ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 61 ವಿಷಯಗಳ ಮೇಲೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು:
ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 61 ವಿಷಯಗಳ ಮೇಲೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಪೈಕಿ, ಐದು ಅಜೆಂಡಾ ರಾಜ್ಯದ್ದು ಬಿಟ್ಟರೆ, ಬೇರೆ ಎಲ್ಲ ಅಜೆಂಡಾ ಕರಾವಳಿಗೆ ಮೀಸಲು ಎಂಬುದು ವಿಶೇಷ.ಮಂಗಳೂರು ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಯನ್ನು 60ರಿಂದ 200ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಕರಾವಳಿ ಮೀನುಗಾರಿಕೆಯ ಆರ್ಥಿಕ ಚಟುವಟಿಕೆಯನ್ನು ಇನ್ನಷ್ಟು ವಿಸ್ತರಿಸಲು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕರಾವಳಿಯನ್ನು ವಿಶೇಷ ಸಮುದ್ರ ವಲಯ (ಎಸ್‌ಎಂಝಡ್) ಎಂದು ಅಧಿಸೂಚನೆಗೆ ತೀರ್ಮಾನಿಸಲಾಗಿದೆ.
ಜೊತೆಗೆ, ಉಡುಪಿಯ ಕಾರ್ಕಳದಲ್ಲಿ ಶಿಲ್ಪಕಲಾ ಕ್ಲಸ್ಟರ್ ನಿರ್ಮಾಣಕ್ಕೆ ₹20 ಕೋಟಿ, ಗುರುಪುರ-ನೇತ್ರಾವತಿ ನದಿಗಳಲ್ಲಿ ಮಂಗಳೂರು ಜಲ ಮೆಟ್ರೋ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಸಂತ ಲಾರೆನ್ಸ್ ಚರ್ಚ್ ಅತ್ತೂರು, ಶ್ರೀನಾರಾಯಣಗುರು ಧರ್ಮಸಂಘಂ ಟ್ರಸ್ಟ್ ಶಿವಗಿರಿ ಕೇರಳ ಇದರಡಿ ಗುರುಧರ್ಮ ಪ್ರಚಾರಣಾ ಸಭಾ, ಶ್ರೀಗುರುಬ್ರಹ್ಮ ಮುಗೇರ್ಕಳ ದೇವಸ್ಥಾನ ಪಡುಬೆಳ್ಳೆ, ಕರಾವಳಿ ಲೇಖಕಿಯರ ವಾಚಕಿಯರ ಸಂಘಗಳಿಗೆ ಭೂಮಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ.ಇತಿಹಾಸ ಪ್ರಸಿದ್ಧ ದೇವಾಲಯಗಳಾದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ₹5 ಕೋಟಿ, ಒಡಿಯೂರು ಮಠ, ಶ್ರೀಧಾಮ ಮಾಣಿಲ ಮಠ, ಕಾಳಿಕಾಂಬ ಆಂಜನೇಯ ಸ್ವಾಮಿ ದೇವಸ್ಥಾನ ಕುಕ್ಕಾಜೆ, ಕಾಣಿಯೂರು ಚಾಮುಂಡೇಶ್ವರಿ ಕ್ಷೇತ್ರ ಕನ್ಯಾನ, ಪಿಳ್ಳಿ ಚಾಮುಂಡಿ ದೈವಸ್ಥಾನ ಕೊಂಡಾಣ, ಶ್ರೀರಾಮ ಕ್ಷೇತ್ರ ಕನ್ಯಾಡಿ, ಕೇಮಾರು ಮಠಗಳಿಗೆ ತಲಾ ₹1 ಕೋಟಿ ನೀಡಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಇದೇ ವೇಳೆ, ಕರಾವಳಿಯ ಒಟ್ಟು 11 ಮಸೀದಿ ಹಾಗೂ ಚರ್ಚ್‌ಗಳಿಗೆ ಅನುದಾನ ಮಂಜೂರು ಮಾಡಲಾಗಿದೆ. ಮಂಗಳೂರು, ಉಡುಪಿಯಲ್ಲಿ ಫಿಶರೀಸ್ ಪಾರ್ಕ್‌ಗೆ ಜಾಗ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ, ಕಂಬಳಕ್ಕೆ ನೀಡುತ್ತಿದ್ದ ₹40 ಲಕ್ಷ ಮೊತ್ತವನ್ನು ₹1 ಕೋಟಿಗೆ ಏರಿಕೆ ಮಾಡಲಾಗಿದೆ.ಮಂಗಳೂರಿನ ಕದ್ರಿ ಪಾರ್ಕ್ ಬಳಿ 5 ಎಕರೆ ಜಾಗದಲ್ಲಿ ‘ಮಂಗಳೂರು ಐ’ ನಿರ್ಮಾಣಕ್ಕೆ ಕ್ರಮ, ಗುರುಪುರದಲ್ಲಿ ಪ್ರತ್ಯೇಕ ಪ್ರವಾಸಿ ನಗರ ನಿರ್ಮಾಣ, ಮಂಗಳೂರಿನ ಎಕ್ಕೂರಿನಲ್ಲಿ ₹30 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸಗಟು ಮೀನು ಮಾರುಕಟ್ಟೆ ನಿರ್ಮಾಣ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಪುತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ₹549.79 ಕೋಟಿ, ಕರಾವಳಿ ಪ್ರವಾಸೋದ್ಯಮ ದೂರಗಾಮಿ ಯೋಜನೆಗೆ ಅನುಮೋದನೆ, ಕರಾವಳಿಯ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 12 ದ್ವೀಪಗಳ ಅಭಿವೃದ್ಧಿಗೆ ಕ್ರಮ, ಮಂಗಳೂರು ಲೈಟ್‌ಹೌಸ್ ಪ್ರವಾಸೋದ್ಯಮ ಮತ್ತು ಆತಿಥ್ಯ ಮೂಲಸೌಕರ್ಯ ಅಭಿವೃದ್ಧಿ, ಕರಾವಳಿ ವಲಯ ನಿರ್ವಹಣಾ ಯೋಜನೆ (ಸಿಝಡ್‌ಎಂಪಿ) 2019ರ ಪರಿಷ್ಕರಣೆ, ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಆರು ಪ್ರಮುಖ ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.ದ.ಕ.ದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅನುಮೋದನೆ, ಮಂಕಿ ಬಂದರಿನಲ್ಲಿ ಬಹುಪಯೋಗಿ ಬಂದರು ಮತ್ತು ಹಡಗು ನಿರ್ಮಾಣ ಕೇಂದ್ರ ಅಭಿವೃದ್ಧಿ, ಗಂಗೊಳ್ಳಿಯಲ್ಲಿ ಹಡಗು ನಿರ್ಮಾಣ ಅಂಗಳ ಅಭಿವೃದ್ಧಿಗೆ ₹322 ಕೋಟಿ, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಉನ್ನತೀಕರಣ, ಮಂಗಳೂರಿನ ಮಂಗಳಾ ಕ್ರೀಡಾಂಗಣ ಅಭಿವೃದ್ಧಿಗೆ ₹20 ಕೋಟಿ, ಉಡುಪಿ ಜಿಲ್ಲಾ ಕ್ರೀಡಾಂಗಣಕ್ಕೆ ₹10 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ, ಕರ್ನಾಟಕ ಕಡಲ ಜೈವಿಕ ತಂತ್ರಜ್ಞಾನ ನೀತಿ 2026-31ಕ್ಕೂ ಅನುಮೋದನೆ ನೀಡಲಾಗಿದೆ.ಕಡಲ ನಗರಿಯಲ್ಲಿ ಸಿಎಂ, ಸಚಿವರ ರೋಡ್ ಶೋ:
ಇಲ್ಲಿನ ಪಡೀಲ್ ಪ್ರಜಾಸೌಧ ಜಿಲ್ಲಾಧಿಕಾರಿಯಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಸಚಿವರು ಡಬಲ್ ಡೆಕ್ಕರ್ ತೆರೆದ ಬಸ್‌ನಲ್ಲಿ ಪ್ರಯಾಣಿಸಿ ರೋಡ್ ಶೋ ನಡೆಸಿದರು.ಕದ್ರಿ ದೇವಸ್ಥಾನದಿಂದ ನಗರದ ಕೆಪಿಟಿ ಸರ್ಕ್ಯೂಟ್ ಹೌಸ್‌ವರೆಗೆ ಸಚಿವರು ಕೆಎಸ್‌ಆರ್‌ಟಿಸಿ ಐರಾವತ ಬಸ್‌ನಲ್ಲಿ ಪ್ರಯಾಣಿಸಿದರು. ಬಳಿಕ, ಮುಖ್ಯಮಂತ್ರಿ ಹಾಗೂ ಸಚಿವರು ಸರ್ಕ್ಯೂಟ್ ಹೌಸ್‌ನಿಂದ ಪಂಪ್‌ವೆಲ್ ಮಾರ್ಗವಾಗಿ ಪ್ರಜಾಸೌಧಕ್ಕೆ ಅಂಬಾರಿ ಡಬಲ್ ಡೆಕ್ಕರ್ ತೆರೆದ ಬಸ್‌ನಲ್ಲಿ ಸಂಚರಿಸಿದರು.ಪಂಪ್‌ವೆಲ್‌ಗೆ ಬಸ್ ತಲುಪುತ್ತಲೇ ಅಲ್ಲಿ ಸೇರಿದ್ದ ಜನರು ಪಟಾಕಿ ಸಿಡಿಸಿ, ಜಯಘೋಷ ಕೂಗಿ ಸಂಭ್ರಮಿಸಿದರು. ಪಂಪ್‌ವೆಲ್‌ನಿಂದ ರೋಡ್ ಶೋ ಆರಂಭಗೊಂಡಿತು. ರಸ್ತೆಯ ಎರಡೂ ಬದಿಯಲ್ಲಿ, ಕಟ್ಟಡದ ಮೇಲೆ, ಪಂಪ್‌ವೆಲ್ ಮೇಲ್ಸೇತುವೆ ಮೇಲೆ ನಿಂತಿದ್ದ ಸಾವಿರಾರು ಜನರು ಮುಖ್ಯಮಂತ್ರಿ, ಸಚಿವರ ಹೆಸರು ಕೂಗಿ ಘೋಷಣೆ ಮೊಳಗಿಸಿದರು. ಚೆಂಡೆ, ವಾದ್ಯ, ನಾಸಿಕ್ ಬ್ಯಾಂಡ್, ಹುಲಿ ಕುಣಿತ, ಗೊಂಬೆ ಕುಣಿತ, ಕೀಲು ಕುದುರೆ, ಪುಷ್ಪಾರ್ಚನೆಗಳು ಮೆರವಣಿಗೆ ವೇಳೆ ಗಮನ ಸೆಳೆದವು.ತೆರೆದ ವಾಹನದಲ್ಲಿ ನಿಂತಿದ್ದ ಸಿಎಂ ಹಾಗೂ ಸಚಿವರು ಭಾರೀ ಬಿಸಿಲಿನ ನಡುವೆಯೂ ಎರಡೂ ಭಾಗದ ಜನರತ್ತ ಕೈ ಬೀಸುತ್ತಾ ಸಾಗಿದರು. ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಜನರಿಗೆ ನಿಲ್ಲಲು ಸ್ಟಾಲ್ ರೀತಿಯ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯಮಂತ್ರಿ ಮತ್ತು ಸಚಿವರ ತಂಡ ಪ್ರಜಾಸೌಧಕ್ಕೆ ಆಗಮಿಸುತ್ತಲೇ ಅಲ್ಲಿ ನೆರೆದಿದ್ದ ಜನರು ಜಯಘೋಷ ಕೂಗಿದರು. ಪ್ರಜಾಸೌಧವನ್ನು ವಿಶೇಷ ರೀತಿಯಲ್ಲಿ ಹೂವುಗಳಿಂದ ಅಲಂಕರಿಸಲಾಗಿತ್ತು. ಮುಖ್ಯಮಂತ್ರಿ ಹಾಗೂ ಸಚಿವರು ಸಂಪುಟ ಸಭೆಗೆ ತೆರಳುವ ಮುನ್ನ ಪ್ರಜಾಸೌಧದ ಎದುರು ಗ್ರೂಪ್ ಫೋಟೋ ತೆಗೆಸಿಕೊಂಡರು. ಬಳಿಕ, ಸಿಎಂ ಅವರು ಪ್ರಜಾಸೌಧದ ಆವರಣದಲ್ಲಿ ಗಿಡ ನೆಟ್ಟು ನೀರುಣಿಸಿದರು. ಮುಖ್ಯಮಂತ್ರಿ ಅವರು ಪ್ರಜಾಸೌಧಕ್ಕೆ ಬರುತ್ತಲೇ ನಾಯಕರು, ಕಾರ್ಯಕರ್ತರು, ಮುಖಂಡರು ಹಾರ ಹಾಕಿ, ಹೂವು ನೀಡಿ ಸ್ವಾಗತಿಸಿದರು.ಕದ್ರಿ ದೇವಸ್ಥಾನಕ್ಕೆ ಡಿಕೆಶಿ ಭೇಟಿ:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಸಚಿವರು ಶುಕ್ರವಾರ ಬೆಳಗ್ಗೆ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿ ಹಾಗೂ ಸಚಿವರನ್ನು ಸಾಂಪ್ರದಾಯಿಕ ಪೂರ್ಣಕುಂಭ ಗೌರವದೊಂದಿಗೆ ಸ್ವಾಗತಿಸಲಾಯಿತು. ಪ್ರವೇಶದ್ವಾರದ ಬಳಿ ‘ಗೃಹಲಕ್ಷ್ಮಿ’, ‘ಶಕ್ತಿ’ ಗ್ಯಾರಂಟಿ ಯೋಜನೆಯ ಮಹಿಳಾ ಫಲಾನುಭವಿಗಳು ತುಳುನಾಡಿನ ಸಾಂಪ್ರದಾಯಿಕ ಮುಟ್ಟಾಳೆ ಧರಿಸಿ, ಯಕ್ಷಗಾನ ಕಲಾವಿದರ ಉಪಸ್ಥಿತಿಯಲ್ಲಿ ಪನ್ನೀರು ಚಿಮುಕಿಸಿ, ಮಂಗಳಾರತಿ ಎತ್ತಿ, ಹೂವು ನೀಡಿ, ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.
ಪುರೋಹಿತರ ನೇತೃತ್ವದಲ್ಲಿ ವಿಶೇಷವಾಗಿ ದೀಪ ಪ್ರಜ್ವಲಿಸಿ ಪಂಚಾಮೃತ ಪುರಸ್ಸರ ಏಕಾದಶ ರುದ್ರಾಭಿಷೇಕ ಹಾಗೂ ಬ್ರಹ್ಮಾರ್ಪಣೆ ನೆರವೇರಿಸಲಾಯಿತು. ದೇವರ ದರ್ಶನ ಪಡೆದ ಸಿಎಂ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ನಾಯಕರಿಗೆ ಶೇಷವಸ್ತ್ರ, ಶಾಲು ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು. ಸಂಪುಟ ಸಭೆ ಹಿನ್ನೆಲೆಯಲ್ಲಿ ವಿಶೇಷವಾಗಿ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಕಲ್ಪಿಸಲಾಗಿತ್ತು.