಗೆಗೆ ₹ 1000 ಕೋಟಿ ಅನುದಾನ ನೀಡಲಿ: ಇನ್ನು ಶಕ್ತಿ ಯೋಜನೆ ಜಾರಿಯಾದ ಮೇಲೆ ಸರ್ಕಾರದ ಶಕ್ತಿ ತುಂಬಿದೆ. ಇನ್ನು ಸದಾಕಾಲ ನಷ್ಟದಲ್ಲಿರುವ 6 ಜಿಲ್ಲೆ 9 ವಿಭಾಗಗಳನ್ನು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಲಿ.
ಶಕ್ತಿ ಯೋಜನೆಯ ಟಿಕೆಟ್‌ನ ಮೌಲ್ಯಕ್ಕಿಂತ ಶೇ. 40ರಷ್ಟು ಕಡಿಮೆ ಹಣ ಬರುತ್ತಿದೆ. ಶಕ್ತಿ ಯೋಜನೆಯಿಂದ ಬರಬೇಕಿರುವ ಬಾಕಿ ಹಣ ನೀಡಬೇಕು. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಶಾಲಾ- ಕಾಲೇಜ್ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕಿದೆ. ಅದಕ್ಕಾಗಿ ವಾಯವ್ಯ ಸಾರಿಗೆಗೆ ಕನಿಷ್ಠವೆಂದರೂ ಇನ್ನು 1000 ಬಸ್‌ಗಳ ಅಗತ್ಯವಿದೆ.ನಿವೃತ್ತರಾದವರಿಗೆ ರಜೆ ನಗದೀಕರಣದ ಹಣ ಕೂಡ ಕೊಡಲು ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. 2018-19ರಿಂದಲೇ ಬಾಕಿಯುಳಿಸಿಕೊಂಡಿದೆ. ಗ್ರ್ಯಾಚುಟಿ, ಅಪಘಾತವಾದಾಗ ಕೊಡಬೇಕಾದ ಪರಿಹಾರ ₹ 60-70 ಕೋಟಿ ಬಾಕಿಯುಳಿದಿದೆ. ಇನ್ನು ಸಂಸ್ಥೆ ಪ್ರತಿದಿನ ಕನಿಷ್ಠವೆಂದರೂ ₹1 ಕೋಟಿ ನಷ್ಟದಲ್ಲೇ ಸಾಗುತ್ತಿದೆ. ಸಂಸ್ಥೆಯ ಆಸ್ತಿಗಳನ್ನೆಲ್ಲ ಅಡವಿಟ್ಟು ಸಂಸ್ಥೆಯನ್ನು ನಿಭಾಯಿಸಲಾಗುತ್ತಿದೆ. ಆದಕಾರಣ ಸಂಸ್ಥೆಯನ್ನು ಮೇಲೆತ್ತಬೇಕಾದರೆ ವಿಶೇಷ ಅನುದಾನ ನೀಡಬೇಕು. ಈ ಬಜೆಟ್‌ನಲ್ಲಿ ಕನಿಷ್ಠವೆಂದರೂ ₹1 ಸಾವಿರ ಕೋಟಿಯನ್ನಾದರೂ ಮೀಸಲಿಡಬೇಕು ಎಂಬ ಬೇಡಿಕೆ ಸಂಸ್ಥೆಯ ನೌಕರ ವರ್ಗದ್ದು.