ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುದಕ್ಷಿಣ ಕಾಶಿ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಶ್ರೀ ಶ್ರೀಕಂಠೇಶ್ವರನ ಸನ್ನಿಧಿಗೆ ಬುಧವಾರ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರ ಸಾಗರವೇ ಹರಿದು ಬಂದಿತು.ಶಿವರಾತ್ರಿ ಪ್ರಯುಕ್ತ ದೇವರ ದರ್ಶನ ಹಾಗೂ ಜಾಗರಣೆ ಆಚರಿಸುವ ಸಲುವಾಗಿ ಮಂಗಳವಾರ ರಾತ್ರಿಯೆ ಪಟ್ಟಣಕ್ಕೆ ಬಂದು ದೇವಾಲಯದ ಕೈಸಾಲೆಗಳಲ್ಲಿ ರಾತ್ರಿ ಕಳೆದ ಭಕ್ತರು, ಮಹಾಶಿವರಾತ್ರಿಯ ಜಾಗರಣೆಯ ಪ್ರಯುಕ್ತ ರಾತ್ರಿಯಿಡೀ ಶಿವನಾಮ ಸ್ಮರಣೆ, ಜಾಗರಣೆ ಮಾಡುವ ಮೂಲಕ ಜನರು ಭಕ್ತಿ ಸಾಗರದಲ್ಲಿ ಮಿಂದೆದ್ದು ದೇವರ ಕೃಪೆಗೆ ಪಾತ್ರರಾದರು. ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಂತ ಭಕ್ತರುಬುಧವಾರ ಮುಂಜಾನೆ 4.30 ರಿಂದಲೇ ಕಪಿಲಾ ನದಿಯಲ್ಲಿ ಮಿಂದು ದೇವರ ದರ್ಶನಕ್ಕಾಗಿ ಸಾಲು ಗಟ್ಟಿ ನಿಂತಿದ್ದರು. ಮಹಾಶಿವರಾತ್ರಿ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬೆಳಗ್ಗೆ 5 ಕ್ಕೆ ಉಷಾಕಾಲದ ಪೂಜೆಯಲ್ಲಿ, ಕ್ಷೀರಾಭಿಷೇಕ, ಪದ್ಯಾಭಿಷೇಕ, ಫಲ ಪಂಚಾಮೃತಾಭಿಷೇಕ, ಮಾಹಾನ್ಯಾಸಕ ಪೂರ್ವಕವಾಗಿ ಏಕದಶಾವರ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಶಾಲ್ಯನ್ನ, ಮಹಾ ಮಂಗಳಾರತಿ ನೆರವೇರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ದೇವಾಲಯದ ಆವರಣದ ಮುಂಭಾಗದಲ್ಲಿ ಭಕ್ತರು ಉರುಳು ಸೇವೆ, ಧೂಪಸೇವೆ, ತಲಾಭಾರ ಸೇವೆಗಳನ್ನು ನೆರವೇರಿಸಿದರು. ಕಪಿಲಾ ನದಿಯಲ್ಲಿ ದೀಪಗಳನ್ನು ತೇಲಿ ಬಿಟ್ಟು ಹರ್ಷ ವ್ಯಕ್ತಪಡಿಸಿದರಲ್ಲದೆ, ದೇವರ ಹುಂಡಿಗೆ ಹರಕೆ ಬೆಳ್ಳಿ, ಚಿನ್ನದ ಪದಾರ್ಥಗಳನ್ನು ಹಾಕಿ ಹರಕೆ ತೀರಿಸಿ ಭಕ್ತಿ ಮೆರೆದರು. ನಂತರ ದೇಗುಲದಲ್ಲಿ ಪ್ರಾತಃಕಾಲ, ಸಂಗಮಕಾಲ, ಮದ್ಯಮಕಾಲದ ಪೂಜೆಗಳನ್ನು ನೆರವೇರಿಸಿದ ಬಳಿಕ ಸಂಜೆ 6ಕ್ಕೆ ಮೊದಲ ಜಾವದ ಪೂಜೆ, ರಾತ್ರಿ 9ಕ್ಕೆ 2 ನೇ ಜಾವದ ಪೂಜೆ, ರಾತ್ರಿ 12ಕ್ಕೆ 3 ನೇ ಜಾವದ ಪೂಜೆ ಮತ್ತು 3ಕ್ಕೆ 4 ನೇ ಜಾವದ ಪೂಜಾ ವಿಧಿಗಳು ಸಾಂಗೋಪವಾಗಿ ನಡೆದವು. ಪ್ರತಿ ಜಾವದ ಪೂಜೆಯಲ್ಲೂ ಕೂಡ ಕ್ಷೀರಾಭಿಷೇಕ, ಪದ್ಯಾಭಿಷೇಕ, ಫಲ ಪಂಚಾಮೃತಾಭಿಷೇಕ, ಮಾಹಾನ್ಯಾಸಕ ಪೂರ್ವಕವಾಗಿ ಏಕದಶಾವರ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಶಾಲ್ಯನ್ನ, ಮಹಾ ಮಂಗಳಾರತಿ ನೆರವೇರಿಸಲಾಯಿತು.ಬುಧವಾರ ಬೆಳಗ್ಗೆಯಿಂದ ಗುರುವಾರ ಮುಂಜಾನೆಯವರೆವಿಗೂ ದೇವಾಲಯದ ಬಾಗಿಲು ತೆರದಿದ್ದರಿಂದಾಗಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಭಕ್ತರು, ದೇವರ ದರ್ಶನ ಪಡೆದು ಶ್ರೀಕಂಠೇಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾಗಿ ಭಾವಪರವಶರಾದರು. ಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯದ ಒಳಾವರಣ, ಹೊರ ಆವರಣದ ಸುತ್ತ ಮುತ್ತ ವಿಶೇಷವಾದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಾಲಂಕಾರದಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ಶಿವರಾತ್ರಿ ಸಂಗೀತ ಜಾಗರಣೆದೇವಾಲಯದ ಮುಂಭಾಗದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಜಾಗರಣೆ ಪ್ರಯುಕ್ತ ಸರ್ಕಾರದ ವತಿಯಿಂದ ಶಿವರಾತ್ರಿ ಸಂಗೀತ ಜಾಗರಣೆ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ ನೀಡಿದರು. ಭಕ್ತಿ ಗೀತೆಗಳ ಗಾಯನ, ಶಿವನಾಮಸ್ಮರಣೆಯ ಭಕ್ತಿಗೀತೆಗಳು ಭಕ್ತರ ಮನಗೆದ್ದವು. ಅಲ್ಲದೆ ಭರತನಾಟ್ಯ, ಜಾನಪದ ಗೀತೆ, ನೃತ್ಯ ರೂಪಕ, ಸಂಗೀತ ಸಂಜೆ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಉಪಹಾರ, ಪ್ರಸಾದ ವ್ಯವಸ್ಥೆಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯದ ದಾಸೋಹ ಭವನದಲ್ಲಿ ಬೆಳಗ್ಗೆಯಿಂದ ರಾತ್ರಿ 11ರವರೆಗೂ ಉಪಹಾರ, ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ ಸೇವಾರ್ಥದಾರರು ಕೇಸರಿ ಬಾತ್, ಖಾರಾ ಬಾತ್ ಪ್ರಸಾದ ವಿನಿಯೋಗ ಮಾಡಿದರು.ಮುಂಜಾಗ್ರತಾ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ಪೊಲೀಸರು 250 ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇವಾಲಯಕ್ಕೆ 100 ರು. ವಿಶೇಷ ದರ್ಶನದ ಟಿಕೆಟ್ನಿಂದಲೇ ಸುಮಾರು ಲಕ್ಷಾಂತರ ರು ಆದಾಯ ಬಂದಿದೆ ಎಂದು ದೇವಾಲಯದ ಇಓ ಜಗದೀಶ್ ಪತ್ರಿಕೆಗೆ ಮಾಹಿತಿ ನೀಡಿದರು. ಮಹಾಶಿವರಾತ್ರಿ ಅಂಗವಾಗಿ ಶಾಸಕ ದರ್ಶನ್ ಧ್ರುವನಾರಾಯಣ್, ಸಂಸದ ಸುನಿಲ್ ಬೋಸ್ ದರ್ಶನ ಪಡೆದರು. 108 ಲಿಂಗಗಳ ಪ್ರತಿಷ್ಠಾಪನೆತಾಲೂಕಿನ ದೇವಿರಮ್ಮನಹಳ್ಳಿಯ ಶ್ರೀ ಶರಣ ಸಂಘಮ ಮಠದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ 108 ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿತ್ತು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸಿ ಲಿಂಗಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ವಿವಿಧೆಡೆ ವಿಶೇಷ ಪೂಜೆತಾಲೂಕಿನ ಚಿಕ್ಕಯ್ಯನಛತ್ರದ ಪ್ರಸನ್ನ ನಂಜುಂಡೇಶ್ವರ ದೇವಾಲಯ, ಕಾಶೀ ವಿಶ್ವನಾಥನ ಸನ್ನಿಧಿ, ಶಂಕರಮಠ, ಮಲ್ಲನಮೂಲೆ ಮಠ, ದೇವನೂರು ಮಠ, ಸುತ್ತೂರಿನ ಮಠಗಳಲ್ಲೂ ಕೂಡ ಶಿವರಾತ್ರಿ ಹಬ್ಬದ ಅಂಗವಾಗಿ ಜಾಗರಣೆ ಮತ್ತು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು. ಭಕ್ತರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಶಿವನ ಧ್ಯಾನ ಮಾಡಿ ದರ್ಶನ ಪಡೆದು ಪುನೀತರಾದರು.ಪಟ್ಟಣದ ಕಾಶಿ ವಿಶ್ವನಾಥ ದೇವಾಲಯ, ತಾಲೂಕಿನ ಸುತ್ತೂರು ಮಠದಲ್ಲೂ ಕೂಡ ಶಿವರಾತ್ರಿ ಜಾಗರಣೆಯ ಅಂಗವಾಗಿ ವಿಶೇಷ ಪೂಜೆ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ದಕ್ಷಿಣಕಾಶಿ ನಂಜನಗೂಡಿನ ಎಲ್ಲಾ ಶಿವ ದೇವಾಲಯಗಳಲ್ಲೂ ಕೂಡ ಭಕ್ತರು ದರ್ಶನ ಪಡೆಯುವ ಮೂಲಕ ಶಿವ ನಾಮಸ್ಮರಣೆಯಲ್ಲಿ ನಿರತರಾಗಿದ್ದರು. -------------