ನಾಣಿ ಕುಟುಂಬದವರು ಗಾರೆ ಕೆಲಸದ ಸಾಮಗ್ರಿಗಳನ್ನು ಇಟ್ಟು ಪೂಜಿಸಿದ್ದು, ನೂರಾರು ಮಂದಿಗೆ ಅನ್ನದಾನ ನಡೆಸಿ ಸಿಹಿ ವಿತರಿಸಿದರು. ಟೇಕಲ್ ರಸ್ತೆಯ ವಿನಾಯಕ ಹಾರ್ಡ್‌ವೇರ್ ಮತ್ತು ಸೆರಾಮಿಕ್ಸ್, ವಿನಾಯಕ ಕಾರ್‍ಸ್, ಕಟ್ಟಡ ನಿರ್ಮಾಣ ಕಾರ್ಮಿಕರ ಕುಟುಂಬಗಳಲ್ಲಿ ತಾವು ವರ್ಷವಿಡೀ ಬಳಸುವ ಸಲಕರಣೆಗಳಿಗೆ ಪೂಜೆ ಸಲ್ಲಿಸಿ ಆಯುಧ ಪೂಜೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ವಿಜಯದಶಮಿಯಂದು ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು ಜತೆಗೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳು, ಕಚೇರಿಗಳು, ಮನೆಗಳಲ್ಲಿ ಆಯುಧ ಪೂಜೆ ಸಂಭ್ರಮ ಮನೆ ಮಾಡಿತ್ತು.

ನಗರದ ಕೆಇಬಿ ಗಣಪತಿ, ಸೋಮೇಶ್ವರ, ನಗರದೇವತೆ ಕೋಲಾರಮ್ಮ, ಕಿಲಾರಿಪೇಟೆಯ ಸತ್ಯಮ್ಮ, ಪಿಸಿ ಬಡಾವಣೆಯ ರೇಣುಕಾ ಯಲ್ಲಮ್ಮ, ಮಾರೆಮ್ಮ, ವೇಣುಗೋಪಾಲಸ್ವಾಮಿ, ಕಾಳಮ್ಮ ಗುಡಿ, ಜಯನಗರದ ಸಫಲಮ್ಮ, ಹೀಗೆ ಎಲ್ಲಾ ದೇವಾಲಯಗಳಲ್ಲೂ ಆಯುಧಪೂಜೆ ಹಾಗೂ ನವರಾತ್ರಿ ಕೊನೆ ದಿನ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ನಗರದ ಇತಿಹಾಸ ಪ್ರಸಿದ್ಧ ನಗರದೇವತೆ ಕೋಲಾರಮ್ಮ ಹಾಗೂ ಸೋಮೇಶ್ವರ ಸ್ವಾಮಿ ದೇವಾಲಯಗಳಲ್ಲೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ನಗರದ ವೀರಾಂಜನೇಯ ನಗರದಲ್ಲಿ ಯಲ್ಲಮ್ಮ ದೇವಿಗೆ ವಿಶೇಷ ಅಲಂಕಾರ ಪೂಜೆ ಮಾಡಿದ್ದು, ನೂರಾರು ಮಂದಿ ದೇವಿಯ ದರ್ಶನ ಪಡೆದರು. ಎಲ್ಲರಿಗೂ ಸಿಹಿ ಪೊಂಗಲ್, ಟಮೋಟೋ ಬಾತ್ ಪ್ರಸಾದ ವಿನಿಯೋಗ ನಡೆಯಿತು.

ಅದೇ ರೀತಿ ನಗರದ ವಿವಿಧ ದೇವಾಲಯಗಳಲ್ಲಿ ಮೂಲ ದೇವರಿಗೆ ವರಾಹಾ, ಲಕ್ಷ್ಮಿ, ಸರಸ್ವತಿ, ರಾಜರಾಜೇಶ್ವರಿ, ಲಕ್ಷ್ಮೀ, ದುರ್ಗೆ ಮತ್ತಿತರ ಅಲಂಕಾರಗಳನ್ನು ಮಾಡಿದ್ದು, ಭಕ್ತರು ಶ್ರದ್ಧಾಭಕ್ತಿಗಳಿಂದ ಆಗಮಿಸಿ ದೇವಿಯ ದರ್ಶನ ಪಡೆದರು.

ವಿವಿಧ ಸಂಸ್ಥೆಗಳಲ್ಲಿ ವಿಶೇಷ ಪೂಜೆ:

ನಾಣಿ ಕುಟುಂಬದವರು ಗಾರೆ ಕೆಲಸದ ಸಾಮಗ್ರಿಗಳನ್ನು ಇಟ್ಟು ಪೂಜಿಸಿದ್ದು, ನೂರಾರು ಮಂದಿಗೆ ಅನ್ನದಾನ ನಡೆಸಿ ಸಿಹಿ ವಿತರಿಸಿದರು. ಟೇಕಲ್ ರಸ್ತೆಯ ವಿನಾಯಕ ಹಾರ್ಡ್‌ವೇರ್ ಮತ್ತು ಸೆರಾಮಿಕ್ಸ್, ವಿನಾಯಕ ಕಾರ್‍ಸ್, ಕಟ್ಟಡ ನಿರ್ಮಾಣ ಕಾರ್ಮಿಕರ ಕುಟುಂಬಗಳಲ್ಲಿ ತಾವು ವರ್ಷವಿಡೀ ಬಳಸುವ ಸಲಕರಣೆಗಳಿಗೆ ಪೂಜೆ ಸಲ್ಲಿಸಿ ಆಯುಧ ಪೂಜೆ ನಡೆಸಿದರು.

ನಗರದಾದ್ಯಂತ ದೇವಾಲಯಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪಿಸಿ ಬಡಾವಣೆಯ ಸಫಲಮ್ಮ ದೇವಿಗೆ ಅರ್ಚಕ ಸತ್ಯನಾರಾಯಣ ಅವರು ವಿಶಿಷ್ಟ ರೀತಿಯಲ್ಲಿ ಕಾಳರಾತ್ರಿಯ ಅಲಂಕಾರ ಮಾಡಿದ್ದರು, ಕೆಇಬಿ ಗಣಪತಿ ದೇವಾಲಯದಲ್ಲಿ ಅರ್ಚಕರಾದ ಅಪ್ಪಣ್ಣಶಾಸ್ತ್ರಿಗಳು, ವೆಂಕಟೇಶ ಶಾಸ್ತ್ರಿಗಳು ಪೂಜೆ ನಡೆಸಿದ್ದರೆ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಅರ್ಚಕ ಸುರೇಶ್ ಪೂಜೆ ನಡೆಸಿದರು. ನೂರಾರು ಮಂದಿ ದೇವಿಯ ದರ್ಶನ ಪಡೆದರು.

ಅನೇಕ ಮನೆಗಳಲ್ಲಿ ದಸರಾ ಬೊಂಬೆ ಪ್ರದರ್ಶನಕ್ಕೂ ಇಂದೇ ಕೊನೆ ದಿನವಾಗಿದ್ದು, ಬೊಂಬೆಗಳಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.