ನಾಗಮಂಗಲ ತಾಲೂಕಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಭಾನುವಾರ ವಿವಿಧ ಬಗೆಯ ಪೂಜೆ ಪುರಸ್ಕಾರಗಳು ಮತ್ತು ಇಡೀ ರಾತ್ರಿ ಅಖಂಡ ಭಜನಾ ಕಾರ್ಯಕ್ರಮ ಜರುಗಿತು. ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀಮಠವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಕನ್ನಡಪ್ರಭವಾರ್ತೆ ನಾಗಮಂಗಲ
ತಾಲೂಕಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಭಾನುವಾರ ವಿವಿಧ ಬಗೆಯ ಪೂಜೆ ಪುರಸ್ಕಾರಗಳು ಮತ್ತು ಇಡೀ ರಾತ್ರಿ ಅಖಂಡ ಭಜನಾ ಕಾರ್ಯಕ್ರಮ ಜರುಗಿತು.ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀಮಠವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀ ಕ್ಷೇತ್ರದಲ್ಲಿ ಭಾನುವಾರ ಬೆಳಗಿನಿಂದಲೇ ಹೋಮ ಹವನಾದಿ ಪೂಜಾ ಕೈಂಕರ್ಯಗಳು ಜರುಗಿದವು. ಕ್ಷೇತ್ರದ ಅಧಿದೇವತೆಗಳಾದ ಶ್ರೀ ಗಂಗಾಧರೇಶ್ವರ ಸ್ವಾಮಿ ಹಾಗೂ ಶ್ರೀಕಾಲಭೈರವೇಶ್ವರ ಸ್ವಾಮಿಗೆ ಶ್ರೀ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿಶೇಷ ಪೂಜೆ, ಅಭಿಷೇಕಾದಿ ಕೈಂಕರ್ಯಗಳು ನೆರವೇರಿದವು. ಭೈರವೈಕ್ಯಶ್ರೀ ಡಾ.ಬಾಲಗಂಗಾಧರನಾಥಸ್ವಾಮಿ ಅವರ ಪಾದುಕಾಭಿಷೇಕವನ್ನು ಚುಂಚಶ್ರೀಗಳು ಸಾಂಗವಾಗಿ ನೆರವೇರಿಸಿದರು.
ಅಖಂಡ ಭಜನೆ:ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮಠದಲ್ಲಿ ಆಯೋಜಿಸಿದ್ದ ಅಖಂಡ ಭಜನೆ ಕಾರ್ಯಕ್ರಮಕ್ಕೆ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಭಾನುವಾರ ಬೆಳಿಗ್ಗೆ ಚಾಲನೆ ನೀಡಿದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಜಾನಪದ ಕಲಾವಿದರು, ಶ್ರೀಮಠದ ಸಾಧು ಸಂತರು, ವಿದ್ಯಾರ್ಥಿಗಳು, ಭಕ್ತರು ಭಜನೆಯಲ್ಲಿ ಭಾಗವಹಿಸಿದ್ದರು. ಕ್ಷೇತ್ರದಲ್ಲಿ ರಾತ್ರಿಯಿಡೀ ಅಖಂಡ ಭಜನೆ, ಶಿವನಾಮ ಸ್ಮರಣೆ ನಡೆದವು. ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಸಾವಿರಾರು ಭಕ್ತಾದಿಗಳು ಹಾಜರಿದ್ದು ಕಲಾವಿದರನ್ನು ಪ್ರೋತ್ಸಾಹಿಸಿದರು.
ಜ್ವಾಲಾಪೀಠಾರೋಹಣ:ಕ್ಷೇತ್ರದ ಧಾರ್ಮಿಕ ಆಚರಣೆಯಲ್ಲಿ ಪ್ರಮುಖವಾದ ಜ್ವಾಲಾಪೀಠಾರೋಹಣವನ್ನು ಶ್ರೀ ನಿರ್ಮಲಾನಂದನಾಥಸ್ವಾಮಿಜಿಯವರು ಭಾನುವಾರ ರಾತ್ರಿ ನೆರವೇರಿಸಿದರು. ಜ್ವಾಲಾಪೀಠಾರೋಹಣದ ಹಿನ್ನೆಲೆಯಲ್ಲಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀಗಳು ಉಪವಾಸವಿದ್ದು, ಚಂದ್ರಮೌಳೇಶ್ವರಸ್ವಾಮಿ ದೇವಾಲಯದಲ್ಲಿ ಕುಳಿತು ಶ್ರೀ ಕಾಲಭೈರವಸ್ವಾಮಿ ಸೇರಿದಂತೆ ಶ್ರೀಕ್ಷೇತ್ರದ ದೇವತೆಗಳಿಗೆ ತ್ರಿಕಾಲ ಪೂಜೆ ನೆರವೇರಿಸಿದರು.
ಜ್ವಾಲಾಪೀಠಾರೋಹಣಕ್ಕೂ ಮೊದಲು ಶ್ರೀಗಳು ಸರ್ವಾಲಂಕಾರಭೂಷಿತರಾಗಿ ಚಿನ್ನದ ಕಿರೀಟವನ್ನು ಧರಿಸಿ ಶ್ರೀಮಠದ ವೇದ ಪಂಡಿತರು ಮತ್ತು ವಟುಗಳ ವೇದ ಘೋಷಣೆಯೊಂದಿಗೆ ಸಾವಿರಾರು ಭಕ್ತರ ನಡುವೆ ರಾಜ ಗಾಂಭೀರ್ಯದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು. ಕಾಲಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ಶ್ರೀ ಕಾಲಭೈರವೇಶ್ವರಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪೂಜೆ ನೆರವೇರಿಸಿದರು. ನಂತರ ಮೆರವಣಿಯಲ್ಲೇ ಸಾಗಿ ಬಂದು ಶ್ರೀಮಠದ ಸಂಪ್ರದಾಯದAತೆ ಜ್ವಾಲಾಪೀಠಕ್ಕೆ ಪೂಜೆ ನೆರವೇರಿಸಿ ಜ್ವಾಲಾಪೀಠಾರೋಹಣ ನೆರವೇರಿಸಿದರು.