ಸಾರಾಂಶ
ಬೆಂಗಳೂರಿನಲ್ಲಿ ಜೈಲಿನಲ್ಲಿದ್ದ ವೇಳೆ ವಿಶೇಷ ಸೌಲಭ್ಯ ನೀಡಲು ಸಹಕಾರ ನೀಡಿದವರು ಯಾರು? ಫೋಟೋ ತೆಗೆದವರು ಯಾರು?
ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೋಮವಾರ ಬಳ್ಳಾರಿ ಜೈಲಿನಲ್ಲಿ ವಿಚಾರಣೆಗೆ ನಡೆಸಿದರು.
ಬೆಂಗಳೂರಿನಲ್ಲಿ ಜೈಲಿನಲ್ಲಿದ್ದ ವೇಳೆ ವಿಶೇಷ ಸೌಲಭ್ಯ ನೀಡಲು ಸಹಕಾರ ನೀಡಿದವರು ಯಾರು? ಫೋಟೋ ತೆಗೆದವರು ಯಾರು? ಸಿಗರೇಟ್ ಸೇದುವ ಫೋಟೋ ಮತ್ತು ವೀಡಿಯೋ ವೈರಲ್ ಆಗಿದ್ದು, ಉದ್ದೇಶಪೂರ್ವಕವಾಗಿಯೇ ಫೋಟೋ ವೈರಲ್ ಮಾಡಲಾಗಿತ್ತೇ? ಸಿಗರೇಟ್ ಜತೆಗೆ ಮತ್ತಿತರ ಯಾವ ಸೌಕರ್ಯಗಳು ಬೆಂಗಳೂರು ಜೈಲಿನಲ್ಲಿ ಸಿಗುತ್ತಿದ್ದವು? ಯಾವ ಜೈಲು ಅಧಿಕಾರಿಗಳ ಜತೆ ನೀವು ಸಂಪರ್ಕದಲ್ಲಿದ್ದೀರಿ? ನಿಮ್ಮ ಸಹಚರ ಆರೋಪಿಗಳಿಗೆ ಮತ್ಯಾವ ಸೌಕರ್ಯಗಳು ಬೆಂಗಳೂರು ಜೈಲಿನಲ್ಲಿ ಸಿಗುತ್ತಿದ್ದವು ಎನ್ನುವುದು ಸೇರಿದಂತೆ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ವಿಚಾರಣೆ ವೇಳೆ ನಟ ದರ್ಶನ್ ಅವರಿಂದ ಕೇಳಿ, ದಾಖಲಿಸಿಕೊಳ್ಳಲಾಗಿದೆ.ವಿಚಾರಣೆ ಹಿನ್ನೆಲೆಯಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದ ಹೈ ಸೆಕ್ಯೂರಿಟಿ ಸೆಲ್‌ನಿಂದ ಸಂದರ್ಶಕರ ಕೊಠಡಿಗೆ ಭದ್ರತಾ ಸಿಬ್ಬಂದಿಯೊಂದಿಗೆ ನಟ ದರ್ಶನ್ ಅವರನ್ನು ಕರೆ ತರಲಾಯಿತು. ಕೆಲ ಹೊತ್ತಿನ ಬಳಿಕ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಟ ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸಿದರು.
ತನಿಖಾಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ದರ್ಶನ್, ಪ್ರತಿ ಪ್ರಶ್ನೆ ಉತ್ತರ ವೇಳೆ ತಡಕಾಡುತ್ತಿದ್ದರು. ಕೆಲ ಪ್ರಶ್ನೆಗಳಿಗೆ ಉತ್ತರ ನೀಡದೆ ಮೌನ ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಕುರಿತು ನಟ ದರ್ಶನ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಲೆ ಆರೋಪದಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ನಟ ದರ್ಶನ್ ಅವರಿಗೆ ರಾಜಾತಿಥ್ಯ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಕೆಗೆ ತನಿಖಾಧಿಕಾರಿಗಳ ತಂಡವನ್ನು ರಚಿಸಿ ಸರ್ಕಾರ ಆದೇಶಿಸಿತ್ತು.ಈ ಹಿನ್ನೆಲೆ ತನಿಖಾ ತಂಡದ ಅಧಿಕಾರಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಬಳ್ಳಾರಿ ಜೈಲಿಗೆ ಸೋಮವಾರ ಆಗಮಿಸಿದ್ದರು.