ಮಳೆಗಾಗಿ ಕೂಲಿಕಾರರಿಂದ ವಿಶೇಷ ಪೂಜೆ

| Published : Jul 03 2025, 11:51 PM IST

ಸಾರಾಂಶ

ಕಳೆದ ತಿಂಗಳಿಂದ ಮಳೆಯಿಲ್ಲದ ಕಾರಣ ಬೆಳೆಗಳು ಬಾಡಲಾರಂಭಿಸಿವೆ. ಹೀಗಾಗಿ ಮಳೆಗಾಗಿ ಕೆಲಸದ ಸ್ಥಳದಲ್ಲಿ ಕೂಲಿಕಾರರು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಯಲಬುರ್ಗಾ:

ತಾಲೂಕಿನ ಕರಮುಡಿ ಗ್ರಾಮದಲ್ಲಿ ನರೇಗಾದಡಿ ಆರಂಭವಾಗಿದ್ದ ಸಮುದಾಯ ಬದು ನಿರ್ಮಾಣ ಕಾಮಗಾರಿಯ ಕೊನೆಯ ದಿನದಂದು ಕೆಲಸದ ಸ್ಥಳದಲ್ಲಿ ಕೂಲಿಕಾರರು ಮಣ್ಣಿನಿಂದ ಈಶ್ವರ ಮತ್ತು ಬಸವಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಿದರು.

ಕಳೆದ ತಿಂಗಳಿಂದ ಮಳೆಯಿಲ್ಲದ ಕಾರಣ ಬೆಳೆಗಳು ಬಾಡಲಾರಂಭಿಸಿವೆ. ಹೀಗಾಗಿ ಮಳೆಗಾಗಿ ಕೆಲಸದ ಸ್ಥಳದಲ್ಲಿ ಕೂಲಿಕಾರರು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನರೇಗಾ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೂಲಿಕಾರರಿಗೆ ಜಮೀನಿನ ರೈತರು ಉಪಾಹಾರ ತಯಾರಿಸಿ, ಉಣಬಡಿಸಿದರು.

ಕರಮುಡಿ ಗ್ರಾಮದಲ್ಲಿ ಪ್ರತಿದಿನ ೮ ಜನ ಕಾಯಕ ಬಂಧುಗಳ ತಂಡದಲ್ಲಿ ೫೦೦ಕ್ಕೂ ಹೆಚ್ಚು ಕೂಲಿಕಾರರು ರೈತರ ಜಮೀನುಗಳಿಗೆ ಕಂದಕ ಬದುಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಮಣ್ಣಿನ ಸವಕಳಿ ತಡೆದು, ಫಲವತ್ತತೆ ಕಾಪಾಡುವ ಜತೆಗೆ ಬದುಗಳಲ್ಲಿ ಮಳೆನೀರು ಸಂಗ್ರಹಗೊಂಡು ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಲಿದೆ ಎನ್ನುವುದು ನರೇಗಾ ಯೋಜನೆಯ ಆಶಯವಾಗಿದೆ.

ಇದೇ ವೇಳೆ ಮಹಿಳಾ ಕೂಲಿಕಾರಳಾದ ಶರಣವ್ವ ಬೆಟಗೇರಿ ಮತ್ತು ತಂಡದವರು ಭಕ್ತಿಗೀತೆ ಹಾಗೂ ಜನಪದ ಗೀತೆ ಹಾಡಿದರು. ಕಾಯಕ ಬಂಧುಗಳಾದ ಮಂಜುನಾಥ ಬೆಟಗೇರಿ, ರಮೇಶ ನಿಡಗುಂದಿ, ಮಹಾಂತೇಶ ಹೊಸಮನಿ, ನಾಗಪ್ಪ, ಶರಣವ್ವ, ಸುಮಂಗಲಾ ಹಾಜರಿದ್ದರು.