ಸಾರಾಂಶ
ಶ್ರೀ ಕ್ಷೇತ್ರ ಪವಾಡ ಪುರುಷ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆನಕನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳು ಹನೂರಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆನಕನ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಸೋಮವಾರ ಸಂಪ್ರದಾಯದಂತೆ ಜರುಗಿದವು.
ಕನ್ನಡಪ್ರಭ ವಾರ್ತೆ ಹನೂರು
ಶ್ರೀ ಕ್ಷೇತ್ರ ಪವಾಡ ಪುರುಷ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆನಕನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ-ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಸೋಮವಾರ ಸಂಪ್ರದಾಯದಂತೆ ಜರುಗಿತು.ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆನಕನ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಸರದಿ ಕೆ.ವಿ.ಮಹದೇಶ್ ಅರ್ಚಕರ ಅಧ್ಯಕ್ಷತೆಯಲ್ಲಿ ಮಹದೇಶ್ವರನಿಗೆ ಮುಂಜಾನೆಯಿಂದಲೇ ಬಿಲ್ವಪತ್ರೆ, ಹಾಲು ಮೊಸರು ಸೇರಿದಂತೆ ಇನ್ನಿತರ ಅಭಿಷೇಕ, ವಿಶೇಷ ಪೂಜೆ ಕಾರ್ಯಕ್ರಮಗಳು, ದೂಪದ ಸೇವೆ ಮಹಾಮಂಗಳಾರತಿ ನಡೆಯಿತು.
ವಿಶೇಷ ಉತ್ಸವಗಳು: ಬೆನಕನ ಅಮಾವಾಸ್ಯೆ ಪ್ರಯುಕ್ತ ಹರಕೆ ಹೊತ್ತ ಮಾದಪ್ಪನ ಭಕ್ತಾದಿಗಳಿಂದ ಬೆಳಗ್ಗೆ 8 ಗಂಟೆ ಸಮಯದಲ್ಲಿ ಬೆಳ್ಳಿ ರಥೋತ್ಸವ ಹಾಗೂ ಹುಲಿವಾಹನ ಉತ್ಸವ ಮತ್ತು ರುದ್ರಾಕ್ಷಿ ಮಂಟಪೋತ್ಸವ ಮಲೆ ಮಹದೇಶ್ವರ ಉತ್ಸವ, ಬಸವ ಮುಡಿಸೇವೆ, ದೂಪದ ಸೇವೆ, ಪಂಜಿನ ಸೇವೆ ಹಾಗೂ ಉರುಳು ಸೇವೆ ನಡೆಯಿತು. ಈ ವೇಳೆ ಭಕ್ತರು "ಉಘೇ ಮಾದಪ್ಪ " "ಉಘೇ " ಎಂದು ನಾಮಸ್ಮರಣೆ ಮಾಡುವ ಮೂಲಕ ಜಯ ಘೋಷ ಹಾಕಿದರು.ವಿಶೇಷ ದಾಸೋಹ: ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಬೆನಕನ ಅಮಾವಾಸ್ಯೆ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬೆಳಗಿನ ಉಪಹಾರ ಚಿತ್ರಾನ್ನ, ಕಾರ ಪೊಂಗಲ್, ತರಕಾರಿ ಬಾತ್, ಬಿಸಿಬೇಳೆ ಬಾತ್, ಸಿಹಿ ಪೊಂಗಲ್. ಮಧ್ಯಾಹ್ನ ಉಪಹಾರ ಅನ್ನ ಸಾಂಬಾರು, ಪರಂಗಿಹುಳಿ, ಪಾಯಸ, ಬೂಂದಿ, ಪುಳಿಯೋಗರೆ ಪ್ರಸಾದವನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಕ್ತಾದಿಗಳಿಗೆ ಕಲ್ಪಿಸಲಾಗಿತ್ತು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದ ಪುಟ್ಟಲಕ್ಷ್ಮಿ, ಜಯರಾಂ ಕುಟುಂಬದ ವತಿಯಿಂದ ವಿಶೇಷ ದಾಸೋಹಕ್ಕೆ 35 ಕಿಂಟ್ವಾಲ್ ಅಕ್ಕಿ, 24 ಟಿನ್ ಎಣ್ಣೆ , 250 ಕೆಜಿ ತೊಗರಿಬೇಳೆ ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು ನೀಡಿದ್ದರು.ಭಕ್ತ ಸಮೂಹ: ಬೆನಕನ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ತಮಿಳುನಾಡಿನಿಂದಲೂ ಲಕ್ಷಾಂತರ ಭಕ್ತರು ಆಗಮಿಸುವ ಮೂಲಕ ಸರದಿ ಸಾಲಿನಲ್ಲಿ ನಿಂತು ಮಲೆ ಮಹದೇಶ್ವರರ ದರ್ಶನ ಪಡೆದರು. ಮಾದೇಶ್ವರನ ಬೆಟ್ಟದಲ್ಲಿ ಎತ್ತ ನೋಡಿದರೂ ಭಾರಿ ಭಕ್ತ ಸಮೂಹವೇ ನೆರದಿತ್ತು.
ಬೆನಕನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ವಿಶೇಷ ದಾಸೋಹ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಲಾಗಿದೆ.ಎಇ ರಘು, ಕಾರ್ಯದರ್ಶಿ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ