ಸಾರಾಂಶ
ಬೆಂಗಳೂರಿನ ರೈಸ್ ಬಯೋನಿಕ್ಸ್ ಸಂಸ್ಥೆಯ ಉಚಿತ ಸಾಧನ ಸಲಕರಣೆ ವಿತರಣೆ
ಲಕ್ಷ್ಮೇಶ್ವರ: ವಿಶೇಷ ಚೇತನ ಮಕ್ಕಳಿಗೆ ಅಕ್ಷರ ಕಲಿಸುವುದು ತುಂಬಾ ಸವಾಲಿನ ಕಾರ್ಯವಾಗಿದೆ. ಬುದ್ಧಿ ಮಾಂದ್ಯ ಮಕ್ಕಳು ದೇವರಿಗೆ ಸಮಾನರಾಗಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಶನಿವಾರ ಪಟ್ಟಣದ ಅರಳು ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆಯ ಅಂಗವಾಗಿ ವಿಶೇಷ ಚೇತನ ಮಕ್ಕಳಿಗೆ ಬೆಂಗಳೂರಿನ ರೈಸ್ ಬಯೋನಿಕ್ಸ್ ಸಂಸ್ಥೆಯ ಉಚಿತ ಸಾಧನ ಸಲಕರಣೆಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ವಿಶೇಷ ಚೇತನ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದು ಸುಲಭದ ಮಾತಲ್ಲ, ವಿಭಿನ್ನ ಮನೋಭಾವ ಹೊಂದಿರುವ ವಿಶೇಷ ಚೇತನ ಮಕ್ಕಳ ರಕ್ಷಣೆ ಮಾಡುವುದು, ಅವರ ಉಸ್ತುವಾರಿ ಮಾಡುವುದು ಸವಾಲಿನ ಕೆಲಸವಾಗಿದೆ. ವಿಶೇಷ ಚೇತನ ಮಕ್ಕಳು ವಿವಿಧ ರೀತಿಯ ಬೌದ್ಧಿಕ ಹಾಗೂ ಮಾನಸಿಕ ವಿಕಲಾಂಗರಾಗಿದ್ದು ಅಂತವರ ಕಾಳಜಿ ತೆಗೆದುಕೊಂಡು ಅಂತಹ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿರುವ ನಮ್ಮ ಪಟ್ಟಣದ ಅರಳು ವಿಶೇಷ ಚೇತನ ಆಡಳಿತ ಮಂಡಳಿಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ಈ ವೇಳೆ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿ, ಬುದ್ಧಿ ಇರುವವರಿಗೆ ಅಕ್ಷರ ಕಲಿಸುವುದು ಸಾಕಷ್ಟು ತೊಂದರೆದಾಯಕ ಕಾರ್ಯವಾಗಿರುವಾಗಿದೆ. ಇನ್ನೂ ಬುದ್ಧಿ ಮಾಂದ್ಯ ಮಕ್ಕಳಿಗೆ ಶಿಕ್ಷಣ ನೀಡಿ ಅವರಲ್ಲಿ ಜ್ಞಾನ ತುಂಬುವ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು. ಈ ವೇಳೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಮಂಜುನಾಥ ದಾಸಪ್ಪನವರ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕರು, ಗಣ್ಯರು ಇದ್ದರು.