ಮತದಾನ ಪ್ರಜೆಗಳಿಗೆ ನೀಡಿದ ವಿಶೇಷ ಅಧಿಕಾರ: ಶಿವರಾಜ್‌

| Published : Mar 30 2024, 12:47 AM IST

ಸಾರಾಂಶ

ಮಾನ್ವಿ ತಾಲೂಕಿನ ಹಿರೆಕೊಟ್ನೆಕಲ್ ಗ್ರಾಪಂ ಆವರಣದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಾನ್ವಿ

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನವೆಂಬುವುದು ಪ್ರಜೆಗಳಿಗೆ ನೀಡಿದ ವಿಶೇಷ ಅಧಿಕಾರವಾಗಿದ್ದು, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ಎನ್ಆರ್ಎಲ್ಎಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಶಿವರಾಜ್ ಹೇಳಿದರು.

ತಾಲೂಕಿನ ಹಿರೆಕೊಟ್ನೆಕಲ್ ಗ್ರಾಪಂ ಆವರಣದಲ್ಲಿ ತಾಪಂ, ತಾಲೂಕು ಸ್ವೀಪ್ ಸಮಿತಿ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ ಗ್ರಾಪಂವತಿಯಿಂದ ಮತದಾನ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. ಮತದಾನ ಮಾಡುವುದು ಶ್ರೇಷ್ಠ ಕಾರ್ಯವಾಗಿದ್ದು, ಅದರಲ್ಲೂ ಮುಖ್ಯವಾಗಿ ಸ್ವ ಸಹಾಯ ಗುಂಪಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಮುಂದಾಗಬೇಕು. ಮೇ.7ರಂದು ನಡೆಯುವ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಅಧಿಕಾರ ಹಾಗೂ ಕರ್ತವ್ಯ ಪಾಲಿಸಲು ಮುಂದಾಗಬೇಕು ಎಂದು ತಿಳಿಸಿದರು. ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ. ದೇಶದ ಪ್ರತಿಯೊಬ್ಬರ ನಾಗರಿಕರು ಮತದಾನ ಮಾಡಿದಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಇದೇ ವೇಳೆ ಎಲ್ಲರಿಗೂ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.

ಈ ವೇಳೆ ಪಿಡಿಒ ನಾಗಭೂಷಣ, ಯುವ ವೃತ್ತಿಪರ ಖಾಸಿಂ, ವಲಯ ಮೇಲ್ವಿಚಾರಕ ಸೂರತ್ ಪ್ರಸಾದ್ ಗಟ್ಟು, ಶರಣು ಬಸವ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಒಕ್ಕೂಟದ ಸಿಬ್ಬಂದಿ, ಸ್ವ ಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿದ್ದರು.