ಸಾರಾಂಶ
ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಗಣಪತಿ, ಶ್ರೀ ದತ್ತಾತ್ರೇಯ ಶ್ರೀ ನಾಗದೇವತಾ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದ ಸಾಯಿ ಬಡಾವಣೆ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಗಣಪತಿ, ಶ್ರೀ ದತ್ತಾತ್ರೇಯ, ಶ್ರೀ ನಾಗದೇವತಾ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.ಎರಡು ದಿನಗಳ ಕಾಲ ವಾಸ್ತು ಹೋಮ, ವಾಸ್ತು ಬಲಿ, ರಕ್ಷೋಘ್ನ ಹೋಮ, ಪ್ರಕಾರ ಬಲಿ, ಬಿಂಬಶುದ್ಧಿ, ಅಧಿವಾಸ ಪೂಜೆ ಕಾರ್ಯಕ್ರಮಗಳು ನಡೆದವು.
ಗುರುವಾರ ಬೆಳಗಿನಿಂದ ನಡೆದ, ವಿಗ್ರಹ ಪ್ರತಿಷ್ಠಾಪನ ಪೂಜಾ ಕಾರ್ಯಕ್ರಮಗಳಲ್ಲಿ, ಸಾಯಿಬಾಬಾ ವಿಗ್ರಹದ ಎರಡು ಬದಿಗಳಲ್ಲಿ ಗಣಪತಿ ಮತ್ತು ದತ್ತಾತ್ರೇಯರ ಅಮೃತ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ, ಅಮೃತಶಿಲಾ ಕಟಾಂಜನ, ಪಾದುಕೆ ಪ್ರತಿಷ್ಠಾಪನೆ, ಕೂರ್ಮ ಪ್ರತಿಷ್ಠಾಪನೆ, ಬಾಬಾ ಉತ್ಸವ ಮೂರ್ತಿಯ ಡೋಲಿ ಅನಾವರಣ, ಕಾರ್ಯಗಳು ನಡೆದವು.ಬಾಬಾ ದೇವಾಲಯದ ಹೊರ ಆವರಣದಲ್ಲಿ, ನಾಗ ಪ್ರತಿಷ್ಠೆ, ಬೇವಿನ ವೃಕ್ಷದ ಅಡಿಯಲ್ಲಿ ಮೂಲ ಬಾಬಾ ಪ್ರತಿಷ್ಠಾಪನೆ, ಹಾಗೂ ಮೂಲ ಶಿರಡಿ ಸಾಯಿಬಾಬಾ ಕ್ಷೇತ್ರದಲ್ಲಿ ಇರುವಂತೆ ವರ್ಷದ 365 ದಿನಗಳು ನಿರಂತರವಾಗಿ ಇರುವ ಬೆಂಕಿ ಕೊಂಡ ಪ್ರತಿಷ್ಠಾಪನ ಅನಾವರಣ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಿದವು.
ಮಧ್ಯಾಹ್ನ ಮಹಾ ಆರತಿ, ನಂತರ ಪ್ರಸಾದ ವಿನಿಯೋಗ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.ಪೂಜಾ ಕಾರ್ಯಕ್ರಮಗಳು ಅರ್ಚಕ ಶ್ರೀನಿವಾಸ ಭಟ್ ಮತ್ತು ತಂಡದ ನೇತೃತ್ವದಲ್ಲಿ ನಡೆದವು.
ದೇವಾಲಯದ ಧರ್ಮದರ್ಶಿ ಧರೇಶ್ ಬಾಬು ಮತ್ತು ದಂಪತಿಗಳು, ಟ್ರಸ್ಟ್ ಸದಸ್ಯರಾದ, ಮುನಿಸ್ವಾಮಿ, ಓಬಳ ರೆಡ್ಡಿ, ಶ್ರೀನಿವಾಸ್, ಸಮಾಜ ಸೇವಕರಾದ ನಂಜುಂಡಸ್ವಾಮಿ, ಎಚ್ ಕೆ ನಟೇಶ್ ಗೌಡ, ಪುರಸಭೆಯ ಅಧ್ಯಕ್ಷರಾದ ಜಯಲಕ್ಷ್ಮಿ ಚಂದ್ರು, ಸದಸ್ಯರಾದ ಡಿ ಕೆ ತಿಮ್ಮಪ್ಪ, ನಿರ್ಗಮಿತ ಡಿವೈಎಸ್ಪಿ ಆರ್ ವಿ ಗಂಗಾಧರಪ್ಪ ದಂಪತಿ, ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಇದ್ದರು.