ನವರಾತ್ರಿ ಸಂದರ್ಭದಲ್ಲಿ ಬನ್ನಿಮಹಾಂಕಾಳಿ ದೇವಿಗೆ ಹರಕೆ ಹೊತ್ತು ಮೌನವ್ರತ ಆಚರಿಸಿ ಪೂಜೆ ಸಲ್ಲಿಸುವ ವಿಶಿಷ್ಟ ಸಂಪ್ರದಾಯ ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಕೇಸೂರು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದಿಗೂ ಮುಂದುವರಿದಿದ್ದು, ಮಹಿಳೆಯರು ಹಾಗೂ ಮಕ್ಕಳು ಶ್ರದ್ಧಾ-ಭಕ್ತಿಯಿಂದ ಪಾಲ್ಗೊಳ್ಳುವ ಈ ಆಚರಣೆ ಭಕ್ತಿ, ನಂಬಿಕೆ ಮತ್ತು ಪರಂಪರೆಯ ಪ್ರತೀಕವಾಗಿದೆ.

ಕುಷ್ಟಗಿ: ನವರಾತ್ರಿ ಸಂದರ್ಭದಲ್ಲಿ ಬನ್ನಿಮಹಾಂಕಾಳಿ ದೇವಿಗೆ ಹರಕೆ ಹೊತ್ತು ಮೌನವ್ರತ ಆಚರಿಸಿ ಪೂಜೆ ಸಲ್ಲಿಸುವ ವಿಶಿಷ್ಟ ಸಂಪ್ರದಾಯ ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಕೇಸೂರು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದಿಗೂ ಮುಂದುವರಿದಿದ್ದು, ಮಹಿಳೆಯರು ಹಾಗೂ ಮಕ್ಕಳು ಶ್ರದ್ಧಾ-ಭಕ್ತಿಯಿಂದ ಪಾಲ್ಗೊಳ್ಳುವ ಈ ಆಚರಣೆ ಭಕ್ತಿ, ನಂಬಿಕೆ ಮತ್ತು ಪರಂಪರೆಯ ಪ್ರತೀಕವಾಗಿದೆ.

ನವರಾತ್ರಿಯ ದಿನಗಳಲ್ಲಿ ಮಹಿಳೆಯರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಮನೆ ಸ್ವಚ್ಛಗೊಳಿಸಿ, ಸ್ನಾನ ಮಾಡಿ, ರಂಗೋಲಿ ಹಾಕಿ, ದೇವರ ಕೋಣೆಯಲ್ಲಿ ದೀಪ ಬೆಳಗಿಸುತ್ತಾರೆ. ಬಳಿಕ ಹೂವು, ಕಾಯಿ, ಕುಂಕುಮ ಹಾಗೂ ಹಣ್ಣು-ಹಂಪಲುಗಳನ್ನು ತೆಗೆದುಕೊಂಡು ಗುಂಪು ಗುಂಪಾಗಿ ಬನ್ನಿಮಹಾಂಕಾಳಿ ಕಟ್ಟೆಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಯಾರೊಂದಿಗೂ ಮಾತನಾಡದೆ ಮೌನವಾಗಿ ದೇವಿಗೆ ಪೂಜೆ ಸಲ್ಲಿಸಿ ಹರಕೆ ಸಮರ್ಪಿಸುತ್ತಾರೆ. ಪೂಜೆ ಮುಗಿಸಿ ಮನೆಗೆ ಮರಳಿದ ಬಳಿಕವೇ ಮೌನವ್ರತ ಮುಕ್ತಾಯಗೊಳಿಸುತ್ತಾರೆ.

ಮೌನವ್ರತದ ಮೂಲಕ ದೇವಿಯಲ್ಲಿ ಪ್ರಾರ್ಥಿಸಿದರೆ ಕಷ್ಟಗಳು ನಿವಾರಣೆಯಾಗಿ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ನವರಾತ್ರಿಯ ದಿನಗಳಲ್ಲಿ ಈ ಆಚರಣೆಗೆ ವಿಶೇಷ ಮಹತ್ವವಿದೆ.

ಮಹಿಳೆಯರು ಗಂಡನ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಒಳಿತಿಗಾಗಿ ಪ್ರಾರ್ಥಿಸಿದರೆ, ಯುವತಿಯರು ಉತ್ತಮ ಜೀವನ ಸಂಗಾತಿ ದೊರೆತು ಸುಖಮಯ ಜೀವನ ಸಾಗಿಸುವಂತಾಗಲಿ ಎಂದು ಬೇಡಿಕೊಳ್ಳುತ್ತಾರೆ. ಮಕ್ಕಳು ಉತ್ತಮ ವಿದ್ಯಾಭ್ಯಾಸ ಹಾಗೂ ಉಜ್ವಲ ಭವಿಷ್ಯಕ್ಕಾಗಿ ದೇವಿಯ ಮೊರೆ ಹೋಗುತ್ತಾರೆ. ವೈಯಕ್ತಿಕ ಆಶಯಗಳ ಜತೆಗೆ ಕುಟುಂಬದ ಸುಖ-ಸಮೃದ್ಧಿಗಾಗಿ ಹರಕೆ ಹೊರುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

ಹಲವು ದಶಕಗಳಿಂದ ಈ ಮೌನವ್ರತದ ಆಚರಣೆ ನಡೆದುಕೊಂಡು ಬರುತ್ತಿದ್ದು, ಮಹಿಳೆಯರು ಮತ್ತು ಯುವತಿಯರು, ಮಕ್ಕಳು ಇದರಲ್ಲಿ ಪಾಲ್ಗೊಳ್ಳುತ್ತಾರೆ, ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಪ್ರಯತ್ನವೂ ನಡೆಯುತ್ತಿದೆ.

ನವರಾತ್ರಿ ಸಂದರ್ಭದಲ್ಲಿ ಬನ್ನಿಮಹಾಂಕಾಳಿಗೆ ಹರಕೆ ಹೊತ್ತು ಮೌನವ್ರತ ಆಚರಿಸಿ ಪೂಜೆ ಸಲ್ಲಿಸುತ್ತೇವೆ. ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಗಂಡನ ಒಳಿತಿಗಾಗಿ ದೇವಿಯಲ್ಲಿ ಪ್ರಾರ್ಥಿಸುತ್ತಿದ್ದು, ಹಿರಿಯರಿಂದ ನಡೆದುಕೊಂಡು ಬಂದಿರುವ ಮೌನವ್ರತದ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಹರಕೆ ಹೊತ್ತು ಪೂಜೆ ಸಲ್ಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎನ್ನುತ್ತಾರೆ ಕುಷ್ಟಗಿ ಪಟ್ಟಣದ ಗೃಹಿಣಿ ಶಾರದಾ ಶೆಟ್ಟರ್‌ ಹಾಗೂ ಮಹಾದೇವಿ.