ಹಾಸನದಲ್ಲಿ ರಾಮನಾಮ ಸ್ಮರಣೆ, ವಿಶೇಷ ಪೂಜೆ

| Published : Jan 23 2024, 01:49 AM IST

ಸಾರಾಂಶ

ಜೈ ಶ್ರೀ ರಾಮ್‌....ಜೈ ಶ್ರೀರಾಮ್‌...ಫೋನ್‌ ಮಾಡಿದರೂ ಜೈ ಶ್ರೀ ರಾಮ್‌, ಎದುರುಗಡೆ ಸಿಕ್ಕರೂ ಜೈ ಶ್ರೀರಾಮ್. ಪ್ರತಿ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಹೋಮ. ರಸ್ತೆ ರಸ್ತೆಯಲ್ಲೂ ಅನ್ನ ಸಂತರ್ಪಣೆ. ಕಾರು ಜೀಪು ಬೈಕುಗಳಲ್ಲಿ ರಾರಾಜಿಸುತ್ತಿದ್ದ ಕೇಸರಿ ಬಾವುಟ. ಅತ್ತ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ಹಾಸನ ನಗರದ ಸೇರಿದಂತೆ ತಾಲೂಕು ಕೇಂದ್ರಗಳು, ಹೋಬಳಿ ಕೇಂದ್ರಗಳು ಹಾಗೂ ಹಳ್ಳಿಗಳ್ಳಿಗಳಲ್ಲೂ ಶ್ರೀರಾಮನ ನಾಮಸ್ಮರಣೆ ನಡೆಯಿತು.

ರಸ್ತೆ ರಸ್ತೆಯಲ್ಲೂ ಅನ್ನ ಸಂತರ್ಪಣೆ । ದೇವಸ್ಥಾನಗಳಲ್ಲಿ ವಿವಿಧ ಸೇವೆ । ಕಾರು, ಜೀಪು, ಬೈಕ್‌ಗಳಲ್ಲಿ ರಾರಾಜಿಸಿದ ಕೇಸರಿ ಬಾವುಟ

ಕನ್ನಡಪ್ರಭ ವಾರ್ತೆ ಹಾಸನ

ಜೈ ಶ್ರೀ ರಾಮ್‌....ಜೈ ಶ್ರೀರಾಮ್‌...ಫೋನ್‌ ಮಾಡಿದರೂ ಜೈ ಶ್ರೀ ರಾಮ್‌, ಎದುರುಗಡೆ ಸಿಕ್ಕರೂ ಜೈ ಶ್ರೀರಾಮ್. ಪ್ರತಿ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಹೋಮ. ರಸ್ತೆ ರಸ್ತೆಯಲ್ಲೂ ಅನ್ನ ಸಂತರ್ಪಣೆ. ಕಾರು ಜೀಪು ಬೈಕುಗಳಲ್ಲಿ ರಾರಾಜಿಸುತ್ತಿದ್ದ ಕೇಸರಿ ಬಾವುಟ.

ಅತ್ತ ಅಯೋಧ್ಯೆಯ ರಮಾಮಂದಿರದಲ್ಲಿ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ಹಾಸನ ನಗರದ ಸೇರಿದಂತೆ ತಾಲೂಕು ಕೇಂದ್ರಗಳು, ಹೋಬಳಿ ಕೇಂದ್ರಗಳು ಹಾಗೂ ಹಳ್ಳಿಗಳ್ಳಿಗಳಲ್ಲೂ ಶ್ರೀರಾಮನ ನಾಮಸ್ಮರಣೆ ನಡೆಯಿತು.

ಯುವಕರು ಹಾಗೂ ಗ್ರಾಮಸ್ಥರು ರಸ್ತೆ ರಸ್ತೆಗಳಲ್ಲಿ ಕೇಸರಿ ಬಾವುಟ ಬಂಟಿಗ್ಸ್‌ ಗಳನ್ನು ಕಟ್ಟಿ ಪ್ರಮುಖ ರಸ್ತೆಗಳಲ್ಲಿ ಶ್ರೀರಾಮ, ಸೀತಾ ರಾಮ ಹಾಗೂ ಆಂಜನೇಯನ ಫೋಟೋಗಳನ್ನು ಹಾಕಿದ್ದರು. ಹಾಸನ ನಗರದ ಎನ್‌ ಆರ್‌ ವೃತ್ತ, ಸ್ಲೇಟರ್ಸ್‌ ಹಾಲ್‌ ಸರ್ಕಲ್್‌, ಎಂ.ಜಿ ರಸ್ತೆ, ಕುವೆಂಪು ನಗರ ವೃತ್ತ, ಕಸ್ತೂರಬಾ ರಸ್ತೆ, ಸಾಲಗಾಮೆ ರಸ್ತೆ ಸೇರಿದಂತೆ ಬಹುತೇಕ ವೃತ್ತಗಳು ಹಾಗೂ ರಸ್ತೆಗಳಲ್ಲಿ ಶಾಮಿಯಾನ ಹಾಕಿ ರಾಮನ ಫೋಟೋ ಇಟ್ಟು ಪೂಜೆ ಮಾಡಲಾಯಿತು.

ಬೆಳಗಿನಿಂದಲೇ ನಗರದ ಸೀತಾರಾಮಾಂಜನೇಯ ದೇವಾಲಯ, ನೀರುವಾಗಿಲು ಆಂಜನೇಯಸ್ವಾಮಿ ದೇಗುಲ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲೀ ವಿಶೇಷ ಪೂಜೆಗಳನ್ನು ನಡೆಸಲಾಯಿತು.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನ ಮಹೋತ್ಸವ ನಡೆಯುತ್ತಿದ್ದರೆ ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ೫ ಗಂಟೆಯಿಂದಲೇ ಯೋಗ ಮತ್ತು ಜಪ ಮಾಡುವ ಮೂಲಕ ಶ್ರೀರಾಮನಿಗೆ ನಮನ ಸಲ್ಲಿಸಿದರು.

ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಎಂ.ವಿ. ಗಿರೀಶ್ ಮಾತನಾಡಿ, ಅಯೋಧ್ಯಾ ಶ್ರೀರಾಮಲಲ್ಲಾ ದೇವರ ಪ್ರಾಣ ಪ್ರತಿಷ್ಠಾಪನ ಮಹೋತ್ಸವ ನಡೆಯುತ್ತಿದ್ದರೆ ನಾವು ಯೋಗ ಮತ್ತು ಜಪದ ಮೂಲಕ ಶ್ರೀರಾಮನಿಗೆ ನಮನವನ್ನು ಸಲ್ಲಿಸುತ್ತಿದ್ದೇವೆ. ಯೋಗ ಎಂದರೆ ಕೇವಲ ಆಸನಗಳಲ್ಲ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬಹುದು. ಮನಸ್ಸು ಮತ್ತು ದೇಹವನ್ನು ಸಮಾನ ಮಟ್ಟಕ್ಕೆ ತರಬಹುದು. ಪ್ರಭು ಶ್ರೀರಾಮನು ಕರ್ಮಯಾಗಕ್ಕೆ ಹೆಚ್ಚಿನ ಪ್ರಾಶಸ್ಯವನ್ನು ಕೊಟ್ಟಿದ್ದು, ತಮ್ಮ ಪ್ರತಿ ಕೆಲಸಗಳಲ್ಲಿಯೂ ಆನಂದವನ್ನು ಅನುಭವಿಸಬೇಕು ಎಂಬುದು ಶ್ರೀರಾಮನ ಬಯಕೆ ಆಗಿತ್ತು ಎಂದರು.

ಇದೇ ವೇಳೆ ಸೀತಾ ರಾಮಾಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಶ್ರೀ ಕಾಂತ್, ಬ್ರಾಹ್ಮಣ ಯುವಜನ ಸಭಾ ಅಧ್ಯಕ್ಷೆ ರೂಪಮುರುಳಿ, ಪಲ್ಲವಿ ಮಂಜುನಾಥ್, ಸಂಧ್ಯಾ ನಾಗಭೂಷಣ್, ಸಂಧ್ಯಾ ಕೃಷ್ಣಮೂರ್ತಿ, ಅಶ್ವಿನಿ ರಂಗನಾಥ್. ಪತಂಜಲಿ ಯೋಗ ಹಿರಿಯ ಸದಸ್ಯ ರಂಗನಾಥ್ ಇನ್ನಿತರರು ಉಪಸ್ಥಿತರಿದ್ದರು.

ನಿವೃತ್ತ ಯೋಧರಿಂದ ಬಾವುಟ ವಿತರಣೆ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ನಿವೃತ್ತ ಯೋಧರು ಮಾಜಿ ಸೈನಿಕರ ಸಂಘದಿಂದ ಸಾರ್ವಜನಿಕರಿಗೆ ಕೇಸರಿ ಬಾವುಟ ವಿತರಣೆ ಮಾಡಿದರು.

ನಮ್ಮದು ಮಾಜಿ ಸೈನಿಕರ ವಾಕಿಂಗ್ ಸಂಘವಾಗಿದ್ದು, ಶ್ರೀರಾಮನ ಹೆಸರಿನಲ್ಲಿ ಇಡೀ ದೇಶದೊಳಗೆ ಒಳ್ಳೆಯ ಕೆಲಸ ನಡೆಯುತ್ತಿದ್ದು,. ಇದಕ್ಕೆ ನಮ್ಮ ಮಾಜಿ ಸೈನಿಕರು ಕೂಡ ಕೈಜೋಡಿಸಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ತಂಡ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಕ್ತರಿಗೆ ಜೈಶ್ರೀರಾಮ್ ಎನ್ನುವ ಮಾರುತಿ ಭಾವಚಿತ್ರ ಇರುವ ಬಾವುಟವನ್ನು ವಿತರಣೆ ಮಾಡುತ್ತಿರುವುದಾಗಿ ಹೇಳಿದರು.

ಇದೇ ವೇಳೆ ಮಾಜಿ ಸೈನಿಕರ ವಾಕಿಂಗ್ ಸಂಘದ ಕೃಷ್ಣ, ಬಾಲಕೃಷ್ಣ, ಈರೇಗೌಡ, ಅಪ್ಪಣ್ಣಗೌಡ, ಪ್ರಕಾಶ್, ರುದ್ರೇಶ್ ಹಾಗೂ ಇತರರು ಇದ್ದರು.

ಪೆಂಡಾಲ್ ಗಣಪತಿ ಸೇವಾ ಸಮಿತಿಯಿಂದ ರಾಮನಿಗೆ ಪೂಜೆ

ನಗರದ ಸಿಟಿ ಬಸ್ ನಿಲ್ದಾಣ ರಸ್ತೆ ಬಳಿ ಇರುವ ಪೆಂಡಾಲ್ ಗಣಪತಿ ಸೇವಾ ಸಮಿತಿಯಿಂದ ಶ್ರೀರಾಮನ ಫೊಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅವರು ಆಗಮಿಸಿ ಪ್ರಸಾದ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಗಣಪತಿ ಸೇವಾ ಸಮಿತಿಯಿಂದ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಪಾನಕ, ಮಜ್ಜಿಗೆ ಹಾಗೂ ಕೋಸಂಬರಿಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ಧಂತಹ ರಾಮಮಂದಿರವು ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದೆ ಎಂದರು.

ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಚ್. ನಾಗರಾಜು ಮಾತನಾಡಿದರು. ಸಂಚಾಲಕ ಚನ್ನವೀರಪ್ಪ, ಶ್ರೀ ಗಣಪತಿ ಸೇವಾ ಸಮಿತಿಯ ಅನಂತನಾರಾಯಣ್, ಎಂ.ಕೆ. ಕಮಲ್ ಕುಮಾರ್, ನಾಗೇಂದ್ರ, ಶೇಖರ್, ಮುರುಗೇಂದ್ರ, ನೀಲಾ ಕುಮಾರ್, ಕಿರಣ್, ದೀಪಕ್, ಗಿರೀಶ್ ಚನ್ನವೀರಪ್ಪ, ನೇತ್ರವತಿ ಗಿರೀಶ್‌ ಪಿ. ಇದ್ದರು.

ಸಿದ್ದಗಂಗಾ ಸ್ವಾಮೀಜಿ ಪುಣ್ಯಸ್ಮರಣೆ: ಶ್ರೀರಾಮನಾಮ ಜಪ, ರಕ್ತದಾನ ಶಿಬಿರ

ಹಾಸನ: ಶ್ರೀ ಶಿವಕುಮಾರ ಸ್ವಾಮೀಜಿಯವರ ೫ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಶ್ರೀರಾಮ ಪ್ರತಿಷ್ಠಾಪನೆ ಅಂಗವಾಗಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನಗರದ ಸ್ಲೇಟರ್ಸ್‌ ಹಾಲ್ ವೃತ್ತದ ಬಳಿ ಸ್ವಾಮೀಜಿ ಪ್ರತಿಮೆಗೆ ಪೂಜೆ, ಜೀವ ರಕ್ಷ ಇವರಿಂದ ರಕ್ತದಾನ ಶಿಬಿರ, ಸಹ್ಯಾದ್ರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇವರಿಂದ ಉಚಿತ ಆರೋಗ್ಯ ತಪಾಸಣೆ, ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಶ್ರೀ ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ನೆರವೇರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಸಂಘದ ಮೋಹನ್, ಮಲ್ಲಿಕಾರ್ಜುನ್, ಕಟ್ಟಾಯ ಶಿವಕುಮಾರ್, ಅವಿನಾಶ್, ವೆಂಕಟೇಶ್, ಕೀರ್ತಿ ಕೆರೆಹಳ್ಳಿ, ಧನುಷ್, ಪ್ರವೀಣ್, ಮೋಹನ್ ಕುಮಾರ್, ಶೇಖರ್, ಮಲ್ಲಿಕಾರ್ಜುನ್, ವಿಜಯಕುಮಾರ್, ಮಹಂತೇಶ್, ಹೇಮಂತ್ ಉಪಸ್ಥಿತರಿದ್ದರು.

ಸಿದ್ದಗಂಗಾ ಶ್ರೀಗಳ ಸ್ಮರಣೆ ಅಂಗವಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ.

ಸೀತಾರಾಮಾಂನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರೀತಂಗೌಡ

ಹಾಸನ ನಗರದ ಪಾರ್ಕ್ ರಸ್ತೆ ಬಳಿ ಇರುವ ಶ್ರೀ ಸೀತಾರಾಂಜನೇಯ ದೇವಸ್ಥಾನಕ್ಕೆ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಿತಂ ಜೆ. ಗೌಡರು ತೆರಳಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಶ್ರೀ ವಂದೇ ಮಾತರಂ ಗೆಳೆಯರ ಬಳಗದಿಂದ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯ ನೇರ ಪ್ರಸಾರವನ್ನು ಶ್ರೀ ಸೀತಾರಾಂಜನೇಯ ದೇವಸ್ಥಾನದಲ್ಲಿ ದೊಡ್ಡ ಪ್ರೊಜೆಕ್ಟರ್ ಮೂಲಕ ಏರ್ಪಾಡು ಮಾಡಲಾಗಿದ್ದು, ಇದೆ ವೇಳೆ ಹೋಮಗಳು ನಡೆದವು. ಶ್ರೀರಾಮನ ದರ್ಶನ ಮಾಡಲು ಬೆಳಗಿನಿಂದಲೇ ಸಾವಿರಾರು ಭಕ್ತರ ದಂಡೆ ಸೇರಿತು. ಇದೆ ವೇಳೆ ಇಸ್ಕಾನ್ ದೇವಾಲಯದ ಭಕ್ತರು ಮೆರವಣಿಗೆ ಮೂಲಕ ನೃತ್ಯ ಹಾಗೂ ಶ್ರೀರಾಮನ ನಾಮದ ಭಜನೆ ಮಾಡಿಕೊಂಡು ಬಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮುಖಂಡ ಎಚ್.ಪಿ.ಕಿರಣ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಹರ್ಷಿತ್, ಮಹಿಪಾಲ್, ಪ್ರಣವ್ ಭಾರಧ್ವಜ್ ಉಪಸ್ಥಿತರಿದ್ದರು.

ಶ್ರೀರಾಮನ ಭಾವಚಿತ್ರದೊಂದಿಗೆ ಜೀಪ್, ಬೈಕ್ ರ್‍ಯಾಲಿ

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ದೇವರ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಹಿನ್ನಲೆಯಲ್ಲಿ ಹಾಸನ ನಗರದ ಟೀಮ್ ಹಾಸನ್ ಅಫ್ ರೋಡರ್ಸ್‌ ವತಿಯಿಂದ ಶ್ರೀರಾಮನ ಭಾವಚಿತ್ರವನ್ನಿಟ್ಟು ಜೀಪ್ ಮತ್ತು ಬೈಕ್ ರ್‍ಯಾಲಿ ಮೂಲಕ ನಗರದ ಬಹುತೇಕ ಕಡೆ ಮೆರವಣಿಗೆ ನಡೆಸಿ ಗಮನೆಳೆದರು.

ಇದೇ ವೇಳೆ ಟೀಮ್ ಹಾಸನ್ ಅಫ್ ರೋಡರ್ಸ್ ಕಾರ್ಯದರ್ಶಿ ದರ್ಶನ್ ಮಲ್ನಾಡ್ ಮಾಧ್ಯಮದೊಂದಿಗೆ ಮಾತನಾಡಿ, ಕಂಡ ಕನಸ್ಸಂತೆ ಭಾರತ ರಾಮರಾಜ್ಯವಾಗುತ್ತಿದ್ದು, ಅಯೋಧ್ಯೆಯಲ್ಲಿ ಶ್ರೀರಾಮ ಅಯೋಧ್ಯೆ ಉದ್ಘಾಟನೆಯಾಗಿದ್ದು, ಈ ಸುಸಂದರ್ಭದಲ್ಲಿ ಟೀಮ್ ಹಾಸನ್ ಅಫ್ ರೋಡರ್ಸ್‌ ವತಿಯಿಂದ ಇಡೀ ಹಾಸನ ನಗರಾಧ್ಯಂತ ಶ್ರೀರಾಮನ ರಥದ ಜತೆಯಾಗಿ ರೋಡ್ ಶೋ ಮಾಡುವ ಮೂಲಕ ಶ್ರೀರಾಮನ ಜಪದೊಂದಿಗೆ ವಿಜೃಂಬಣೆಯಿಂದ ಆಚರಿಸುತ್ತಿದ್ದೇವೆ ಎಂದರು. ರಾಜ್ಯದ ದೇಶದ ಮೂಲೆ ಮೂಲೆಯಲ್ಲೂ ಜನರು ಭಕ್ತಪೂರ್ಣವಾಗಿ ಆಚರಿಸುತ್ತಿದ್ದು, ಎಲ್ಲಾರಿಗೂ ರಾಮನ ಆಶೀರ್ವಾದದಿಂದ ಈ ದೇಶ ರಾಮರಾಜ್ಯವಾಗಲಿ. ೫೦೦ ವರ್ಷಗಳ ಹಿಂದಿನ ಕನಸ್ಸಾಗಿದ್ದು, ಇಮದು ನನಸಾಗಿದ್ದು, ಇನ್ನು ಮುಂದೆ ಪ್ರತಿವರ್ಷ ಇದೆ ದಿನದಂದ ವಿಜೃಂಭಣೆಯಿಂದ ಆಚರಿಸುವುದಾಗಿ ಹೇಳಿದರು.

ಬೈಕ್ ರ್‍ಯಾಲಿ ಮೆರವಣಿಗೆಯಲ್ಲಿ ಟೀಮ್ ಹಾಸನ್ ಅಫ್ ರೋಡರ್ಸ್‌ ಗೌರವಾಧ್ಯಕ್ಷರಾದ ಮೊಗಣ್ಣಗೌಡ, ಅಧ್ಯಕ್ಷರಾದ ಅಭಿಷೇಕ್, ಅಶ್ವಿನ್, ಅಶೋಕ್ ಪಾಲ್ಗೊಂಡಿದ್ದರು.