ಸಾರಾಂಶ
ಬೆಳಗ್ಗಿನಿಂದಲೇ ಶ್ರೀ ಸ್ವಾಮಿಗೆ ಪೂಜಾರರಾದ ದಶರಥ ಮತ್ತು ವಿಜೇತ್ ಹಾಗೂ ವಿವಿಧ ಗೊರವಯ್ಯರ ಸಮ್ಮುಖದಲ್ಲಿ ಹಾಲು, ತುಪ್ಪದಭಿಷೇಕ ಮತ್ತು ರುದ್ರಾಭಿಷೇಕ ನಡೆಯಿತು.
ಬೀರೂರು: ಕಾರ್ಣೀಕದೊಡೆಯ ಎಂದೇ ಪ್ರಸಿದ್ಧಿಯಾಗಿರುವ ಬೀರೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಶ್ರೀಮೈಲಾರಲಿಂಗಸ್ವಾಮಿ ಮತ್ತು ಗಂಗಾಮಾಳಾಂಭಿಕ ದೇವಿಯ ಮೂಲ ಸ್ಥಾನವಾದ ಗಾಳಿಹಳ್ಳಿ ಸಮೀಪದ ಪಾದದಕೆರೆ ಬಳಿಯ ಸ್ವಾಮಿಯ ಪಾದುಕೆಗೆ ಶ್ರಾವಣ ಮಾಸದ ಅಂಗವಾಗಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗಿನಿಂದಲೇ ಶ್ರೀ ಸ್ವಾಮಿಗೆ ಪೂಜಾರರಾದ ದಶರಥ ಮತ್ತು ವಿಜೇತ್ ಹಾಗೂ ವಿವಿಧ ಗೊರವಯ್ಯರ ಸಮ್ಮುಖದಲ್ಲಿ ಹಾಲು, ತುಪ್ಪದಭಿಷೇಕ ಮತ್ತು ರುದ್ರಾಭಿಷೇಕ ನಡೆಯಿತು. ನಂತರ ಪಾದುಕೆಗಳಿಗೆ ವಿವಿಧ ಹೂಗಳ ಅಲಂಕಾರ ಮಾಡಿ, ಸ್ವಾಮಿಗೆ ಪ್ರಿಯವಾದ ದೋಣಿಸೇವೆ(ಬಾಳೆಹಣ್ಣಿನ ರಸಾಯನ)ಯನ್ನು ಪಾಲ್ಗೊಂಡಿದ್ದ ಗೊರವಯ್ಯರು ನಡೆಸಿಕೊಟ್ಟರು. ಶ್ರಾವಣ ಮಾಸದಲ್ಲಿ ನಡೆಯುವ ಈ ವಿಶೇಷ ಪೂಜೆಯಲ್ಲಿ ಭಕ್ತರು ಪಾಲ್ಗೊಂಡರೆ ತಮ್ಮ ಇಷ್ಟಾರ್ಥ ಸಿದ್ಧಿಸುವ ನಂಬಿಕೆ ಇಲ್ಲಿನ ಜನರಿಲ್ಲಿದೆ. ನಂತರ ದೇವಾಲಯ ಸಮಿತಿ ಅನ್ನಸಂತರ್ಪಣೆ ಏರ್ಪಡಿಸಿತ್ತು. ಸಮಿತಿಯ ಗೌಡರು ಹಾಗೂ ಮುಖಂಡರು ಸೇರಿ ನೂರಾರು ಭಕ್ತರು ಪಾಲ್ಗೊಂಡಿದ್ದರು.