ಸಾರಾಂಶ
ನರೇಗಲ್ಲ: ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದ್ದು. ಇಲ್ಲಿ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಎಲ್ಲಿ ಮಹಿಳೆಯರಿಗೆ ಗೌರವ ಇರುತ್ತದೆಯೋ ಅಲ್ಲಿ ದೇವತೆಗಳು ವಾಸವಿರುತ್ತಾರೆ ಎಂದು ರಂಭಾಪುರಿ ಶ್ರೀಮದ್ ಜಗದ್ಗುರುಗಳು ಹೇಳಿದರು.
ಅವರು ಸಮೀಪದ ಅಬ್ಬಿಗೇರಿ ಗ್ರಾಮದ ಹೊಸ ಹಿರೇಮಠದಲ್ಲಿ ಏಳನೇ ದಿನದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ಬಳಿಕ ಜಗದ್ಗುರುಗಳು ಆಶೀರ್ವಚನ ನೀಡಿದರು.ಯಾವುದೇ ಮನೆಯಲ್ಲಿ ಮಹಿಳೆ ನಗುನಗುತ್ತ ಇದ್ದರೆ ಆ ಮನೆ ಬಹಳಷ್ಟು ಆನಂದದಿಂದ ಇರುತ್ತದೆ. ಇದರಿಂದ ಗಂಡನ ಮನೆಗೂ ತವರು ಮನೆಗೂ ಒಳ್ಳೆಯದಾಗುತ್ತದೆ. ಅದಕ್ಕಾಗಿ ಮದುವೆಯಾಗಿ ಮನೆಗೆ ಬಂದ ಮಹಿಳೆಯನ್ನು ಗಂಡನ ಮನೆಯವರು ಚೆನ್ನಾಗಿ ನೋಡಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಚಿಕ್ಕಪುಟ್ಟ ವಿಚಾರಗಳಿಗೆ ಕುಟುಂಬಗಳು ಶಿಥಿಲವಾಗುವುದನ್ನು ಕಾಣುತ್ತಿದ್ದೇವೆ. ಗಂಡ-ಹೆಂಡಿರಿಬ್ಬರೂ ಸಂಸಾರವೆಂಬ ರಥದ ಎರಡು ಗಾಲಿಗಳು. ಎರಡೂ ಸಮನಾಗಿ ಚಲಿಸಿದಾಗ ಜೀವನವೆಂಬ ರಥ ಚೆನ್ನಾಗಿ ಓಡುತ್ತದೆ. ಅದಕ್ಕಾಗಿ ನೀವುಗಳು ನಿಮ್ಮ ಬಾಳು ಎಂದಿಗೂ ಶಿಥಿಲವಾಗದಂತೆ ನೋಡಿಕೊಳ್ಳಿ ಎಂದು ಜಗದ್ಗುರುಗಳು ಮಹಿಳೆಯರಿಗೆ ಕಿವಿ ಮಾತು ಹೇಳಿದರು.
ಧರ್ಮಾಚರಣೆ, ತ್ಯಾಗ, ಕಷ್ಟ ಸಹಿಷ್ಣತೆ, ಪ್ರಾಮಾಣಿಕತೆ ಎಂಬಿತ್ಯಾದಿ ಗುಣಗಳಿರುವುದರಿಂದಲೇ ಅವರನ್ನು ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತಿದೆ. ಆಧುನಿಕತೆಯ ಹೆಸರಿನಲ್ಲಿ ಇಂದಿನ ಮಹಿಳೆಯರು ಕುಂಕುಮ ಇಡುವದರ ಬದಲಿಗೆ ಟಿಕಳಿ ಇಡುತ್ತಿರುವುದು ವಿಷಾದನೀಯ ಎಂದು ತಿಳಿಸಿದ ಜಗದ್ಗುರುಗಳು, ನಿಮಗೆ ಅದೆಷ್ಟೇ ಕಷ್ಟವಾದರೂ ನೀವುಗಳು ಹಣೆಗೆ ಕುಂಕುಮ ಇಡುವುದನ್ನು ರೂಢಿಸಿಕೊಳ್ಳುವ ಪ್ರತಿಜ್ಞೆ ಮಾಡಿರಿ. ಅಂದರೆ ಅಬ್ಬಿಗೇರಿಯಲ್ಲಿ ದಸರಾ ಮಹೋತ್ಸವ ನೆರವೇರಿಸಿದ್ದು ಸಾರ್ಥಕವೆನ್ನಿಸುತ್ತದೆ ಜಗದ್ಗುರುಗಳು ತಿಳಿಸಿದರು.ನಮ್ಮ ಪಂಚ ಪೀಠಗಳಿವೆ. ಈ ಐದೂ ಪೀಠಗಳು ಎಂದಿಗೂ ಜನರ ಬದುಕು ಹಸನಾಗಿರಬೇಕು ಎಂಬುದನ್ನೇ ಬಯಸುತ್ತವೆ. ಪ್ರತಿಯೊಂದು ಪೀಠಕ್ಕೂ ಅದರದೇ ಆದ ಧ್ವಜವಿದೆ. ಪ್ರತಿ ಧ್ವಜದ ಬಣ್ಣವೂ ಒಂದೊಂದು ಸಂಕೇತ ಸೂಚಿಸುತ್ತವೆ. ಈ ಐದೂ ಬಣ್ಣಗಳ ಸಂಕೇತ ಒಳಗೊಂಡಿರುವ ಮಹಿಳೆಯೆ ಮುತ್ತೈದೆ ಎಂದು ಕರೆಯಿಸಿಕೊಳ್ಳುತ್ತಾಳೆ. ಪೀಠಗಳಿಗೆ ಮತ್ತು ಮಾತೆಯರಿಗೆ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು.