ಗೀಜಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3.65 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸಚಿವನಾಗುವ ಅವಕಾಶ ದೊರೆತಿದ್ದು, ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸುವ ಸಂಕಲ್ಪ ಹೊಂದಿದ್ದೇನೆ. ಸಚಿವನಾಗಿ ರಾಜ್ಯ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಬೇಕಿರುವುದರಿಂದ ಬೆಂಗಳೂರಿನಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆಯಿದ್ದರೂ, ಸಾಧ್ಯವಾದಷ್ಟು ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು.

ಅರಸೀಕೆರೆ: ಸಚಿವ ಸ್ಥಾನ ದೊರೆತಿರುವುದು ತಾಲೂಕಿನ ಜನತೆಯ ಆಶೀರ್ವಾದದಿಂದಾಗಿದ್ದು, ಕ್ಷೇತ್ರದ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವುದು ತಮ್ಮ ಪ್ರಮುಖ ಹೊಣೆಗಾರಿಕೆಯಾಗಿದೆ ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹೇಳಿದರು.ಗೀಜಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3.65 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸಚಿವನಾಗುವ ಅವಕಾಶ ದೊರೆತಿದ್ದು, ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸುವ ಸಂಕಲ್ಪ ಹೊಂದಿದ್ದೇನೆ. ಸಚಿವನಾಗಿ ರಾಜ್ಯ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಬೇಕಿರುವುದರಿಂದ ಬೆಂಗಳೂರಿನಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆಯಿದ್ದರೂ, ಸಾಧ್ಯವಾದಷ್ಟು ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು.ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಾಲೂಕು ಕಚೇರಿಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಅಧಿಕಾರಿಗಳನ್ನು ಗ್ರಾಮಗಳಿಗೆ ಕರೆತಂದು ಸ್ಥಳದಲ್ಲೇ ಅಹವಾಲು ಸ್ವೀಕರಿಸಿ ಪರಿಹಾರ ಕಲ್ಪಿಸಲಾಗುತ್ತಿದೆ. ಈ ಹಿಂದೆ ತಾಲೂಕು ಕೇಂದ್ರದಲ್ಲಿ ನಡೆಯುತ್ತಿದ್ದ ಜನಸಂಪರ್ಕ ಸಭೆಯನ್ನು ಇದೀಗ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ನಡೆಸುವ ಮೂಲಕ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್‌ ಮಾತನಾಡಿ, ಶಿವಲಿಂಗೇಗೌಡ ಅವರು ಎಲ್ಲ ವರ್ಗದ ಜನರನ್ನು ಗುರುತಿಸಿ, ವಿವಿಧ ಸಮಾಜಗಳ ಮುಖಂಡರಿಗೆ ರಾಜಕೀಯವಾಗಿ ಅವಕಾಶ ಕಲ್ಪಿಸುವ ಮೂಲಕ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಇದೀಗ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು.ಅಭಿವೃದ್ಧಿ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಾರದು ಎಂಬ ನಿಲುವು ಹೊಂದಿರುವ ಸಚಿವರು ಗ್ರಾಮೀಣ ಭಾಗಕ್ಕೂ ಸಮಾನ ಆದ್ಯತೆ ನೀಡುತ್ತಿದ್ದಾರೆ. ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ಮುಖಂಡರಾದ ಪರಮೇಶ್, ದೇವರಾಜ್,ರವಿ, ಎಳವಾರೆ ಕೇಶವಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.