ಸಾರಾಂಶ
ವಿವಿಧೆಡೆ ವೈಕುಂಠ ಏಕಾದಶಿ ಅಂಗವಾಗಿ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರದೊಂದಿಗೆ ಜರುಗಿದವು.
ಕನ್ನಡಪ್ರಭ ವಾರ್ತೆ ಹನೂರು
ವಿವಿಧೆಡೆ ವೈಕುಂಠ ಏಕಾದಶಿ ಅಂಗವಾಗಿ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರದೊಂದಿಗೆ ಜರುಗಿದವು.ತಾಲೂಕಿನ ಶಿರಗೂಡು ಗ್ರಾಮದಲ್ಲಿರುವ ಲಕ್ಷ್ಮೀ ಪದ್ಮಾವತಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಿನ ಜಾವ 5ರಿಂದಲೇ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜೆ ನಡೆಯಿತು.
ಪ್ರಸಾದ ವಿನಿಯೋಗ:ವಿವಿಧಡೆಯಿಂದ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ವಿಶೇಷವಾಗಿ ಲಾಡು ಪ್ರಸಾದ ಹಾಗೂ ತರಕಾರಿ ಬಾತ್ ಅನ್ನು ಭಕ್ತರಿಗೆ ವಿತರಿಸಲಾಯಿತು. ಹನೂರು ಸೇರಿದಂತೆ ಸಿರುಗೋಡು, ಲೊಕ್ಕನಹಳ್ಳಿ ಉದ್ದನೂರು ಬೆಳ್ತೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿವಿಧೆಡೆ ಪೂಜೆ: ಧನುರ್ಮಾಸ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮವು ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾರಮ್ಮನಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಲಕ್ಷ್ಮೀ ಪದ್ಮಾವತಿ ವೆಂಕಟೇಶ್ವರ ಸ್ವಾಮಿ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮ ಸಹ ಜರುಗಿತು.