ಮಾರೇಹಳ್ಳಿ ಶ್ರೀಲಕ್ಷ್ಮಿನರಸಿಂಹಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ

| Published : May 22 2024, 12:55 AM IST

ಸಾರಾಂಶ

ಇತಿಹಾಸ ಪ್ರಸಿದ್ಧಿ ಪಡೆದಿರುವ ಮಾರೇಹಳ್ಳಿ ಲಕ್ಷ್ಮಿ ನರಸಿಂಹಸ್ವಾಮಿ ದೇವರು ರಾಜ್ಯ ಅಲ್ಲದೇ, ಹೊರ ರಾಜ್ಯಗಳಲ್ಲಿಯೂ ಸಾವಿರಾರು ಭಕ್ತರನ್ನು ಹೊಂದಿದೆ. ಮೇ 26ರಂದು ನಡೆಯಲಿರುವ ರಥೋತ್ಸವದ ಅಂಗವಾಗಿ ಈಗಾಗಲೇ ಹೊರ ರಾಜ್ಯದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರತಿನಿತ್ಯ ಸ್ವಾಮಿಗೆ ದಾನಿಗಳಿಂದ ಪೂಜಾ ಕೈಂಕರ್ಯ ಹಾಗೂ ಅನ್ನಸಂತರ್ಪಣೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶ್ರೀನರಸಿಂಹ ಜಯಂತಿ ಅಂಗವಾಗಿ ಸಮೀಪದ ಮಾರೇಹಳ್ಳಿ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಿ ಪ್ರಧಾನವಾಗಿ ಜರುಗಿತು.

ಮುಂಜಾನೆಯಿಂದಲೇ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ವಿವಿಧ ರೀತಿಯ ಮಹಾ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮಗಳು ವಿಧಿವಿಧಾನಗಳಿಂದ ನೆರೆವೇರಿತು. ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸಿದ ನೂರಾರು ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.

ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಭಗವಾನ್ ವಿಷ್ಣುವಿನ ನಾಲ್ಕನೇ ಅವತಾರವೇ ನರಸಿಂಹ ರೂಪವಾಗಿದೆ. ಪ್ರಹ್ಲಾದನ ಭಕ್ತಿಯ ಪರಾಕಾಷ್ಠೆಯನ್ನು ಜಗತ್ತಿಗೆ ತೋರಿಸಲೆಂದೇ ವಿಷ್ಟು ತಾನೇ ಮನುಷ್ಯ ಮೃಗ ಸೇರಿ ನರಸಿಂಹನಾದ. ಸತ್ಯ ಯುಗದಲ್ಲಿ ಕೆಟ್ಟ ಮನುಷ್ಯತ್ವವುಳ್ಳವರನ್ನು ಅಂತ್ಯಗೊಳಿಸಿದ ದಿನವನ್ನೇ ನರಸಿಂಹ ಜಯಂತಿ ಎಂದು ಇಂದಿಗೂ ಭಕ್ತರು ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.

ಇತಿಹಾಸ ಪ್ರಸಿದ್ಧಿ ಪಡೆದಿರುವ ಮಾರೇಹಳ್ಳಿ ಲಕ್ಷ್ಮಿ ನರಸಿಂಹಸ್ವಾಮಿ ದೇವರು ರಾಜ್ಯ ಅಲ್ಲದೇ, ಹೊರ ರಾಜ್ಯಗಳಲ್ಲಿಯೂ ಸಾವಿರಾರು ಭಕ್ತರನ್ನು ಹೊಂದಿದೆ. ಮೇ 26ರಂದು ನಡೆಯಲಿರುವ ರಥೋತ್ಸವದ ಅಂಗವಾಗಿ ಈಗಾಗಲೇ ಹೊರ ರಾಜ್ಯದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರತಿನಿತ್ಯ ಸ್ವಾಮಿಗೆ ದಾನಿಗಳಿಂದ ಪೂಜಾ ಕೈಂಕರ್ಯ ಹಾಗೂ ಅನ್ನಸಂತರ್ಪಣೆ ನಡೆಯುತ್ತಿದೆ ಎಂದರು.

ದೇವಸ್ಥಾನಕ್ಕೆ ಆಗಮಿಸಿ ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು. ಈ ವೇಳೆ ಪೂಜಾ ದಾನಿಗಳಾದ ಮೈಸೂರು ಎಂ.ಎಸ್ ಶ್ರೀನಿವಾಸಯ್ಯ, ಎಂ.ಎಸ್ ನಾರಯಣಸ್ವಾಮಿ, ಆರ್ಚಕ ಕೃಷ್ಣಪ್ರಸಾದ್, ಆಗಮೀಕರಾದ ಶೇಷಾದ್ರಿ, ಪಾರುಪತ್ತೇಗಾರ್ ಸಿ.ವಿ ಬಿಳಿಗಿರಿನಾಗರಾಜ್ ಸೇರಿದಂತೆ ಇತರರು ಇದ್ದರು.

25ರಿಂದ ಗುರು ಶಿಷ್ಯ ಪರಂಪರೆ ತರಬೇತಿ ಶಿಬಿರ

ನಾಗಮಂಗಲ:ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಹಾಗೂ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನಿಂದ ಶ್ರೀಕ್ಷೇತ್ರದ ತಪೋವನದಲ್ಲಿ ಮೇ 25ರಿಂದ ಜೂ.5ರ ವರೆಗೆ ಹತ್ತು ದಿನಗಳ ಕಾಲ ಗುರು ಶಿಷ್ಯ ಪರಂಪರೆ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ತಿಳಿಸಿದ್ದಾರೆ.

ತರಬೇತಿಯಲ್ಲಿ ನುರಿತ ತರಬೇತುದಾರು (ಸಂಪನ್ಮೂಲ ವ್ಯಕ್ತಿಗಳ)ನ್ನು ಆಹ್ವಾನಿಸಿ ಮೂಲಿಕೆಗಳ ಪರಿಚಯ, ಮೂಲಿಕೆಗಳಿಂದ ಚೂರ್ಣ ತಯಾರಿಸುವುದು ಮತ್ತು ರಸ ಔಷಧಿ ತೆಗೆಯುವುದೂ ಸೇರಿದಂತೆ ಹಲವು ವಿಷಯಗಳ ಕುರಿತು ಈ ಮೊದಲೇ ನೋಂದಾಯಿಸಿಕೊಂಡಿರುವ ೫೦ಮಂದಿ ಆಸಕ್ತ ಪಾರಂಪರಿಕ ವೈದ್ಯರಿಗೆ ಸೂಕ್ತ ತರಬೇತಿ ಕೊಡಿಸಲಾಗುವುದು. ಪಾರಂಪರಿಕ ವೈದ್ಯರು ಆಯಾ ಜಿಲ್ಲೆಗಳ ಜಿಲ್ಲಾ ಸಂಚಾಲಕರಿಗೆ ಅಥವಾ ಮೊ-ಮೊ-9343431886, ಮೊ-9886321516, ಮೊ-9446752702, ಮೊ-8217635600ಗೆ ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಅನುಗನಾಳು ಕೃಷ್ಣಮೂರ್ತಿ ಕೋರಿದ್ದಾರೆ.