ಕನ್ನಡಪ್ರಭ ವಾರ್ತೆ ನಾಗಮಂಗಲ

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಅಭಿನಯಿಸಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರದ ವಿಶೇಷ ಪ್ರದರ್ಶನವು ಪಟ್ಟಣದ ಶ್ರೀ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಶುಕ್ರವಾರ ಮಧ್ಯಾಹ್ನ ಬಹಳ ಅದ್ಧೂರಿಯಾಗಿ ನಡೆಯಿತು.

ಜು.31 ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರದ ಪ್ರೀಮಿಯರ್ ಶೋ ಪ್ರಯುಕ್ತ ಪಟ್ಟಣದ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಹಳೇ ಟೋಲ್‌ಗೇಟ್‌ನಿಂದ ಮಂಡ್ಯ ರಸ್ತೆಯ ವೆಂಕಟೇಶ್ವರ ಚಿತ್ರಮಂದಿರದವರೆಗೆ ಡೊಳ್ಳುಕುಣಿತದೊಂದಿಗೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಚಿತ್ರ ತಂಡದ ಕಲಾವಿದರು, ಸಿನಿಪ್ರಿಯರು ಹಾಗೂ ನೂರಾರು ಜನರು ಭಾಗವಹಿಸಿ ಚಿತ್ರಕ್ಕೆ ಶುಭ ಹಾರೈಸಿದರು.

ಈ ವೇಳೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲೀಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರ ನಿರ್ಮಿಸಲಾಗಿದೆ. ನಾಯಕ ನಟರಾಗಿ ಕುಮಾರ್ ಬಂಗಾರಪ್ಪ ಮತ್ತು ನಾಯಕಿಯಾಗಿ ರಾಗಿಣಿ ಅಭಿನಯಿಸಿರುವ ಈ ಚಿತ್ರದಲ್ಲಿ ನಾನೂ ಕೂಡ ಮುಖ್ಯಮಂತ್ರಿ ಪಾತ್ರವನ್ನು ಮಾಡಿದ್ದೇನೆ ಎಂದರು.

ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಅವರು ಹಲವು ವರ್ಷಗಳಿಂದ ಸಂಘದ ನೇತೃತ್ವ ವಹಿಸಿಕೊಂಡು ನ್ಯಾಯಬೆಲೆ ಅಂಗಡಿ ಮಾಲೀಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಮಾರ್ಗದರ್ಶನ, ಧೈರ್ಯ ಮತ್ತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ನ್ಯಾಯಬೆಲೆ ಅಂಗಡಿ ಮಾಲೀಕರ ಸಮಸ್ಯೆಗಳನ್ನು ಜನರ ಮುಂದಿಡುವ ಪ್ರಯತ್ನವಾಗಿ ಈ ಚಲನಚಿತ್ರ ನಿರ್ಮಾಣಗೊಂಡಿದೆ. ಟಿ.ಕೃಷ್ಣಪ್ಪರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಯಾವುದೇ ಅನ್ಯಾಯವಾಗದಂತೆ ಮುಂದೆಯೂ ಅವರ ಪರವಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.

ಚಿತ್ರದ ನಾಯಕಿ ರಾಗಿಣಿ ಮಾತನಾಡಿ, ಹೃದಯ ಶ್ರೀಮಂತಿಕೆ ಹೊಂದಿರುವ ಮಂಡ್ಯ ಜಿಲ್ಲೆಯ ಜನರಿಂದ ಕನ್ನಡ ಚಿತ್ರ ರಂಗಕ್ಕೆ ಹೆಚ್ಚು ಪ್ರೋತ್ಸಾಹ, ಬೆಂಬಲ ಪ್ರೀತಿ ಸಿಗುತ್ತಿದೆ. ಅಂಬರೀಷ್ ಅವರ ತವರು ಜಿಲ್ಲೆ ಇದು. ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರವು ಬಹಳ ಅದ್ಭುತವಾದ ಕಥಾಹಂದರವನ್ನು ಹೊಂದಿದೆ ಎಂದರು.

ನಾನು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಕೂಡ ಗ್ರಾಮೀಣ ಸೊಗಡಿನಲ್ಲಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವುದು ಬಹಳ ಖುಷಿ ತಂದಿದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಈ ಚಲನಚಿತ್ರ ವೀಕ್ಷಣೆ ಮಾಡಿ ಚಿತ್ರತಂಡವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಹಾಗೂ ಎಲ್.ಆರ್.ಶಿವರಾಮೇಗೌಡರ ಪುತ್ರ ಎಲ್.ಎಸ್.ಚೇತನ್‌ಗೌಡ ಮಾತನಾಡಿದರು. ಬಳಿಕ ಎಲ್ಲರೂ ಪ್ರೀಮಿಯರ್ ಶೋ ಚಿತ್ರವೀಕ್ಷಣೆ ಮಾಡಿದರು. ಚಿತ್ರ ನಿರ್ದೇಶಕ ಬಿ.ರಾಮಮೂರ್ತಿ, ನಿರ್ಮಾಪಕರಾದ ತೇಜು ಮೂರ್ತಿ ಮತ್ತು ಎಸ್.ಪದ್ಮಾವತಿ ಚಂದ್ರಶೇಖರ್, ಚೈತ್ರ, ಮುಖಂಡರಾದ ಟಿ.ಕೆ.ರಾಮೇಗೌಡ, ಬಿದರಕೆರೆ ಮಂಜೇಗೌಡ, ಚಿಣ್ಯ ಕರಿಯಣ್ಣ, ಹೇಮರಾಜ್ ಸೇರಿದಂತೆ ನೂರಾರು ಮಂದಿ ಅಭಿಮಾನಿಗಳು ಇದ್ದರು.