ಮಹಾಬಲೇಶ್ವರ ಮಂದಿರದಲ್ಲಿ ವಿಶೇಷ ಪೂಜೆ

| Published : Sep 03 2024, 01:38 AM IST

ಸಾರಾಂಶ

ಗೋವಾ, ಮಹಾರಾಷ್ಟ್ರದಿಂದ ಬಂದ ಭಕ್ತರು ಬೆಳಗ್ಗೆ ದೇವರ ದರ್ಶನ ಪಡೆದು ಮಧ್ಯಾಹ್ನ ವಾಪಸ್‌ ಆಗಿದ್ದು, ಪ್ರತಿ ಬಾರಿ ಶ್ರಾವಣ ಮಾಸ ಬಂದರೆ ಜನರಿಂದ ತುಂಬುತ್ತಿದ್ದ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದಲ್ಲಿ ಇಳಿಮುಖಗೊಂಡಿತ್ತು.

ಗೋಕರ್ಣ: ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿನ ಮಹಾಬಲೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ನಡೆಯಿತು.

ಪ್ರತಿವರ್ಷ ಶ್ರಾವಣದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಆದರೆ ಈ ಬಾರಿ ಪ್ರಕೃತಿಯ ಮುನಿಸು, ಮಳೆಯ ಅಬ್ಬರ ಮತ್ತಿತರ ಕಾರಣದಿಂದ ಭಕ್ತರು ಕಡಿಮೆಯಾಗಿದ್ದು, ಸ್ಥಳೀಯರೇ ಹೆಚ್ಚಾಗಿದ್ದರು.

ಗೋವಾ, ಮಹಾರಾಷ್ಟ್ರದಿಂದ ಬಂದ ಭಕ್ತರು ಬೆಳಗ್ಗೆ ದೇವರ ದರ್ಶನ ಪಡೆದು ಮಧ್ಯಾಹ್ನ ವಾಪಸ್‌ ಆಗಿದ್ದು, ಪ್ರತಿ ಬಾರಿ ಶ್ರಾವಣ ಮಾಸ ಬಂದರೆ ಜನರಿಂದ ತುಂಬುತ್ತಿದ್ದ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದಲ್ಲಿ ಇಳಿಮುಖಗೊಂಡಿತ್ತು.

ಮಂದಿರದಲ್ಲಿ ವಿಶೇಷ ಪೂಜೆ: ಮಹಾಬಲೇಶ್ವರ ದೇವಾಲಯದಲ್ಲಿ ಮೇಲುಸ್ತುವಾರಿ ಸಮಿತಿಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಏಕಾದಶ ರುದ್ರಾಭಿಷೇಕ, ಸುವರ್ಣ ಶಂಖ ಗಂಗಾ ಜಲಾಭಿಷೇಕ, ಪಂಚಾಮೃತ ನವಧಾನ್ಯಭಿಷೇಕಗಳೊಂದಿಗೆ ವಿಶೇಷ ಪೂಜೆ ನೆರವೇರಿತು.

ಆತ್ಮಲಿಂಗಕ್ಕೆ ನವರತ್ನ ಖಚಿತ ಸುವರ್ಣ ಕವಚ ತೊಡಿಸಿ ಬಿಲ್ವಾರ್ಚನೆ, ಸುವರ್ಣ ನಾಗಾಭರಣ ಅಲಂಕಾರದೊಂದಿಗೆ, ವಿಶೇಷ ನೈವೇದ್ಯಗಳನ್ನು ಸಮರ್ಪಿಸಿ, ದೀಪಾರಾಧನೆ, ಮಹಾಮಂಗಳಾರತಿ ಜರುಗಿದವು. ವೇ. ಚಂದ್ರಶೇಖರ ಅಡಿಮೂಳೆ ಪೂಜಾ ಕೈಂಕರ್ಯ ನೆರವೇರಿಸಿದರು.ಉಮಾಮಹೇಶ್ವರ ಮಂದಿರದಲ್ಲಿ ವಿವಿಧ ಸೇವೆ

ಗೋಕರ್ಣ: ಇಲ್ಲಿನ ಕುಡ್ಲೆ ಕಡಲತೀರದ ಮೇಲ್ಭಾಗದ ಪರ್ವತದಲ್ಲಿರುವ ಉಮಾಮಹೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ವಿಶೇಷ ಪೂಜೆಗಳು ನೆರವೇರಿದವು.ಬೆಳಗ್ಗೆಯಿಂದದ ಈ ಭಾಗದ ಭಕ್ತರು ಆಗಮಿಸಿ, ಕ್ಷೀರಾಭಿಷೇಕ, ಜಲಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.ಮಂದಿರದಲ್ಲಿ ಶ್ರಾವಣ ಮಾಸ ಹಾಗೂ ಶಿವರಾತ್ರಿಯಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ. ಇಲ್ಲಿನ ಹಾಲಕ್ಕಿ ಒಕ್ಕಲಿಗ ಸಮಾಜದವರು ಆರಾಧ್ಯ ದೇವರಾಗಿದ್ದು, ಪ್ರತಿವರ್ಷ ಈ ಸಮಯದಲ್ಲಿ ವಿವಿಧ ಸೇವೆಯನ್ನು ನೆರವೇರಿಸುವರು. ಅದರಂತೆ ಈ ವರ್ಷವೂ ಶಿವನಾಮಸ್ಮರಣೆ ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.