ಸಾರಾಂಶ
ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಬುಧವಾರ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ಕನ್ನಡಪ್ರಭ ವಾರ್ತೆ ರಾಮನಗರ
ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಬುಧವಾರ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನಡೆದವು.ಹಬ್ಬದ ಪ್ರಯುಕ್ತ ಭಕ್ತಾದಿಗಳು ಮುಂಜಾನೆಯಿಂದಲೇ ಶಿವನ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಜಾಗರಣೆ ವೃತಾಚರಣೆ ಮಾಡಿದರು. ಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ಹರಿಕಥೆ, ಶಿವ ಪಾರಾಯಣ, ಜಪ- ತಪಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿಯಿಡೀ ಸಂಭ್ರಮದಿಂದ ನೆರವೇರಿದವು.
ರಾಮನಗರದ ಐಜೂರಿನ ಮಲ್ಲೇಶ್ವರ ದೇವಸ್ಥಾನ, ವಿಜಯನಗರದಲ್ಲಿನ ಶ್ರೀ ಮುನೇಶ್ವರ ಸ್ವಾಮಿ ದೇವಾಲಯ, ಶಿವನಹಳ್ಳಿ ವೀರಭದ್ರಸ್ವಾಮಿ, ಧಾರಾಪುರ ಬಳಿಯಿರುವ ಅರ್ಧನಾರೀಶ್ವರ ದೇವಾಲಯ, ಬಿಡದಿ ಪಟ್ಟಣದ ಬಸವೇಶ್ವರ ದೇವಾಲಯ, ಶಿವಲಿಂಗಸ್ವಾಮಿ ದೇವಾಲಯ, ಕೇತಗಾನಹಳ್ಳಿಯ ಕಗ್ಗಲ್ ಬೀರೇಶ್ವರಸ್ವಾಮಿ ದೇಗುಲ, ನಿಂಗೇಗೌಡನದೊಡ್ಡಿಯ ಪುರಾತನ ಶಿವನ ದೇವಾಲಯ, ಬಿಲ್ಲಕೆಂಪನಹಳ್ಳಿ ಮಹದೇಶ್ವರ ದೇವಾಲಯ, ಬಾನಂದೂರಿನ ಬಸವೇಶ್ವರ ಮತ್ತು ಮಹದೇಶ್ವರ ದೇವಾಲಯಗಳಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆಗಳು ದಿನಪೂರ್ತಿ ನೆರವೇರಿದವು.ಗ್ರಾಮೀಣ ಪ್ರದೇಶಗಳಲ್ಲಿಯೂ ಈಶ್ವರ, ಶನೇಶ್ವರನ ದೇಗುಲಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಹೋಮ, ಅಭಿಷೇಕ ನಡೆದವು. ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶಿವನ ದೇಗುಲಗಳಲ್ಲಿ ಗಂಗಾಜಲವನ್ನು ಭಕ್ತರಿಗೆ ವಿತರಿಸಲಾಯಿತು.
ಜಿಲ್ಲೆಯ ಎಲ್ಲ ಶಿವಾಲಯಗಳಲ್ಲೂ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜೆ, ಭಜನೆ, ಹರಿಕಥೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.ಯಶಸ್ವಿಯಾಗಿ ನಡೆದ ಎಳವಾರ ಕಾರ್ಯ
ರಾಮನಗರ: ನಗರದ ವಿಜಯನಗರ (2ನೇ ವಾರ್ಡ್) ದಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ಅಗ್ನಿಕೊಂಡೋತ್ಸವ ಹಿನ್ನೆಲೆಯಲ್ಲಿ ಬುಧವಾರ ಎಳವಾರ ಕಾರ್ಯ ಯಶಸ್ವಿಯಾಗಿ ನಡೆಯಿತು. ವಿಜಯನಗರದ ಪ್ರಮುಖ ರಸ್ತೆಗಳಲ್ಲಿ ಎಳವಾರ ಸಾಗಿ ಮೆರವಣಿಗೆ ಮೂಲಕ ಬನ್ನಿಮಂಟಪ ಸೇರಿತು. ಎಳವಾರಕ್ಕೆ ಕರಗದಾರಕ ಶಿವಸ್ವಾಮಿ (ಅಪ್ಪಿ) ಪೂಜೆ ನೆರವೇರಿಸಿದರು.ಕೊಂಡಕ್ಕೆ ಎಳವಾರ ಹೊತ್ತು ಬಂದ ಜೋಡೆತ್ತುಗಳ ಆಕರ್ಷಣೆ ನೋಡುಗರ ಮೈ ಜುಮ್ಮೆನ್ನಿಸುವಂತಿತ್ತು. ವಿಶೇಷವಾಗಿ ಅಲಂಕರಿಸಲಾಗಿದ್ದ ಎತ್ತುಗಳ ಹೆಜ್ಜೆಯ ಗತ್ತು, ಮೈಕಟ್ಟು ನೋಡುಗರ ಗಮನ ಸೆಳೆದವು. ವಿಜಯನಗರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಎಳವಾರ ಸಂದರ್ಭಕ್ಕೆ ಸಾಕ್ಷಿ ಯಾದರು.