ಸಾರಾಂಶ
ದಾಬಸ್‌ಪೇಟೆ: ಕಾರ್ತಿಕ ದೀಪೋತ್ಸವಕ್ಕೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಇಡೀ ಜಗತ್ತೇ ಕಾರ್ತಿಕ ದೀಪೋತ್ಸವ ಆಚರಿಸುತ್ತಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ದೀಪೋತ್ಸವ ಹಿರಿಯರ ಬಳುವಳಿ. ಅದನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ನಿಷ್ಕಲ್ಮಶ ಮನಸ್ಸಿನಿಂದ ಒಬ್ಬ ಮಠಾಧಿಪತಿ ಏನು ಮಾಡಬಹುದು ಎನ್ನುವುದಕ್ಕೆ ಈ ಮಠದ ಅಭಿವೃದ್ಧಿಯೇ ಸಾಕ್ಷಿ. ಮಠಕ್ಕೆ ಭಕ್ತರೆ ಶಕ್ತಿ. ವನಕಲ್ಲು ಮಠ ದೈವ ಸ್ವರೂಪವಾಗಿದ್ದು, ಎಲ್ಲರಿಗೂ ಆಶ್ರಯ, ವಸತಿ, ದಾಸೋಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ತಮ್ಮ ಕೈಲಾದ ಸಹಾಯ ಮಾಡಿ ಮಠಕ್ಕೆ ಒಂದು ಹೊಸರೂಪ ನೀಡುತ್ತೇನೆ. ಉಚಿತ ಶಿಕ್ಷಣ ನೀಡುತ್ತಿರುವ ಎಸ್‌ಎಲ್‌ಎನ್ ಶಾಲೆಯ ರವಿಕುಮಾರ್ ಅವರ ಕಾಯಕ ಶ್ಲಾಘನೀಯ ಎಂದರು.
ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಮಾತನಾಡಿ, ವನಕಲ್ಲು ಮಠದಲ್ಲಿ ಪ್ರತಿ ವರ್ಷ ಕಾರ್ತಿಕ ಲಕ್ಷ ದೀಪೋತ್ಸವ ಆಚರಿಸುತ್ತಿದ್ದೇವೆ. ಜ್ಞಾನ ಬೆಳಕಿನ ಸಂಕೇತ ಎಂದರು.ಕಾರ್ಯಕ್ರಮದಲ್ಲಿ ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ನಿರ್ದೇಶಕ ಪಾಲಯ್ಯ, ಉದ್ಯಮಿ ಸುದೀಪ್, ಅನುದಾನಿತ ಪ್ರೌಢಶಾಲೆಗಳ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ಮುಖಂಡ ಮೋಹನಕುಮಾರ್, ಮಠದ ಮೇಲ್ವಿಚಾರಕ ಕೃಷ್ಣ ಆಚಾರ್ಯ ಇತರರಿದ್ದರು.
ಪೋಟೋ 5 :ಸೋಂಪುರ ಹೋಬಳಿಯ ವನಕಲ್ಲು ಮಠದ ಲಕ್ಷ ದೀಪೋತ್ಸವಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಹರಗುರು ಚರಮೂರ್ತಿಗಳು ಚಾಲನೆ ನೀಡಿದರು.