ಮಧ್ಯಪ್ರಾಚ್ಯ ದೇಶಗಳಲ್ಲಿ ವಿಶೇಷವಾಗಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳಲ್ಲಿ ಈಗಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಂತಿ ಸ್ಥಾಪನೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲು ಬಿಷಪರ ಮಂಡಳಿ ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದೆ.
ಉಡುಪಿ: ಮಧ್ಯಪ್ರಾಚ್ಯ ದೇಶಗಳಲ್ಲಿ ವಿಶೇಷವಾಗಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳಲ್ಲಿ ಈಗಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಂತಿ ಸ್ಥಾಪನೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲು ಬಿಷಪರ ಮಂಡಳಿ ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದೆ.
ಅದರಂತೆ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದಲ್ಲಿ ಮಾ. 8ರಂದು ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಧರ್ಮಪ್ರಾಂತ್ಯದ ಪ್ರೇಶಿತ ಆಡಳಿತಾಧಿಕಾರಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಮನವಿ ಮಾಡಿದ್ದಾರೆ. ಯುದ್ಧ ಮತ್ತು ಅಸ್ಥಿರತೆಯಿಂದಾಗುತ್ತಿರುವ ಅಮಾನವೀಯ ದುಃಖವು ವಿಶ್ವಮಾನವ ಕುಟುಂಬಕ್ಕೆ ಆಳವಾದ ಗಾಯವನ್ನುಂಟು ಮಾಡುತ್ತಿದೆ. ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಕೆಲಸ ಮಾಡುತ್ತಿರುವ ಮತ್ತು ವಾಸಿಸುತ್ತಿರುವ ಭಾರತದ ಸಹೋದರ-ಸಹೋದರಿಯರ ಸುರಕ್ಷತೆ ಕುರಿತು ಕ್ರೈಸ್ತ ಧರ್ಮಸಭೆ ವಿಶೇಷ ಕಾಳಜಿ ವ್ಯಕ್ತಪಡಿಸಿದ್ದು, ದೂರ ದೇಶದಲ್ಲಿ ದುಡಿದು ತಮ್ಮ ಕುಟುಂಬಗಳನ್ನು ಪೋಷಿಸುತ್ತಿರುವವರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ದೇವರ ಕೃಪೆಗೆ ಪ್ರಾರ್ಥಿಸುವಂತೆ ಮನವಿ ಮಾಡಲಾಗಿದೆ. ಈ ಸಂಕಷ್ಟದ ಘಟ್ಟವನ್ನು ದೇವರ ಕರುಣೆಗೆ ಅರ್ಪಿಸಲು ಮಾ. 8ರಂದು ಭಾನುವಾರವನ್ನು ‘ಶಾಂತಿಗಾಗಿ ಪ್ರಾರ್ಥನಾ ದಿನ’ವಾಗಿ ಆಚರಿಸಿ, ಪವಿತ್ರ ಬಲಿಪೂಜೆ ವೇಳೆ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲೆಂದು, ಹಿಂಸಾಚಾರ ನಿಲ್ಲಲಿ ಎಂದು, ನಿರಪರಾಧಿಗಳ ರಕ್ಷಣೆಯಾಗಲಇ ಎಂದು ಹಾಗೂ ಜಗತ್ತಿನ ನಾಯಕರು ಜ್ಞಾನ ಮತ್ತು ಸಂಯಮದಿಂದ ನಡೆದುಕೊಳ್ಳಲೆಂದು ವಿಶೇಷವಾಗಿ ಪ್ರಾರ್ಥಿಸುವಂತೆ ತಿಳಿಸಲಾಗಿದೆ. ಅಲ್ಲದೆ ಮಾ. 8ರಿಂದ 14ರವರೆಗೆ ಪ್ರತಿದಿನವೂ ಪವಿತ್ರ ಜಪಸರ ಪ್ರಾರ್ಥನೆ ಮಾಡುವಂತೆ, ಮಾ. 13ರಂದು ಉಪವಾಸ ಆಚರಿಸಿ, ಹಿಂಸಾಚಾರದಿಂದ ಬಳಲುತ್ತಿರುವ ಸುರಕ್ಷತೆಗೆ ತ್ಯಾಗ ಸಮರ್ಪಿಸಲು ಕೋರಲಾಗಿದ್ದು, ಈ ಸಾಮೂಹಿಕ ಪ್ರಾರ್ಥನೆಯಿಂದ, ದ್ವೇಷದ ಮನೋಭಾವ ದೂರವಾಗಿ, ಹಿಂಸಾಚಾರ ನಿಂತು, ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಆಶಿಸಲಾಗಿದೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೇಸಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.