ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಹೊಸ ವರ್ಷದ ಹಿನ್ನೆಲೆಯಲ್ಲಿ ಬುಧವಾರ ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಪ್ರಮುಖವಾಗಿ ವಿಜಯನಗರದ ಯೋಗನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಲಕ್ಷಾಂತರ ಲಾಡು ವಿತರಿಸಲಾಯಿತು.ಮೈಸೂರಿನ ಚಾಮುಂಡಿಬೆಟ್ಟಕ್ಕೆ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸಿ, ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದರು. ಮುಂಜಾನೆಯಿಂದಲೇ ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ವಾಹನಗಳ ನಿಲುಗಡೆಗೆ ತೊಂದರೆ ಆಯಿತು. ದೇವಸ್ಥಾನದ ವಾಹನ ನಿಲುಗಡೆ ಸ್ಥಳ ತುಂಬಿದ್ದರಿಂದ ದೇವಿಕೆರೆ ಮಾರ್ಗದ ಬಳಿಯಲ್ಲೇ ಅನೇಕರು ತಮ್ಮ ವಾಹನಗಳನ್ನು ನಿಲಲಿಸಿ ದೇವಸ್ಥಾನ ತಲುಪಿದರು. ವಾಹನಗಳ ನಿಲುಗಡೆ ಮತ್ತು ಸಾರ್ವಜನಿಕರ ದರ್ಶನಕ್ಕೆ ಅನುಕೂಲ ಕಲ್ಪಿಸಲು ಪೊಲೀಸರು ನೆರವಾದರು.ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು. ಮೈಸೂರು ಊಟಿ, ಕೇರಳ ಮುಂತಾದ ಕಡೆಯಿಂದ ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ಯೋಗನರಸಿಂಹಸ್ವಾಮಿ ದೇವಸ್ಥಾನವಿಜಯನಗರದ ಯೋಗನರಸಿಂಹಸ್ವಾಮಿ ದೇವಾಲಯದಲ್ಲಿ ತಿರುಪತಿ ಮಾದರಿಯ 2 ಲಕ್ಷ ಲಾಡನ್ನು ಭಕ್ತರಿಗೆ ವಿತರಿಸಲಾಯಿತು.ದೇವಸ್ಥಾನದಲ್ಲಿ 2025ರ ಹೊಸ ವರ್ಷದ ಅಂಗವಾಗಿ ಬುಧವಾರ ವಿಶೇಷ ಪೂಜೆ ಮತ್ತು ಲಡ್ಡು, ಪುಳಿಯೋಗರೆ ವಿತರಿಸಲಾಯಿತು. ಮುಂಜಾನೆ ನಾಲ್ಕು ಗಂಟೆಯಿಂದಲೇ ದೇವರಿಗೆ ತೋಮಾಲೆ, ಸ್ವರ್ಣಪುಷ್ಪದಿಂದ ಸ್ವಾಮಿಗೆ ಸಹಸ್ರನಾಮಾರ್ಚನೆ, ದೇವಾಲಯದ ಉತ್ಸವ ಮೂರ್ತಿಗೆ ಶ್ರೀಮಲುಂಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮೀಗೆ ಏಕಾದಶ ಪ್ರಾಕಾರೋತ್ಸವ ನೆರವೇರಿಸಿ, 50 ಕ್ವಿಂಟಲ್ ಪುಳಿಯೋಗರೆ ನಿವೇದಿಸಲಾಯಿತು.ಬಳಿಕ ದಿನವಿಡೀ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ತಿರುಪತಿ ಮಾದರಿಯಲ್ಲಿ ತಯಾರಿಸಿದ್ದ ಎರಡು ಲಕ್ಷ ಲಡ್ಡುಗಳನ್ನು ವಿತರಿಸಲಾಯಿತು. ದೇವಸ್ಥಾನದ ಸಂಸ್ಥಾಪಕ ಪ್ರೊ. ಭಾಷ್ಯಂ ಸ್ವಾಮೀಜಿ, ವ್ಯವಸ್ಥಾಪಕ ಎನ್. ಶ್ರೀನಿವಾಸನ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ ದೇವರ ದರ್ಶನ ಪಡೆದ ಭಕ್ತರಿಗೆ ಪ್ರಸಾದ ವಿತರಿಸಿದರು.ಅಂತೆಯೇ ನನಗರದ ನಾನಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಭಕ್ತರು ತಮ್ಮ ಮನೆಯ ಸಮೀಸ್ಥಳೀಯವಾಗಿ ಇರುವ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು. ವಿಶ್ವೇಶ್ವರನಗರ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಜೆ.ಪಿ. ನಗರದ ಗಣಪತಿ ದೇವಸ್ಥಾನ, ಗಾಯತ್ರಿ ದೇವಸ್ಥಾನ, ಸುಣ್ಣದಕೇರಿ ಮಹದೇಶ್ವರಸ್ವಾಮಿ ದೇವಸ್ಥಾನ, ಅಗ್ರಹಾರದ 101 ಗಣಪತಿ ದೇವಸ್ಥಾನ, ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ, ಸಿದ್ಧಾರ್ಥನಗರದ ಗಣಪತಿ ದೇವಸ್ಥಾನ, ಒಂಟಿಕೊಪ್ಪಲು ವೆಂಕಟರಮಣಸ್ವಾಮಿ ದೇವಸ್ಥಾನ, ನಾರಾಯಣಶಾಸ್ತ್ರಿ ರಸ್ತೆಯ ರಾಘವೇಂದ್ರ ಮಠ, ಶ್ರೀರಾಂಪುರದ ಶಿವದೇವಾಲಯ, ಮಂಚೇಗೌಡನಕೊಪ್ಪಲು ಮಹದೇಶ್ವರ ದೇವಸ್ಥಾನ ಸೇರಿ ಅನೇಕಾರು ದೇವಸ್ಥಾನದಲ್ಲಿ ಭಕ್ತರು ಜಮಾಯಿಸಿ ದರ್ಶನ ಪಡೆದರು.ಬೆಳಗಿನ ಜಾವದ ಚಳಿಯನ್ನೂ ಲೆಕ್ಕಿಸದೆ ನಗರದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದರು. ದೇವರಿಗೆ ಪೂಜೆ ಸಲ್ಲಿಸಿ ದರ್ಶನಕ್ಕೆ ಅವಕಾಶ ಮಾಡಿಕೊಡುವ ಮುನ್ನ ನಗರ, ಹೊರಗಿನಿಂದ ಬರತೊಡಗಿದ ಭಕ್ತರು ಸಾಲಾಗಿ ನಿಂತು ದರ್ಶನ ಪಡೆದು, ಲಡ್ಡು ಪಡೆದುಕೊಂಡರು. ಸ್ವಯಂ ಸೇವಕರು, ಪೊಲೀಸರ ತಂಡವೇ ಮುಂಜಾನೆಯಿಂದ ಬಹುರಾತ್ರಿವರೆಗೆ ನಿಂತು ದರ್ಶನ ಪಡೆದ ಭಕ್ತರಿಗೆ ಲಡ್ಡು ವಿತರಿಸುವ ಕೆಲಸ ಮಾಡಿದರು.ಮಧ್ಯಾಹ್ನದ ಹೊತ್ತಿಗೆ ಐದು ನೂರು ಮೀಟರ್ ತನಕ ನಾಲ್ಕು ಸಾಲುಗಳಲ್ಲಿ ಬಿಸಿಲಲ್ಲೇ ನಿಂತು ದರ್ಶನ ಪಡೆದರು. ಈ ಬಾರಿ ಸಾಲಾಗಿ ಹೋಗಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು.