ಸಾರಾಂಶ
ಬೆಂಗಳೂರು : ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಯಂತ್ರಿಸಲು ಪ್ರತಿ ಜಿಲ್ಲೆಯಲ್ಲಿ ಒಂದು ವಿಶೇಷ ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಬೆಂಗಳೂರು ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಜಂಟಿಯಾಗಿ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ’ ಮತ್ತು ‘ಮಾಧ್ಯಮ: ಸಾಮಾಜಿಕ ಜಾಲತಾಣ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳು ಅತ್ಯಂತ ವೇಗವಾಗಿ ಮಾಹಿತಿಯನ್ನು ಜನರಿಗೆ ತಲುಪಿಸುತ್ತವೆ. ಆದರೆ, ಅಷ್ಟೇ ದುಷ್ಪರಿಣಾಮಗಳನ್ನು ಬೀರುತ್ತಿವೆ. ಜಾಲತಾಣದಲ್ಲಿ ಬರುವುದನ್ನು ಪರಾಮರ್ಶೆ ಮಾಡಬೇಕು. ಬಂದಿರುವ ಮಾಹಿತಿಯು ಸತ್ಯ ಸಂಗತಿಯೇ ಆಗಿದ್ದು, ಅದನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಸಮಾಜಕ್ಕೆ ತೊಂದರೆಯಾಗುತ್ತದೆ ಎಂಬ ಆತಂಕವನ್ನು ಮುಖ್ಯಮಂತ್ರಿಯವರು ವ್ಯಕ್ತಪಡಿಸಿದರು.
ಜಾಲತಾಣ, ತಂತ್ರಜ್ಞಾನವು ಸಮಾಜದ ಒಳಿತಿಗಾಗಿ ಬಳಕೆಯಾಗಬೇಕು. ಸಮಾಜವನ್ನು ಕೆಡಿಸಬಾರದು. ಅದಕ್ಕಾಗಿ ಮಾಧ್ಯಮಗಳು ಕೂಡ ಜಾಲತಾಣಗಳಲ್ಲಿ ಬರುವ ವಿಷಯಗಳನ್ನು ಫ್ಯಾಕ್ಟ್ ಚೆಕ್ ಮಾಡಬೇಕು. ಜಾಲತಾಣಗಳಲ್ಲಿ ಬರುವುದರ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್ ಮಾತನಾಡಿ, ಸುಳ್ಳು ಸುದ್ದಿ ಪತ್ತೆಗೆ ಕೇರಳ ಮಾದರಿಯಲ್ಲಿ ಪ್ರೌಢಶಾಲಾ ಹಂತದಲ್ಲೇ ಸುಳ್ಳು ಸುದ್ದಿ ಕುರಿತು ಜಾಗೃತಿ ಮೂಡಿಸುವ ಪಾಠವನ್ನು ಪರಿಚಯ ಮಾಡಬೇಕು. ಜಾಲತಾಣಗಳ ಅಬ್ಬರದಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿವೆ. ಹೀಗಾಗಿ, ಜಾಲತಾಣಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಸಾಮಾಜಿಕ ಕಳಕಳಿಯ ವಿಚಾರಗಳನ್ನು, ಸತ್ಯ ಸಂಗತಿಗಳನ್ನು ಜನರಿಗೆ ತಲುಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ವಾರ್ತಾ ಇಲಾಖೆ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಉಪಸ್ಥಿತರಿದ್ದರು.
ನನ್ನತ್ರ ಈಗ ಮೊಬೈಲೇ ಇಲ್ಲ: ಸಿಎಂ
ಸುಳ್ಳು ಸುದ್ದಿಗಳ ಕಾರಣಕ್ಕಾಗಿ ನಾನು ಜಾಲತಾಣಗಳನ್ನು ನೋಡುವುದನ್ನು ಬಿಟ್ಟಿದ್ದೇನೆ. ಸರ್ಕಾರದ ಕುರಿತಾಗಿ ಚರ್ಚಿಯಾಗುವ ಅಭಿಪ್ರಾಯಗಳ ಬಗ್ಗೆ ಮಗನೇ ನನಗೆ ತಿಳಿಸುತ್ತಾನೆ. ನಾನು ಮೊಬೈಲ್ ಫೋನ್ ಕೂಡ ಇಟ್ಟುಕೊಂಡಿಲ್ಲ. ಈ ಹಿಂದೆ 6 ತಿಂಗಳು ಕಾಲ ಮೊಬೈಲ್ ಫೋನ್ ಇಟ್ಟುಕೊಂಡಿದ್ದೆ. ಆದರೆ, ರಾತ್ರಿ ವೇಳೆಯೂ ಕರೆಗಳು ಬರುತ್ತಿದ್ದ ಕಾರಣ ನಿದ್ದೆ ಆಗುತ್ತಿರಲಿಲ್ಲ. ಹೀಗಾಗಿ, ಫೋನ್ ಬಳಸುವುದನ್ನು ನಿಲ್ಲಿಸಿದೆ. ಏನಿದ್ದರೂ ನನ್ನ ಸಿಬ್ಬಂದಿಯವರೇ ನನಗೆ ಮಾಹಿತಿ ನೀಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.