ನಶಾ ವಸ್ತುಗಳ ಸೇವನೆಯಷ್ಟೇ ವ್ಯಸನವಲ್ಲ. ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ಏಕಾಗ್ರತೆ ಕಳೆದುಕೊಳ್ಳುತ್ತಿರುವುದು ಆತಂಕಕಾರಿ

ಕನ್ನಡಪ್ರಭ ವಾರ್ತೆ ಮೈಸೂರುಮಾದಕ ವಸ್ತು, ಮೊಬೈಲ್ ಬಳಕೆಯಿಂದ ಯುವ ಸಮೂಹವು ತಮ್ಮತನ ಕಳೆದುಕೊಂಡು ದೀರ್ಘಕಾಲ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎಂದು ಮುಂಬೈನ ಕಾರ್ಪೊರೇಟಿಂಗ್ ತರಬೇತುದಾರ ಹಾಗೂ ಸಮಾಲೋಚಕ ಡಾ. ಸಚಿನ್‌ ಪರಬ್‌ ತಿಳಿಸಿದರು.ನಗರದ ಮಾನಸಗಂಗೋತ್ರಿಯ ಪ್ರೊ.ಕೆ.ಎಸ್. ರಂಗಪ್ಪ ಸಭಾಂಗಣದಲ್ಲಿ ಮೈಸೂರು ವಿವಿ ಸ್ಕೂಲ್‌ ಆಫ್‌ ಪ್ಲಾನಿಂಗ್‌ ಅಂಡ್‌ ಆರ್ಟಿಟೆಕ್ಚರ್‌ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ಸಕಾರಾತ್ಮಕ ಚಿಂತನೆ ಮತ್ತು ನಶಾ ಮುಕ್ತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಶಾ ವಸ್ತುಗಳ ಸೇವನೆಯಷ್ಟೇ ವ್ಯಸನವಲ್ಲ. ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ಏಕಾಗ್ರತೆ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಯುವ ಸಮೂಹವನ್ನು ಎಚ್ಚರಿಸುವ ಕೆಲಸ ಆಗಬೇಕಿತ್ತು. ಆದರೆ, ದೇಶದಲ್ಲಿ ಉನ್ನತ ಪ್ರಶಸ್ತಿ ಪಡೆದವರೇ ಜೂಜಾಟದ ಜಾಹೀರಾತು ನೀಡುತ್ತಿದ್ದಾರೆ ಎಂದು ಅವರು ವಿಷಾದಿಸಿದರು.ಮಾದಕ ವಸ್ತು ಮಾರುವವರು ಶಾಲಾ ಕಾಲೇಜು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಗುರಿಯಾಗಿಸಿದ್ದಾರೆ. ಭಾರತದ ಆರ್ಥಿಕತೆ ಹಾಗೂ ಸಾಮಾಜಿಕ ವ್ಯವಸ್ಥೆ ಬುಡಮೇಲು ಮಾಡುವ ಒಳಸಂಚು ಹಿಂದಿನಿಂದಲೂ ನಡೆಯುತ್ತಿದೆ. ಯುವ ಸಮೂಹವನ್ನು ವ್ಯಸನಿಗಳನ್ನಾಗಿ ಮಾಡುವುದು ಅದರ ಒಂದು ಭಾಗವಾಗಿರುವ ಸಾಧ್ಯತೆ ಹೆಚ್ಚಿದೆ ಎಂದರು.ಪಂಜಾಬ್‌ ರಾಜ್ಯವು ವರ್ಷಗಳ ಹಿಂದೆ ಸದೃಢರನ್ನು ಹೊಂದಿತ್ತು. ಈಗ ಮಾದಕ ವ್ಯಸನದ ಕಾರಣದಿಂದ ಆ ರಾಜ್ಯದ ಹೆಸರು ಕೆಡುವಂತಾಗಿದೆ. ಅಮೃತಸರದ ಗ್ರಾಮವೊಂದನ್ನು ವಿಧವೆಯರ ಗ್ರಾಮ ಎಂದು ಕರೆಯುತ್ತಾರೆ. ಏಕೆಂದರೆ ಅಲ್ಲಿನ ಪುರುಷರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಲೇ ಲಡಾಕ್‌ ಹಾಗೂ ಉತ್ತರ ಭಾರತದ ಸ್ಥಿತಿ ಗಂಭೀರವಾಗಿದೆ. ಅಲ್ಲಿನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನೇ ಡ್ರಗ್‌ ಪೆಡ್ಲರ್‌ ಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ನಮ್ಮ ನಗರದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ ಎಂದು ಅವರು ಎಚ್ಚರಿಸಿದರು. ಅಂಕಪಟ್ಟಿಗಿಂತ ಮನಸ್ಥಿತಿ ಮುಖ್ಯಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ಮಾತನಾಡಿ, ವಿದ್ಯಾರ್ಥಿಗಳು ಪದವಿ ಅಂಕಪಟ್ಟಿಗಾಗಿ ಕಾಲೇಜಿಗೆ ಬರುತ್ತಿದ್ದಾರೆ. ಆದರೆ, ಜೀವನದಲ್ಲಿ ಅಂಕಪಟ್ಟಿಗಿಂತ ಮನಸ್ಥಿತಿ ಪ್ರಾಮುಖ್ಯತೆ ಪಡೆಯುತ್ತದೆ. ಪೋಷಕರು ಕಷ್ಟಪಟ್ಟು ಓದಲು ಇಲ್ಲಿಗೆ ಕಳುಹಿಸುತ್ತಾರೆ. ಸಾಮಾಜಿಕ ಜವಬ್ದಾರಿ ಇರಿಸಿಕೊಂಡು ಅವರ ಶ್ರಮ ವ್ಯರ್ಥವಾಗದಂತೆ ಶ್ರಮವಹಿಸಿ ಓದಬೇಕು ಎಂದು ಕರೆ ನೀಡಿದರು.ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ, ಈಶ್ವರೀಯ ಬ್ರಹ್ಮಕುಮಾರಿ ವಿವಿ ಮುಖ್ಯ ಸಂಚಾಲಕಿ ಬಿ.ಕೆ. ಲಕ್ಷ್ಮೀಜಿ, ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ಮುಖ್ಯಸ್ಥ ಪ್ರೊ.ಎಚ್‌.ಎನ್‌. ನಾಗೇಂದ್ರ, ಸಂಯೋಜಕ ಪ್ರೊ.ಎಚ್‌.ಎಸ್‌. ಕುಮಾರ್‌, ನಿರ್ದೇಶಕ ಪ್ರೊ. ಪ್ರಮೋದ್‌ ಎಂ. ಗವಾರಿ ಮೊದಲಾದವರು ಇದ್ದರು.----ಕೋಟ್...ಕುತೂಹಲವು ಮಾದಕ ವ್ಯಸನ ಸೇವನೆ ಮಾಡುವಂತೆ ಮಾಡುತ್ತದೆ, ನಂತರ ಅದನ್ನು ದುರುಪಯೋಗ ಮಾಡುತ್ತೇವೆ, ಬಳಿಕ ಅದು ಚಟವಾಗಿ ಬೆಳೆಯುತ್ತದೆ. ಶಿಕ್ಷಣದ ಉದ್ದೇಶ ಮರೆಯುತ್ತೇವೆ.- ಡಾ. ಸಚಿನ್‌ ಪರಬ್‌, ಸಮಾಲೋಚಕ, ಮುಂಬೈ----ವಿದ್ಯಾವಂತರೇ ಮಾದಕ ವಸ್ತುಗಳನ್ನು ಸೇವಿಸುತ್ತಿರುವುದು ದುರಂತ. ಆ ಮೂಲಕ ಯುವ ಸಮೂಹವು ತಾವೇ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಉತ್ತಮ ಆಹಾರ ಸೇವನೆ ಹಾಗೂ ಧನಾತ್ಮಕ ಚಿಂತನೆ ನಮ್ಮ ಬದುಕು ಬದಲಾಯಿಸುತ್ತದೆ.- ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿವಿ