ವಿವಿಧ ಈಶ್ವರ ದೇಗುಲಗಳಲ್ಲಿ ವಿಶೇಷ ಪೂಜೆ

| Published : Mar 09 2024, 01:35 AM IST

ಸಾರಾಂಶ

ಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ವಿವಿಧ ಈಶ್ವರ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಿತು.

ಶಿವರಾತ್ರಿ ಹಬ್ಬದ ಪ್ರಯುಕ್ತ ರುದ್ರಾಭಿಷೇಕ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ವಿವಿಧ ಈಶ್ವರ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಿತು.

ಪಟ್ಟಣದ ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ,ವಿಶೇಷ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಅಗ್ರಹಾರದ ಲಲಿತ ಭಜನಾ ಮಂಡಳಿಯವರಿಂದ ಶಿವ ಅಷ್ಟೋತ್ತರ ಹಾಗೂ ಸಂಜೆ ಭಜನೆ ನೆರವೇರಿತು.

ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ಪಟ್ಟಣದ ಹಳೇ ಮಂಡಗದ್ದೆ ಸರ್ಕಲ್ ನ ಬಾಳೆಹೊನ್ನೂರು ರಂಭಾಪುರಿ ಮಠದ ಈಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ ನಡೆಯಿತು. ಶಿವನಿಗೆ ವಿಶೇಷವಾಗಿ ಕಾಶಿ ವಿಶ್ವನಾಥನ ಮುಖವಾಡ ಹಾಕಿ ಅಲಂಕಾರ ಮಾಡಲಾಗಿತ್ತು. ಈಶ್ವರ ದೇವಸ್ಥಾನದಿಂದ ಬಸ್ಸು ನಿಲ್ದಾಣದವರೆಗೆ ವಿದ್ಯುತ್‌ ದೀಪದ ಅಲಂಕಾರ ಗಮನ ಸೆಳೆಯಿತು. ಪ್ರಧಾನ ಅರ್ಚಕ ಎಂ.ಸಿ.ಗುರುಶಾಂತಪ್ಪ ಪೂಜಾ ಕಾರ್ಯ ನಡೆಸಿಕೊಟ್ಟರು. ಕಲಾ ಮತ್ತು ಸುರಭಿ ಯುವಕ ಸಂಘದ ಪದಾಧಿಕಾರಿಗಳಾದ ಎನ್‌.ಎಂ.ಕಾರ್ತಿಕ್, ವೈ.ಎಸ್‌.ರವಿ, ಮಂಜುನಾಥ್ ಲಾಡ್‌, ಸುರಭಿ ರಾಜೇಂದ್ರ, ಡಿ.ಜಿ.ಕುಮಾರ್‌, ಪವನ್‌ ಮುಂತಾದವರು ಪಾನಕ, ಪ್ರಸಾದದ ವ್ಯವಸ್ಥೆ ನಡೆಸಿಕೊಟ್ಟರು. ಬೆಳಿಗ್ಗೆಯಿಂದಲೇ ನೂರಾರು ಭಕ್ತರು ಆಗಮಿಸಿ ಹಣ್ಣು, ಕಾಯಿ ಮಾಡಿಸಿ ಪೂಜೆ ಸಲ್ಲಿಸಿದರು. ಕುದುರೆಗುಂಡಿ ಅಶ್ವ ಗುಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶತರುದ್ರಾಭಿಷೇಕ, ಮಹಾ ಪೂಜೆ, ಗಾಯಿತ್ರಿ ವಿಪ್ರ ಮಹಿಳಾ ಬಳಗದವರಿಂದ ಭಜನೆ, ಸಂಜೆ ಕಲ್ಪೋಕ್ತ ಪೂಜೆ ನಡೆಯಿತು. ಶನಿವಾರ ರುದ್ರಹೋಮ, ಗಣಹೋಮ,ಏಕದಶ ವಾರ ರುದ್ರಾಭಿ ಷೇಕ, ಮಹಾ ಪೂಜೆ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಲಿದೆ. ಹಳೇ ಮಂಡಗದ್ದೆ ಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕಾನೂರು ಗ್ರಾಮದ ಹಂತುವಾನಿಯ ಮಲ್ಲಿ ಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಶೆಟ್ಟಿಕೊಪ್ಪ ಸಮೀಪದ ಮಳಲಿ ಈಶ್ವರ ದೇವಸ್ಥಾನ, ಅರಸಿನಗೆರೆಯ ಈಶ್ವರ ದೇವಸ್ಥಾನ, ಮುತ್ತಿನಕೊಪ್ಪದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲೂ ಸಹ ವಿಶೇಷ ಪೂಜೆ ನಡೆಯಿತು.