ವಿಶೇಷಚೇತನರಿಂದ ಮತದಾನ ಜಾಗೃತಿ ಮೂಡಿಸಲು ವಿಶೇಷ ರ್‍ಯಾಲಿ

| Published : Apr 05 2024, 01:06 AM IST

ವಿಶೇಷಚೇತನರಿಂದ ಮತದಾನ ಜಾಗೃತಿ ಮೂಡಿಸಲು ವಿಶೇಷ ರ್‍ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷಚೇತನರು, ಹಿರಿಯ ನಾಗರಿಕರಿಗಾಗಿಯೇ ಮತಗಟ್ಟೆಗಳಲ್ಲಿ ರ್‍ಯಾಂಪ್, ವೀಲ್‌ ಚೇರ್, ನೆರಳು, ನೀರಿನ ವ್ಯವಸ್ಥೆ ಸೇರಿ ಇತರೆ ಅನುಕೂಲಗಳು ಇರಲಿದ್ದು, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ತಾಪಂ ಇಒ ಪೂರ್ಣಿಮಾ ಕರೆ ನೀಡಿದರು. ಇದೇ ವೇಳೆ ಎಲ್ಲಾ ವಿಶೇಷಚೇತನರಿಂದ ಕಡ್ಡಾಯ ಮತದಾನದ ಸಹಿ ಸಂಗ್ರಹಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ನಂಜನಗೂಡು

ಮತದಾನದ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಸಮಾಜದ ವಿವಿಧ ವರ್ಗಗಳಲ್ಲಿ ವ್ಯಾಪಕವಾಗಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ನಂಜನಗೂಡು ತಾಲೂಕು ಪಂಚಾಯಿತಿ ಸ್ವೀಪ್ ಸಮಿತಿ ವತಿಯಿಂದ ವಿಶೇಷಚೇತನರಿಂದ ಮತದಾನ ಜಾಗೃತಿಯ ವಿಶೇಷ ರ್‍ಯಾಲಿಯನ್ನು ಆಯೋಜಿಸಲಾಗಿತ್ತು.

ಈ ರ್‍ಯಾಲಿಗೆ ಚಾಲನೆ ನೀಡಿದ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ತಾಪಂ ಇಒ ಪೂರ್ಣಿಮಾ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ವಿಶೇಷವಾದ ಶಕ್ತಿಯಿದೆ. ಸಂವಿಧಾನವು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕನ್ನು ನೀಡಿದೆ. ಪ್ರತಿಯೊಬ್ಬ ಅರ್ಹ ಮತದಾರರು ಮತ ಚಲಾವಣೆ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ಪಾಲನೆ ಮಾಡಬೇಕು ಎಂದು ಹೇಳಿದರು.

ವಿಶೇಷಚೇತನರು, ಹಿರಿಯ ನಾಗರಿಕರಿಗಾಗಿಯೇ ಮತಗಟ್ಟೆಗಳಲ್ಲಿ ರ್‍ಯಾಂಪ್, ವೀಲ್‌ ಚೇರ್, ನೆರಳು, ನೀರಿನ ವ್ಯವಸ್ಥೆ ಸೇರಿ ಇತರೆ ಅನುಕೂಲಗಳು ಇರಲಿದ್ದು, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಅವರು ಕರೆ ನೀಡಿದರು.

ಇದೇ ವೇಳೆ ಎಲ್ಲಾ ವಿಶೇಷಚೇತನರಿಂದ ಕಡ್ಡಾಯ ಮತದಾನದ ಸಹಿ ಸಂಗ್ರಹಣೆ ಮಾಡಲಾಯಿತು. ಬಳಿಕ ತಾಪಂ ಕಚೇರಿಯಿಂದ ಹುಲ್ಲಹಳ್ಳಿ ಸರ್ಕಲ್ ಮಾರ್ಗದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮತದಾನ ಜಾಗೃತಿ ಮೂಡಿಸಲಾಯಿತು.

ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ್, ತಾಲೂಕು ಯೋಜನಾಧಿಕಾರಿ ಆರ್. ಚಿತ್ರಾ, ವ್ಯವಸ್ಥಾಪಕ ಮಹದೇವನಾಯಕ, ತಾಲೂಕು ಎಂ.ಆರ್.ಡಬ್ಯೂ ರಂಗಸ್ವಾಮಿ ಮೊದಲಾದವರು ಇದ್ದರು.ಬೆಟ್ಟದಪುರದಲ್ಲಿ ಗ್ರಾಪಂನಿಂದ ಮತದಾನ ಜಾಗೃತಿ ಅಭಿಯಾನಕನ್ನಡಪ್ರಭ ವಾರ್ತೆ ಬೆಟ್ಟದಪುರಗ್ರಾಮದ ಗ್ರಾಪಂನಿಂದ ಮತದಾನ ಜಾಗೃತಿ ಅಭಿಯಾನ ನಡೆಯಿತು.ಗ್ರಾಮದ ಪ್ರತಿ ಬೀದಿಯಲ್ಲೂ ಸಹ ಗ್ರಾಪಂ ಪಿಡಿಒ ಮಂಜುನಾಥ್ ಅವರ ನೇತೃತ್ವದಲ್ಲಿ ಗ್ರಾಪಂ ನೌಕರರು ವಾಹನ ಮತ್ತು ಬೈಕ್‌ ಗಳ ಮೂಲಕ ಅಭಿಯಾನ ನಡೆಸಿ ಸಾರ್ವಜನಿಕರು ತಪ್ಪದೆ ಜಾಗೃತಿಯಿಂದ ಮತದಾನ ಮಾಡಿ, ಮತದಾನ ಪವಿತ್ರವಾದ ಹಕ್ಕು, ಅದನ್ನು ಯಾರು ವಂಚಿತರಾಗಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗ್ರಾಪಂ ನೌಕರರಾದ ಶ್ರೀನಿಧಿ, ದೀಪು, ಸುಬ್ರಹ್ಮಣ್ಯ, ಮುರುಗೇಶ್, ದೇವರಾಜು, ಮೈಲಾರಿ, ಕಾಂತರಾಜ್, ಮಹಾದೇವ್ ಇದ್ದರು.