ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಗಳಲ್ಲಿನ ವೇ ಬ್ರಿಡ್ಜ್‌ಗಳು ಹಾಗೂ ತೂಕ ಅಳತೆ ಸಾಧನಗಳ ವಿಶೇಷ ತಪಾಸಣೆಗೆ ಕಾನೂನು ಮಾಪನಶಾಸ್ತ್ರ ಇಲಾಖೆ ಮುಂದಾಗಿದೆ.ಬಾಗಲಕೋಟೆ, ಕಬ್ಬು ಬೆಳೆಗಾರರು, ಕಾನೂನು ಮಾಪನಶಾಸ್ತ್ರ, ವೇ ಬ್ರಿಡ್ಜ್‌ಗಳು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಗಳಲ್ಲಿನ ವೇ ಬ್ರಿಡ್ಜ್‌ಗಳು ಹಾಗೂ ತೂಕ ಅಳತೆ ಸಾಧನಗಳ ವಿಶೇಷ ತಪಾಸಣೆಗೆ ಕಾನೂನು ಮಾಪನಶಾಸ್ತ್ರ ಇಲಾಖೆ ಮುಂದಾಗಿದೆ.

ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ವ್ಯಾಪ್ತಿಯಲ್ಲಿರುವ ಸಕ್ಕರೆ ಕಾರ್ಖಾನೆಗಳ ವೇ ಬ್ರಿಡ್ಜ್‌ಗಳನ್ನು ಪರಿಶೀಲಿಸಲು ಸಹಾಯಕ ನಿಯಂತ್ರಕರು ಹಾಗೂ ತನಿಖಾ ದಳಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಅ.23ರಿಂದ ಕಬ್ಬು ಅರೆಯುವ ಹಂಗಾಮು ಮುಕ್ತಾಯವಾಗುವವರೆಗೆ ನಿಯಮಿತವಾಗಿ ತಪಾಸಣೆ ನಡೆಸಲಿವೆ.

ಕಾನೂನು ಮಾಪನಶಾಸ್ತ್ರ ನಿಯಂತ್ರಕ ಸಿ.ಎನ್. ಮಂಜುನಾಥ ಅ.22ರಂದು ಹೊರಡಿಸಿರುವ ಆದೇಶದನ್ವಯ ಕಾನೂನು ಮಾಪನಶಾಸ್ತ್ರ ಕಾಯ್ದೆ-2009ರ ಕಲಂ 14(3)ರ ಅಡಿಯಲ್ಲಿ ಅಧಿಕಾರ ನೀಡಲಾಗಿದೆ. ತಪಾಸಣೆ ಸಂದರ್ಭದಲ್ಲಿ ಸರ್ಕಾರದ ನಿಗದಿತ ಮಾದರಿ ಕಾರ್ಯಸೂಚಿ ಹಾಗೂ ವಿಧಿ-ವಿಧಾನಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ವೇ ಬ್ರಿಡ್ಜ್‌ಗಳು ಮತ್ತು ತೂಕ ಅಳತೆ ಸಾಧನಗಳಲ್ಲಿ ಯಾವುದೇ ಲೋಪ, ನಿಯಮ ಉಲ್ಲಂಘನೆ ಅಥವಾ ಅಕ್ರಮ ಕಂಡುಬಂದಲ್ಲಿ ಸಂಬಂಧಿಸಿದ ಸಕ್ಕರೆ ಕಾರ್ಖಾನೆಮಾಲೀಕರ ವಿರುದ್ಧ ನಿಯಮಾನುಸಾರ ಮೊಕದ್ದಮೆ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಪಾಸಣೆ ಅವಧಿಯಲ್ಲಿ ದಾಖಲಾದ ಪ್ರಕರಣಗಳ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿಸಿದ ಕ್ಷೇತ್ರವ್ಯಾಪ್ತಿಯ ಸಹಾಯಕ ನಿಯಂತ್ರಕರಿಗೆ ವಿವರಗಳನ್ನು ಹಸ್ತಾಂತರಿಸುವಂತೆ ಆದೇಶಿಸಲಾಗಿದೆ.

ತಪಾಸಣೆ ತಂಡಗಳು ತಮ್ಮ ದೈನಂದಿನ ಕಾರ್ಯಗಳ ಜತೆಗೆ ಸಕ್ಕರೆ ಕಾರ್ಖಾನೆಗಳ ವೇ ಬ್ರಿಡ್ಜ್‌ಗಳ ಪರಿಶೀಲನೆ ನಡೆಸಬೇಕು. ಸಂಬಂಧಿಸಿದ ಕ್ಷೇತ್ರವ್ಯಾಪ್ತಿಯ ಉಪ ನಿಯಂತ್ರಕರು ತಪಾಸಣೆ ಕಾರ್ಯಗಳ ಮೇಲುಸ್ತುವಾರಿ ವಹಿಸಿ, ಕೈಗೊಂಡ ಕ್ರಮಗಳ ವರದಿ ಕ್ರೋಡೀಕರಿಸಿ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ವಿಶೇಷ ತಪಾಸಣೆಯಿಂದ ಕಬ್ಬು ತೂಕದಲ್ಲಿ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುವುದರ ಜೊತೆಗೆ ವೇ ಬ್ರಿಡ್ಜ್‌ಗಳ ನಿಖರತೆ ಹಾಗೂ ಕಾನೂನುಬದ್ಧ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಲು ಇಲಾಖೆ ಕ್ರಮ ಕೈಗೊಂಡಿದೆ.

ಜಿಲ್ಲೆಯ 9 ಕಾರ್ಖಾನೆಗಳ ತಪಾಸಣೆ: ಕುಂದರಗಿಯ ಬಾಗಲಕೋಟೆ ಜಿಲ್ಲೆಯ ಜೆಮ್ ಶುಗರ್ಸ್‌ , ಸಮೀರವಾಡಿಯ ಗೋದಾವರಿ ಶುಗರ್ಸ್‌ , ಉತ್ತೂರು ಇಂಡಿಯನ್ ಕೇನ್ಪವರ್ಜ, ಹಿರೇಪಡಸಲಗಿಯ ಜಮಖಂಡಿ ಶುಗರ್, ಶಿರೂರದ ಮೇಲ್ ಟ್ರೊ ಶುಗರ್ಸ್‌, ಕಲ್ಲಾಪುರ ಎಂ.ಆರ್.ಎನ್. ಕೇನ್ ಪವರ್, ಮುಧೋಳ ನಿರಾಣಿ ಶುಗರ್ಸ್‌, ಸಿದ್ದಾಪುರದ ಪ್ರಭುಲಿಂಗೇಶ್ವರ ಶುಗರ್ಸ್‌ ಕೆರಕಲಮಟ್ಟಿಯ ಕೇದಾರನಾಥ ಶುಗರ್ಸ್‌ ಅಂಡ್ ಆಗ್ರೋ ಪ್ರಾಡಕ್ಟ್ ಲಿ.ಸೇರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವೇ ಬ್ರಿಡ್ಜ್‌ಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ.