ಸಾರಾಂಶ
ಹೊಳೆನರಸೀಪುರ ಪಟ್ಟಣದ ಕೋಟೆ ಶ್ರೀ ಚತುರ್ಭುಜ ಪಟ್ಟಾಭಿರಾಮ ದೇವಾಲಯ, ಶ್ರೀ ರಘುಪತಿ ದೇವಾಲಯ, ದೇವಾಂಗ ಬಡಾವಣೆಯ ಶ್ರೀ ರಾಮಮಂದಿರ, ಆರ್‍ಯ ಈಡಿಗರ ಶ್ರೀ ರಾಮಮಂದಿರ, ಕುರುಹಿನಶೆಟ್ಟಿ ಶ್ರೀ ರಾಮಮಂದಿರ, ಹಾಗೂ ಶ್ರೀ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು. ಸೀತಾ, ರಾಮ, ಲಕ್ಷ್ಮಣ ಹಾಗೂ ಶ್ರೀ ಆಂಜನೇಯಸ್ವಾಮಿಯ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಾಡಲಾಗಿತ್ತು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಕೋಟೆ ಶ್ರೀ ಚತುರ್ಭುಜ ಪಟ್ಟಾಭಿರಾಮ ದೇವಾಲಯ, ಶ್ರೀ ರಘುಪತಿ ದೇವಾಲಯ, ದೇವಾಂಗ ಬಡಾವಣೆಯ ಶ್ರೀ ರಾಮಮಂದಿರ, ಆರ್‍ಯ ಈಡಿಗರ ಶ್ರೀ ರಾಮಮಂದಿರ, ಕುರುಹಿನಶೆಟ್ಟಿ ಶ್ರೀ ರಾಮಮಂದಿರ, ಹಾಗೂ ಶ್ರೀ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.ಜತೆಗೆ ಭಕ್ತರು ಕೂಗಿದ ಜೈ ಶ್ರೀರಾಮ್ ಶ್ರೀ ರಾಮನ ಜಯಘೋಷ ಮುಗಿಲು ಮುಟ್ಟಿತ್ತು. ಭಾನುವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ರಾಮನ ದೇವಾಲಯಗಳಲ್ಲಿ ಶ್ರೀ ಸೀತಾ, ರಾಮ, ಲಕ್ಷ್ಮಣ ಹಾಗೂ ಶ್ರೀ ಆಂಜನೇಯಸ್ವಾಮಿಯ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಶ್ರೀ ರಾಮದೇವರಿಗೆ ಪ್ರಿಯವಾದ ಪಾನಕ, ಕೋಸಂಬರಿ ಮತ್ತು ಪ್ರಸಾದದ ನೈವೇದ್ಯ ಅರ್ಪಿಸಲಾಯಿತು. ನಂತರ ತಧಿ ಆರಾಧನೆ ಸೇವೆ, ಸಹಸ್ರ ನಾಮಾರ್ಚನೆ, ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ಮಂಗಳಾರತಿ, ತೀರ್ಥ ಪ್ರಸಾದ ಜತೆಯಲ್ಲಿ ಪಾನಕ, ಕೋಸಂಬರಿ ಹಾಗೂ ಪ್ರಸಾದ ವಿತರಿಸಲಾಯಿತು.
ಮಹಾತ್ಮಗಾಂಧಿ ವೃತ್ತದ ಸಮೀಪವಿರುವ ಪುರಸಭೆ ಮುಂಭಾಗದಲ್ಲಿ ವಿಜೃಂಭಣೆಯಿಂದ ಹನುಮ ಜಯಂತಿ ಆಚರಿಸಿ, ಪ್ರಥಮ ಭಾರಿಗೆ ಭಕ್ತರ ಮನದಲ್ಲಿ ಶಾಶ್ವತವಾಗಿ ಜಯಂತ್ಯುತ್ಸವದ ನೆನಪು ಉಳಿಯುವಂತೆ ಮಾಡಿದ ಹನುಮ ಜಯಂತಿ ಆಚರಣಾ ಸೇವಾ ಸಮಿತಿ ವತಿಯಿಂದ ಬೆಳಗ್ಗೆಯಿಂದ ಸಂಜೆ ತನಕ ಶ್ರೀ ರಾಮನ ಭಕ್ತರಿಗೆ ಕೋಸಂಬರಿ ಮಜ್ಜಿಗೆ ವಿತರಿಸಿದರು.