ರಾಮ ನವಮಿ: ಬಾಗೂರಿನ ಹೆಬ್ಬಾಗಿಲು ಆಂಜನೇಯನಿಗೆ ವಿಶೇಷ ಪೂಜೆ

| Published : Apr 20 2024, 01:00 AM IST

ಸಾರಾಂಶ

ಬಾಗೂರು ಗ್ರಾಮದ ಶ್ರೀರಾಮದೂತ ಯುವಕ ಸಂಘದ ವತಿಯಿಂದ 8ನೇ ವರ್ಷದ ಶ್ರೀ ರಾಮನವಮಿ ಅಂಗವಾಗಿ ಪುರಾಣ ಪ್ರಸಿದ್ಧ ಶ್ರೀ ಹೆಬ್ಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀರಾಮದೂತ ಯುವಕ ಸಂಘದಿಂದ 8ನೇ ವರ್ಷದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬಾಗೂರು

ಗ್ರಾಮದ ಶ್ರೀರಾಮದೂತ ಯುವಕ ಸಂಘದ ವತಿಯಿಂದ 8ನೇ ವರ್ಷದ ಶ್ರೀ ರಾಮನವಮಿ ಅಂಗವಾಗಿ ಪುರಾಣ ಪ್ರಸಿದ್ಧ ಶ್ರೀ ಹೆಬ್ಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀ ರಾಮನವಮಿ ಅಂಗವಾಗಿ ಬುಧವಾರ ರಾತ್ರಿ ಶ್ರೀ ಹೆಬ್ಬಾಗಿಲು ಆಂಜನೇಯ ಸ್ವಾಮಿ ದೇವಾಲಯ ಹಾಗೂ ಗ್ರಾಮ ದೇವತೆ ಶ್ರೀ ಸಂತೆಕಾಳೇಶ್ವರ ದೇವರಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳು ನಡೆದವು. ಗ್ರಾಮದ ಶ್ರೀ ರಾಮದೂತ ಯುವಕ ಸಂಘದ ವತಿಯಿಂದ ಸುಮಾರು 2000ಕ್ಕೂ ಹೆಚ್ಚು ಭಕ್ತರಿಗೆ ಬೃಹತ್ ಅನ್ನಸಂತರ್ಪಣೆ ಬುಧವಾರ ರಾತ್ರಿ ಶ್ರೀ ರಾಮನವಮಿ ಅಂಗವಾಗಿ ಏರ್ಪಡಿಸಲಾಗಿತ್ತು. ಗ್ರಾಮದ ರಾಜಬೀದಿಗಳಲ್ಲಿ ಗ್ರಾಮ ದೇವತೆ ಶ್ರೀ ಸಂತೆಕಾಳೇಶ್ವರಿ ದೇವರ ಉತ್ಸವವನ್ನು ಗುರುವಾರ ನಡೆಸಲಾಯಿತು. ದೇವರ ಉತ್ಸವದೊಂದಿಗೆ ಗೊಂಬೆ ಕುಣಿತ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಭದ್ರಕಾಳಿ ಕುಣಿತ, ನಾಸಿಕ್ ಡೋಲ್ ವಾದ್ಯ ಜನರನ್ನು ಹೆಚ್ಚು ಆಕರ್ಷಿಸಿತು. ರಾಮ ನವಮಿ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆಗಳು ವಿದ್ಯುತ್ ದೀಪದ ಅಲಂಕಾರದಿಂದ ಕಂಗೊಳಿಸುತ್ತಿತ್ತು.

ಸಂಘದ ಅಧ್ಯಕ್ಷ ಕೇಶವೇ ಗೌಡ, ಕಾರ್ಯದರ್ಶಿ ಲೋಕೇಶ್, ಖಜಾಂಚಿ ರಂಗಸ್ವಾಮಿ, ಸಂಘದ ಪ್ರಮುಖರಾದ ನವೀನ್, ಮುಖಂಡರಾದ ಬಾಗೂರು ಶಿವಣ್ಣ, ಸ್ಟುಡಿಯೋ ರಘು, ಚಂದ್ರೇಗೌಡ, ಮಲ್ಲೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯ ಶಂಕರ್, ಮನು, ಸೇರಿದಂತೆ ಶ್ರೀ ರಾಮದೂತ ಯುವಕ ಸಂಘದ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಬಾಗೂರು ಗ್ರಾಮದ ಶ್ರೀರಾಮ ದೂತ ಯುವಕ ಸಂಘದ ವತಿಯಿಂದ 8ನೇ ವರ್ಷದ ಶ್ರೀ ರಾಮ ನವಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.